‘ಅಮೃತವರ್ಷಿಣಿ 2’ ಚಿತ್ರಕ್ಕೆ ವಿದ್ಯಾಸಾಗರ್ ಸಂಗೀತ; ಚೆನ್ನೈನಲ್ಲಿ ಹಾಡುಗಳ ರೆಕಾರ್ಡಿಂಗ್ ಶುರು, ಸಂಕ್ರಾಂತಿಯಂದು ಶೂಟಿಂಗ್ಗೆ ಚಾಲನೆ
ಮೂರು ದಶಕಗಳ ಹಿಂದೆ ಇತಿಹಾಸ ಸೃಷ್ಟಿಸಿದ್ದ ಎವರ್ಗ್ರೀನ್ ಚಿತ್ರ ʻಅಮೃತವರ್ಷಿಣಿʼಯ ಮುಂದುವರಿದ ಭಾಗವಾಗಿ ʻಅಮೃತವರ್ಷಿಣಿ 2ʼ ಸಿನಿಮಾ ಸೆಟ್ಟೇರಲು ಸಜ್ಜಾಗುತ್ತಿದೆ. ಈ ಸಿನಿಮಾವನ್ನು ಸಂಗೀತ ನಿರ್ದೇಶನವನ್ನುತಮಿಳಿನ ವಿದ್ಯಾಸಾಗರ್ ಮಾಡುತ್ತಿದ್ದು, ಹಾಡುಗಳನ್ನು ಕೆ. ಕಲ್ಯಾಣ್ ಬರೆಯುತ್ತಿದ್ದಾರೆ.
-
ಮೂರು ದಶಕಗಳ ಹಿಂದೆ ಪ್ರೇಕ್ಷಕರ ಮನಗೆದ್ದು, ಇಂದಿಗೂ ತನ್ನ ಸುಮಧುರ ಹಾಡುಗಳ ಮೂಲಕ ಸಂಗೀತಪ್ರಿಯರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಕನ್ನಡದ ಎವರ್ಗ್ರೀನ್ ಸಿನಿಮಾ ‘ಅಮೃತವರ್ಷಿಣಿ’ ಇದೀಗ ಎರಡನೇ ಭಾಗದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. 1997ರಲ್ಲಿ ತೆರೆಕಂಡು ಅಪಾರ ಜನಮನ್ನಣೆ ಗಳಿಸಿದ್ದ ಈ ಚಿತ್ರದ ಮುಂದುವರಿದ ಭಾಗವಾದ ‘ಅಮೃತವರ್ಷಿಣಿ 2’ ಸಿನಿಮಾದ ಹಾಡುಗಳ ಧ್ವನಿಮುದ್ರಣ ಕಾರ್ಯಕ್ಕೆ ಚೆನ್ನೈನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರ ಸಾರಥ್ಯದಲ್ಲಿ ರೆಕಾರ್ಡಿಂಗ್ ನಡೆಯುತ್ತಿದೆ.
ದೇವ ಜಾಗಕ್ಕೆ ಈ ಬಾರಿ ವಿದ್ಯಾಸಾಗರ್
‘ಅಮೃತವರ್ಷಿಣಿ’ ಚಿತ್ರಕ್ಕೆ ದೇವ ಅವರು ಸಂಯೋಜಿಸಿದ್ದ ಹಾಡುಗಳು ಇಂದಿಗೂ ಕನ್ನಡಿಗರ ಬಾಯಲ್ಲಿ ಗುನುಗುತ್ತಿವೆ. ಇತ್ತೀಚೆಗಷ್ಟೇ ದೇವ ಅವರು ನಿಧನರಾಗಿದ್ದು ಸಂಗೀತಪ್ರಿಯರಿಗೆ ತೀವ್ರ ಬೇಸರ ಮೂಡಿಸಿತ್ತು. ಇದೀಗ ಆ ಮಧುರ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ವಿದ್ಯಾಸಾಗರ್ ಅವರ ಹೆಗಲೇರಿದೆ. ವಿಶೇಷವೆಂದರೆ, ಮೊದಲ ಭಾಗದ ಹಾಡುಗಳಿಗೆ ಭಾವಪೂರ್ಣ ಸಾಹಿತ್ಯ ರಚಿಸಿದ್ದ ಹಿರಿಯ ಗೀತರಚನೆಕಾರ ಕೆ. ಕಲ್ಯಾಣ್ ಅವರೇ ‘ಅಮೃತವರ್ಷಿಣಿ 2’ ಚಿತ್ರಕ್ಕೂ ಸಾಹಿತ್ಯ ಒದಗಿಸಿದ್ದಾರೆ. ಕೆ. ಕಲ್ಯಾಣ್ ಅವರ ಸಾಹಿತ್ಯ ಮತ್ತು ವಿದ್ಯಾಸಾಗರ್ ಅವರ ಸಂಗೀತವು ಹಳೆಯ ಚಿತ್ರದ ಭಾವನಾತ್ಮಕ ಮಧುರತೆಯನ್ನು ನೆನಪಿಸುವ ಜೊತೆಗೆ ಹೊಸತನದ ಸಂಗೀತದ ಅನುಭವ ನೀಡಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮನೆಮಾಡಿದೆ.
29 ವರ್ಷಗಳ ನಂತರ ʻಅಮೃತವರ್ಷಿಣಿʼ ಚಿತ್ರಕ್ಕೆ ಸೀಕ್ವೆಲ್; ಮತ್ತೆ ಜೊತೆಯಾಗಲಿದ್ದಾರೆ ರಮೇಶ್ ಅರವಿಂದ್-ಸುಹಾಸಿನಿ
ಈ ಹಿಂದೆಯೂ ಕನ್ನಡದಲ್ಲಿ ಕೆಲಸ ಮಾಡಿದ್ದ ವಿದ್ಯಸಾಗರ್
ದಕ್ಷಿಣ ಭಾರತದ ʻಮೆಲೋಡಿ ಕಿಂಗ್ʼ ಎಂದೇ ಖ್ಯಾತರಾದ ವಿದ್ಯಾಸಾಗರ್ ಅವರು ಈ ಹಿಂದೆ ಕನ್ನಡದಲ್ಲಿ ‘ಗಂಗಾ ಯಮುನಾ’, ‘ಕಾಮಣ್ಣನ ಮಕ್ಕಳು’ ಸೇರಿದಂತೆ ಕೆಲವೇ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಆದರೆ ಅವೆಲ್ಲವೂ ರೀಮೇಕ್ ಸಿನಿಮಾಗಳಾಗಿದ್ದರಿಂದ, ಮೂಲ ಚಿತ್ರಗಳಿಗೆ ವಿದ್ಯಾಸಾಗರ್ ಅವರು ನೀಡಿದ್ದ ಬಹುತೇಕ ಟ್ಯೂನ್ಗಳನ್ನೇ ಕನ್ನಡದಲ್ಲೂ ಬಳಸಿಕೊಳ್ಳಲಾಗಿತ್ತು. ಇದೀಗ ‘ಅಮೃತವರ್ಷಿಣಿ 2’ ಚಿತ್ರಕ್ಕಾಗಿಯೇ ವಿದ್ಯಾಸಾಗರ್ ಅವರು ಫ್ರೆಶ್ ಟ್ಯೂನ್ಗಳನ್ನು ಕಂಪೋಸ್ ಮಾಡುತ್ತಿರುವುದು ಈ ಚಿತ್ರದ ಪ್ರಮುಖ ವಿಶೇಷತೆಯಾಗಿದೆ.
ಹಿರಿಯ ಕಲಾವಿದರ ಸಮಾಗಮ
ಬಿ.ಎಸ್. ಸುಧೀಂದ್ರ ಹಾಗೂ ಆರ್. ನವೀನ್ ನಿರ್ಮಾಣದ ‘ಅಮೃತವರ್ಷಿಣಿ 2’ ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಮೋಡಿ ಮಾಡಿದ್ದ ರಮೇಶ್ ಅರವಿಂದ್ ಹಾಗೂ ಸುಹಾಸಿನಿ ಜೋಡಿ ಮತ್ತೊಮ್ಮೆ ಪ್ರಮುಖ ಪಾತ್ರಗಳಲ್ಲಿ ತೆರೆ ಹಂಚಿಕೊಳ್ಳುತ್ತಿದೆ. ಇವರೊಂದಿಗೆ ಹಿರಿಯ ಕಲಾವಿದರಾದ ದೇವರಾಜ್, ರಾಮಕೃಷ್ಣ, ತಾರಾ ಹಾಗೂ ಲಕ್ಷ್ಮೀ ಗೋಪಾಲಸ್ವಾಮಿ ಸೇರಿದಂತೆ ಅನುಭವಿ ತಾರಾಬಳಗವೇ ಚಿತ್ರದಲ್ಲಿದೆ. ಜನವರಿ 14ರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಬೆಂಗಳೂರು, ಕೊಡೈಕೆನಾಲ್ನಲ್ಲಿ ಚಿತ್ರೀಕರಣ ನಡೆಯಲಿದೆ.