Pabbar Movie : ‘ಪಬ್ಬಾರ್’ ಚಿತ್ರದಲ್ಲಿ ʻಬಳೆಗಾರ’ನಾಗಿ ಶಿವಣ್ಣ; ‘ಲಾಲಿ ಹಾಡು’ ಬಿಡುಗಡೆ
Pabbar Movie : ‘ಶಾಖಾಹಾರಿ’ ಖ್ಯಾತಿಯ ನಿರ್ದೇಶಕ ಸಂದೀಪ್ ಸುಂಕದ್ ಆ್ಯಕ್ಷನ್-ಕಟ್ ಹೇಳಿರುವ, ಧೀರೇನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಿಸಿರುವ ಈ ಸಿನಿಮಾದ ‘ಲಾಲಿ ಹಾಡು ಮಮತೆ ಜಾಡು ತವರ ಗೂಡಲಿ ಸೇರಾಯ್ತು’ ಎಂಬ ವಿಶೇಷ ಗೀತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ‘ಭಾಗ್ಯದ ಬಳೆಗಾರ’ನಾಗಿ ಕಾಣಿಸಿಕೊಂಡು ಹೆಜ್ಜೆ ಹಾಕಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಪಬ್ಬಾರ್ ಸಿನಿಮಾ -
‘ಶಾಖಾಹಾರಿ’ ಖ್ಯಾತಿಯ ನಿರ್ದೇಶಕ ಸಂದೀಪ್ ಸುಂಕದ್ ಆ್ಯಕ್ಷನ್-ಕಟ್ ಹೇಳಿರುವ, ಧೀರೇನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ (Pabbar Movie) ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಗೀತಾ ಪಿಕ್ಚರ್ಸ್’ (Geetha Pictures) ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಿಸಿರುವ ಈ ಸಿನಿಮಾದ ‘ಲಾಲಿ ಹಾಡು ಮಮತೆ ಜಾಡು ತವರ ಗೂಡಲಿ ಸೇರಾಯ್ತು’ ಎಂಬ ವಿಶೇಷ ಗೀತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ‘ಭಾಗ್ಯದ ಬಳೆಗಾರ’ನಾಗಿ (Balegaara) ಕಾಣಿಸಿಕೊಂಡು ಹೆಜ್ಜೆ ಹಾಕಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅನುರಾಗ್ ಕುಲಕರ್ಣಿ ಮತ್ತು ಮೇಘನಾ ಹಳಿಯಾಳ್ ಅವರ ಮಧುರ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿಗೆ ಮಯೂರ್ ಅಂಬೆಕಲ್ಲು ಇಂಪಾದ ಸಂಗೀತ ಸಂಯೋಜಿಸಿದ್ದಾರೆ.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಿವರಾಜ್ಕುಮಾರ್, "ಸಿನಿಮಾ ಮೇಕಿಂಗ್ನಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು. ವಿಶೇಷವಾಗಿ ಊಟದ ವಿಷಯ ಸೇರಿದಂತೆ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಗೀತಾ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ. ‘ಪಬ್ಬಾರ್’ ಕಥೆ ತುಂಬಾ ಸೂಕ್ಷ್ಮವಾಗಿದ್ದು, ಇಂದಿನ ಕಾಲದ ಅತಿಯಾದ ಗ್ಲಾಮರ್ ನಡುವೆ ಇಂತಹ ಸಹಜ ಸಿನಿಮಾ ಮಾಡಿರುವುದು ಖುಷಿ ತಂದಿದೆ. ಧೀರೇನ್ ಮತ್ತು ಅಮೃತಾ ಪ್ರೇಮ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. 'ಬಳೆಗಾರ' ಹಾಡಿನ ವಿಷಯ ಬಂದಾಗ ನಿರ್ದೇಶಕರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದೆಂದು ನಾನು ಸುಮ್ಮನಿದ್ದೆ, ಆದರೆ ಸಂದೀಪ್ ಅವರೇ ಬಂದು ನನ್ನನ್ನು ಕೇಳಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡೆ. ಡಿಸೆಂಬರ್ 11ರಂದು ಈ ಚಿತ್ರ ಬಿಡುಗಡೆಯಾಗುತ್ತಿದ್ದು, ‘ಪಬ್ಬಾರ್’ ಖಂಡಿತವಾಗಿಯೂ ಪ್ರೇಕ್ಷಕರಿಗೆ ಒಂದೊಳ್ಳೆಯ ಅನುಭವ ನೀಡಲಿದೆ" ಎಂದು ಹಾರೈಸಿದರು.
ಇದನ್ನೂ ಓದಿ: Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಮಾತನಾಡಿ, "ಈ ಹಾಡು ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ನಿರ್ದೇಶಕ ಸಂದೀಪ್ ಮತ್ತು ಧೀರೇನ್ ಬಂದು ಕಥೆ ಹೇಳಿದಾಗಲೇ ನಮಗೆ ತುಂಬಾ ಇಷ್ಟವಾಗಿ ‘ಗೀತಾ ಪಿಕ್ಚರ್ಸ್’ ಮೂಲಕ ನಿರ್ಮಿಸಲು ಮುಂದಾದೆವು. ಉತ್ತರ ಭಾರತದ ಸೊನ್ನೆ ಡಿಗ್ರಿ ಕೊರೆಯುವ ಚಳಿಯಲ್ಲಿ ಧೀರೇನ್, ಅಮೃತಾ ಸೇರಿದಂತೆ ಇಡೀ ತಂತ್ರಜ್ಞರ ಮತ್ತು ಪ್ರೊಡಕ್ಷನ್ ತಂಡದ ಶ್ರಮ ಅಪಾರವಾಗಿದೆ" ಎಂದು ಚಿತ್ರತಂಡದ ಪರಿಶ್ರಮವನ್ನು ಶ್ಲಾಘಿಸಿದರು.
ನಾಯಕ ನಟ ಧೀರೇನ್ ಭಾವುಕರಾಗಿ ಮಾತನಾಡುತ್ತಾ, "ನನ್ನ ದೊಡ್ಡ ಮಾಮ ಶಿವಣ್ಣ ಮತ್ತು ಗೀತಾ ಆಂಟಿ ನನ್ನ ಪಾಲಿಗೆ ತಾತಾ-ಅಜ್ಜಿಯವರ ಸ್ಥಾನದಲ್ಲಿದ್ದಾರೆ. ಅನೇಕ ಕಡೆ ಅವಕಾಶಗಳಿಗಾಗಿ ಅಲೆದಾಡುತ್ತಿದ್ದ ನನಗೆ ನನ್ನ ಅಜ್ಜಿಯ ಹುಟ್ಟುಹಬ್ಬದ ದಿನದಂದೇ ಈ ಸಿನಿಮಾ ಘೋಷಿಸುವ ಮೂಲಕ ದೊಡ್ಡ ಕನಸನ್ನು ನನಸು ಮಾಡಿದರು. ನನ್ನ ಕುಟುಂಬದ ದೊಡ್ಡ ಹೆಸರಿನ ಆಚೆಗೆ ನನ್ನದೇ ಆದ ಅಸ್ತಿತ್ವವನ್ನು ಹುಡುಕಿಕೊಳ್ಳುವ ಸೂಕ್ಷ್ಮ ಪಾತ್ರ ಇದಾಗಿದ್ದು, ಇದಕ್ಕಾಗಿ ನನ್ನ ತೂಕವನ್ನು 75 ಕೆಜಿಯಿಂದ 63 ಕೆಜಿಗೆ ಇಳಿಸಿಕೊಂಡೆ. ಹಿಮಾಚಲ ಪ್ರದೇಶದ ಕಿನ್ನೌರ್ನಂತಹ ಅತ್ಯಂತ ಕಠಿಣ ಚಳಿಯ ಪ್ರದೇಶಗಳಿಂದ ಹಿಡಿದು 45 ಡಿಗ್ರಿ ಬಿಸಿಲಿನ ವಾರಣಾಸಿ, ಜೈಪುರ ಹಾಗೂ ಕೂರ್ಗ್, ಮೈಸೂರು, ಕಾಸರಗೋಡಿನವರೆಗೆ ಒಂದೂವರೆ ವರ್ಷಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ" ಎಂದು ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡರು.
ನಾಯಕಿ ಅಮೃತಾ ಪ್ರೇಮ್ ತಮ್ಮ ಸಂತಸ ಹಂಚಿಕೊಂಡು, "ನಾನು ಶಾಲಾ ವಾರ್ಷಿಕೋತ್ಸವದಲ್ಲಿ 'ಭಾಗ್ಯದ ಬಳೆಗಾರ' ಹಾಡಿಗೆ ನೃತ್ಯ ಮಾಡಿದ್ದೆ. ಈಗ ಅದೇ ರೀತಿಯ ಹಾಡಿನಲ್ಲಿ ಸ್ವತಃ ಶಿವಣ್ಣ ಸರ್ ಜೊತೆ ತೆರೆ ಹಂಚಿಕೊಂಡಿರುವುದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣ. ಆರಂಭದಲ್ಲಿ ಅವರ ಎನರ್ಜಿಗೆ ತಕ್ಕಂತೆ ನಟಿಸುವ ಬಗ್ಗೆ ಭಯವಿತ್ತು, ಆದರೆ ಶಿವಣ್ಣ ಅವರು ನನ್ನನ್ನು ತುಂಬಾ ಆರಾಮದಾಯಕವಾಗಿ ಇರುವಂತೆ ನೋಡಿಕೊಂಡರು" ಎಂದು ಧನ್ಯವಾದ ಅರ್ಪಿಸಿದರು.
ನಿರ್ದೇಶಕ ಸಂದೀಪ್ ಸುಂಕದ್ ಚಿತ್ರದ ವ್ಯಾಪ್ತಿಯ ಬಗ್ಗೆ ವಿವರಿಸುತ್ತಾ, "ಶಾಖಾಹಾರಿ ಸಿನಿಮಾವನ್ನು ಕೇವಲ ಒಂದು ಊರಿನ 10 ಲೊಕೇಶನ್ಗಳಲ್ಲಿ ಚಿತ್ರೀಕರಿಸಿದ್ದೆವು. ಆದರೆ ‘ಪಬ್ಬಾರ್’ ಕಥೆಯ ವಿಸ್ತಾರ ದೊಡ್ಡದಿರುವುದರಿಂದ 14 ಜಿಲ್ಲೆಗಳ ಸುಮಾರು 165 ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶಿವಣ್ಣ ಅವರ ‘ಬಳೆಗಾರ’ ಹಾಡು ಚಿತ್ರದ ವೇಗಕ್ಕೆ ಪೂರಕವಾಗಿ, ಕಥೆಗೆ ಹೊಸ ತಿರುವು ನೀಡುವ ಘಟ್ಟದಲ್ಲಿ ಬರುತ್ತದೆ.
ಇದನ್ನೂ ಓದಿ: Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್
'ಶಾಖಾಹಾರಿ'ಯನ್ನು ಒಟಿಟಿಯಲ್ಲಿ ಕೋಟ್ಯಂತರ ಜನರು ನೋಡಿ ಮೆಚ್ಚಿಕೊಂಡಿದ್ದೀರಿ, ಆದರೆ ಥಿಯೇಟರ್ನಲ್ಲಿ ಹೆಚ್ಚಿನ ಜನರಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲ ಎಂಬ ಕೊರಗಿತ್ತು. ಆ ಕೊರಗನ್ನು ನೀಗಿಸಲು ಈ ಬಾರಿ ದೊಡ್ಡ ಪರದೆಯ ಅನುಭವಕ್ಕಾಗಿಯೇ ‘ಪಬ್ಬಾರ್’ ಸಿದ್ಧಪಡಿಸಿದ್ದು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಹರಸಬೇಕು" ಎಂದು ಮನವಿ ಮಾಡಿದರು.