ನಿರಾಶ್ರಿತರು, ಬಡವರಿಂದ ಬಿಡುಗಡೆಯಾಯ್ತು ರಶ್ಮಿ ನಿರ್ದೇಶನದ ‘ಸುಮಾ’ ಚಿತ್ರದ ಟ್ರೇಲರ್; ಇದು ಜೋ ಸೈಮನ್ ನಟನೆಯ ಕೊನೆಯ ಸಿನಿಮಾ
Suma Kannada Movie: ʻಸುಮಾʼ ಸಿನಿಮಾದ ಟ್ರೇಲರ್ ಅನ್ನು ನಿರಾಶ್ರಿತರು ಮತ್ತು ಬಡವರಿಂದ ಬಿಡುಗಡೆ ಮಾಡಲಾಗಿದೆ. ‘ಓಂ ಸಾಯಿ ಸಿನೆಮಾಸ್’ ನಿರ್ಮಾಣದ ಈ ಮಹಿಳಾ ಪ್ರಧಾನ ಚಿತ್ರವನ್ನು ಸಾಯಿ ರಶ್ಮಿ ನಿರ್ದೇಶಿಸಿದ್ದು, ಸಾಮಾನ್ಯ ಯುವತಿಯ ಅಂತರಂಗದ ತುಡಿತವನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಮೈಸೂರು ಮೂಲದ ಪ್ರದೀಪ್ ಗೌಡ ನಾಯಕರಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
-
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಯಾವುದೇ ಸಿನಿಮಾದ ಪ್ರಚಾರ ಕಾರ್ಯಕ್ರಮ, ಟೀಸರ್ ಅಥವಾ ಟ್ರೇಲರ್ ಬಿಡುಗಡೆ ಎಂದರೆ ಅಲ್ಲಿ ಸ್ಟಾರ್ ನಟರು ಅಥವಾ ಗಣ್ಯ ವ್ಯಕ್ತಿಗಳ ಉಪಸ್ಥಿತಿ ಇರುವುದು ಸಹಜ. ಆದರೆ ಈ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿರುವ ‘ಸುಮಾ’ ಚಿತ್ರತಂಡ, ನಿರಾಶ್ರಿತರು, ಬಡವರು ಮತ್ತು ಜನಸಾಮಾನ್ಯರ ಕೈಯಲ್ಲೇ ತಮ್ಮ ಚಿತ್ರದ ಟ್ರೇಲರ್ ಅನ್ನು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.
‘ಓಂ ಸಾಯಿ ಸಿನೆಮಾಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಮಹಿಳಾ ಪ್ರಧಾನ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಿ ಸಂಭ್ರಮಿಸಿದರು.
ಈ ಹಿಂದೆ ಕನ್ನಡದಲ್ಲಿ ‘ಶ್ರೀಕಬ್ಬಾಳಮ್ಮನ ಮಹಿಮೆ’, ‘ಮನೆ’, ‘ಬ್ಯಾಂಕ್ ಲೋನ್’ ಹಾಗೂ ‘ಸುಳಿ’ ಸೇರಿದಂತೆ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ರಶ್ಮಿ ಎಸ್., ಇದೀಗ ‘ಸುಮಾ’ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಶೀರ್ಷಿಕೆ ಬಗ್ಗೆ ನಿರ್ದೇಶಕರು ಹೇಳಿದ್ದೇನು?
ʻಸುಮಾʼ ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡಿದ ನಿರ್ದೇಶಕಿ ಸಾಯಿ ರಶ್ಮಿ, "ಸುಮಾ ಅಂದರೆ ಸಂಪೂರ್ಣ ಮೊಗ್ಗು ಅಲ್ಲದ, ಪೂರ್ತಿಯಾಗಿ ಅರಳಿಯೂ ಇರದ ಒಂದು ಹೂವು. ಚಿತ್ರದ ನಾಯಕಿಯ ಬದುಕು ಮತ್ತು ಆಕೆಯ ಪಾತ್ರ ಕೂಡ ಇದೇ ರೀತಿಯಲ್ಲಿದೆ. ನಮ್ಮ ಸುತ್ತಮುತ್ತಲೇ ಬದುಕುವ ಸಾಮಾನ್ಯ ಹುಡುಗಿಯೊಬ್ಬಳ ಅಂತರಂಗದ ಹೋರಾಟದ ಕಥೆ ಇದಾಗಿದ್ದು, ಇದು ಪಕ್ಕಾ ಜನಸಾಮಾನ್ಯರ ಸಿನಿಮಾವಾದ ಕಾರಣವೇ ನಿರಾಶ್ರಿತರು ಮತ್ತು ಬಡವರ ಕೈಯಿಂದ ಟ್ರೇಲರ್ ಬಿಡುಗಡೆ ಮಾಡಿಸಿದ್ದೇವೆ" ಎಂದು ವಿವರ ಹಂಚಿಕೊಂಡರು.
ಜೋ ಸೈಮನ್ ನಟನೆಯ ಕೊನೆಯ ಸಿನಿಮಾ
ಈ ಚಿತ್ರದಲ್ಲಿ ಮೈಸೂರು ಮೂಲದ ಪ್ರದೀಪ್ ಗೌಡ ನಾಯಕನಾಗಿ ನಟಿಸಿದ್ದು, ಉಳಿದಂತೆ ಬಾಲ ರಾಜವಾಡಿ, ವಿಜಯಲಕ್ಷ್ಮಿ ಉಪಾಧ್ಯಾಯ, ಮುರಳೀಧರ್ ಡಿ. ಆರ್, ಕಾವ್ಯ ಪ್ರಕಾಶ್, ಪವಿತ್ರ ಅವಿನಾಶ್, ಕುಮಾರಿ ಬೈರವಿ, ಸಿದ್ದು ಮಂಡ್ಯ, ವಿಶೇಷ ಪಾತ್ರದಲ್ಲಿ ಡಾ. ವಿ. ನಾಗೇಂದ್ರ ಪ್ರಸಾದ್, ಅವಿನಾಶ ಗಂಜೀಹಾಳ, ಶಿವಕುಮಾರ್ ಆರಾಧ್ಯ, ಹರಿಹರನ್ ಬಿ. ಪಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ವಿಶೇಷವೆಂದರೆ, ಹಿರಿಯ ನಟ ಹಾಗೂ ನಿರ್ದೇಶಕ ಜೋ ಸೈಮನ್ ಅವರು ಬಣ್ಣಹಚ್ಚಿದ ಕೊನೆಯ ಚಿತ್ರ ಇದಾಗಿದೆ.
ಅಕ್ಟೋಬರ್ 2ರಂದು ತೆರೆಕಾಣಲಿರುವ ʻಸುಮಾʼ ಸಿನಿಮಾ
ಮಂಡ್ಯ, ಮದ್ದೂರು, ಆಲಭುಜನಹಳ್ಳಿ, ಕೆ.ಎಂ ದೊಡ್ಡಿ ಹಾಗೂ ನಗರಕೆರೆಯ ನೈಜ ತಾಣಗಳಲ್ಲಿ ‘ಸುಮಾ’ ಚಿತ್ರದ ಬಹುಪಾಲು ಚಿತ್ರೀಕರಣ ನಡೆಸಲಾಗಿದೆ. ವಿಶಿಷ್ಟ ಕಥಾಹಂದರ ಹಾಗೂ ವಿಭಿನ್ನ ಪ್ರಚಾರ ಶೈಲಿಯಿಂದ ಸದ್ದು ಮಾಡುತ್ತಿರುವ ಈ ಮಹಿಳಾ ಪ್ರಧಾನ ಸಿನಿಮಾ ಇದೇ ಅಕ್ಟೋಬರ್ 2ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.