ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಡಿಯರ್ ಹಸ್ಬೆಂಡ್’ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಗದ ಖಡಕ್ ಪೊಲೀಸ್ ಅಧಿಕಾರಿ ರೋಲ್‌ನಲ್ಲಿ ನಟಿ ಪಾವನಾ ಗೌಡ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪಾವನಾ ಗೌಡ ಮೊದಲ ಬಾರಿಗೆ 'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಖಡಕ್ ತನಿಖಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಸ್ಪೆನ್ಸ್ ಕ್ರೈಂ-ಥ್ರಿಲ್ಲರ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಸಂಭಾಷಣೆಗಳಿದ್ದು, ಸೂರಜ್ ಗೌಡ ಮತ್ತು ಕುಮಾರ ಬಂಗಾರಪ್ಪ ಪ್ರಮುಖ ತಾರಾಗಣದಲ್ಲಿದ್ದಾರೆ.

'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಖಡಕ್ ಪೊಲೀಸ್ ಅವತಾರದಲ್ಲಿ ನಟಿ ಪಾವನಾ ಗೌಡ

-

Avinash GR
Avinash GR Aug 17, 2026 3:46 PM

ಕನ್ನಡ ಚಿತ್ರರಂಗದಲ್ಲಿ ಗ್ಲಾಮರಸ್ ಹಾಗೂ ಸಾಂಪ್ರದಾಯಿಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ನಟಿ ಪಾವನಾ ಗೌಡ, ಇದೀಗ ಸಂಪೂರ್ಣ ರಗಡ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸದಾ ಸೌಮ್ಯ ಸ್ವಭಾವದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಇದೇ ಮೊದಲ ಬಾರಿಗೆ ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.

ಭರದಿಂದ ಸಾಗುತ್ತಿದೆ ಶೂಟಿಂಗ್

‘ಜಿ9 ಕಮ್ಯುನಿಕೇಷನ್ಸ್ ಅ್ಯಂಡ್ ಮೀಡಿಯಾ’ ಬ್ಯಾನರ್ ಅಡಿಯಲ್ಲಿ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶಿಸುತ್ತಿರುವ ಈ ಚಿತ್ರದ ಒಂದಷ್ಟು ಭಾಗದ ಚಿತ್ರೀಕರಣ ಈಗಾಗಲೇ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ಆರಂಭವಾಗಲಿರುವ ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದ್ದು, ಈ ಹಂತದಲ್ಲಿ ನಟಿ ಪಾವನಾ ಗೌಡ ಅಧಿಕೃತವಾಗಿ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ಸವಾಲಿನ ಪಾತ್ರವೆಂದ ಪಾವನಾ ಗೌಡ

ತಮ್ಮ ಹೊಸ ಲುಕ್ ಮತ್ತು ಪಾತ್ರದ ಬಗ್ಗೆ ಮಾತನಾಡಿದ ಪಾವನಾ ಗೌಡ, "ನಾನು ಈವರೆಗೆ ನಿರ್ವಹಿಸಿದ ಪಾತ್ರಗಳಿಗಿಂತ ಇದು ಸಂಪೂರ್ಣ ವಿಭಿನ್ನ ಹಾಗೂ ಸವಾಲಿನದ್ದು. ಒಬ್ಬ ಜವಾಬ್ದಾರಿಯುತ ಮಹಿಳಾ ಪೊಲೀಸ್ ಅಧಿಕಾರಿ ಕರ್ತವ್ಯದ ವೇಳೆ ಎದುರಿಸುವ ಸವಾಲುಗಳು ಮತ್ತು ಅವರ ಕಾರ್ಯವೈಖರಿಯನ್ನು ಈ ಪಾತ್ರ ತೆರೆದಿಡಲಿದೆ. ಖಡಕ್ ಸಂಭಾಷಣೆಯ ಜೊತೆಗೆ ಭರ್ಜರಿ ಆ್ಯಕ್ಷನ್ ದೃಶ್ಯಗಳೂ ಇರಲಿದ್ದು, ಮೊದಲ ಬಾರಿಗೆ ಇನ್‌ವೆಸ್ಟಿಗೇಷನ್ ಆಫೀಸರ್ ಪಾತ್ರ ಮಾಡುತ್ತಿರುವುದಕ್ಕೆ ಉತ್ಸುಕಳಾಗಿದ್ದೇನೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹೊಸ ಇಮೇಜ್ ಸಿಗುವ ವಿಶ್ವಾಸ

ನಿರ್ದೇಶಕ ಗುರುರಾಜ ಕುಲಕರ್ಣಿ ಮಾತನಾಡಿ, "ಈ ಮಹಿಳಾ ಪ್ರಧಾನ ಪಾತ್ರಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಅಂತಿಮವಾಗಿ ಪಾವನಾ ಅವರನ್ನು ಆಯ್ಕೆ ಮಾಡಿದೆವು. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಮುಗಿದಿದ್ದು, ಮುಂದಿನ ಹಂತದಲ್ಲಿ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಪಾತ್ರದ ಮೂಲಕ ಪಾವನಾ ಅವರಿಗೆ ಹೊಸದೊಂದು ಇಮೇಜ್ ಸಿಗಲಿದೆ" ಎಂಬ ಭರವಸೆ ನೀಡಿದ್ದಾರೆ.

Star Fashion 2025: ವೈಬ್ರೆಂಟ್‌ ಆರೆಂಜ್‌ ಶರ್ಟ್ ಡ್ರೆಸ್‌ಗೆ ಸೈ ಎಂದ ನಟಿ ಪಾವನಾ

ಇದೇ ವರ್ಷಾಂತ್ಯಕ್ಕೆ ರಿಲೀಸ್?

ಇನ್ನು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ನಟರಾದ ಸೂರಜ್ ಗೌಡ, ಪ್ರವೀಣ್, ಕುಮಾರ ಬಂಗಾರಪ್ಪ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ ಮರವಂತೆ ಸಾಹಿತ್ಯ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಪಿಕೆಹೆಚ್ ದಾಸ್ ಛಾಯಾಗ್ರಹಣ, ಬಿ. ಎಸ್. ಕೆಂಪರಾಜ್ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆಯಲ್ಲಿದೆ ಚಿತ್ರತಂಡ. ಇದೇ ವರ್ಷಾಂತ್ಯಕ್ಕೆ ‘ಡಿಯರ್ ಹಸ್ಬೆಂಡ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.