BBK 13: ಮೂರೇ ವಾರಕ್ಕೆ ಆಟ ಮುಗಿಸಿ ದೊಡ್ಮನೆಯಿಂದ ಹೊರಬಂದ ಅವಿನಾಶ್ - ವೈಷ್ಣವಿ; ಬಿಗ್ ಬಾಸ್‌ನಿಂದ ಇಬ್ಬರಿಗೂ ಸಿಕ್ಕ ಹಣವೆಷ್ಟು?
BBK 13 Elimination: ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರಕ್ಕೆ ರಂಗಕರ್ಮಿ, ನಟ ಅವಿನಾಶ್ ಶಟಮರ್ಷಣ ಹಾಗೂ ನಟಿ ವೈಷ್ಣವಿ ಕೌಂಡಿನ್ಯ ನಿರ್ಗಮಿಸಿದ್ದಾರೆ. ಇವಬ್ಬರಿಗೂ ತಲಾ 3.50 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ. ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಅವಿನಾಶ್ ಹೊರಬಂದರೆ, ತಂತ್ರಗಾರಿಕೆ ಬಾರದೆ ವೈಷ್ಣವಿ ಆಟ ಮುಗಿಸಿದ್ದಾರೆ.
-
‘ಬಿಗ್ ಬಾಸ್ ಕನ್ನಡ ಸೀಸನ್-13’ ರಿಯಾಲಿಟಿ ಶೋನಿಂದ ಮೂರೇ ವಾರಕ್ಕೆ ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಹೊರಬಂದಿದ್ದಾರೆ. ರಂಗಭೂಮಿ ಪ್ರತಿಭೆ ಅವಿನಾಶ್ ಶಟಮರ್ಷಣ ಹಾಗೂ ನಟಿ ವೈಷ್ಣವಿ ಕೌಂಡಿನ್ಯ ಅವರು ಎಮರ್ಜೆನ್ಸಿ ಎಕ್ಸಿಟ್ ಮೂಲಕ ಬಿಗ್ ಬಾಸ್ ಜರ್ನಿ ಮುಗಿಸಿದ್ದು, ಇವರ ನಿರ್ಗಮನದ ಬೆನ್ನಲ್ಲೇ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆ ಪ್ರವೇಶಿಸಿದ್ದಾರೆ. ನಾಲ್ಕು ವಾರಗಳ ಆಟ ಮುಗಿಸಿ ವೇದಿಕೆಗೆ ಬಂದ ಈ ಇಬ್ಬರೂ ಸ್ಪರ್ಧಿಗಳಿಗೆ ವಿವಿಧ ಸ್ಪಾನ್ಸರ್‌ಗಳ ಕಡೆಯಿಂದ ತಲಾ 3.50 ಲಕ್ಷ ರೂಪಾಯಿಗಳ ನಗದು ಬಹುಮಾನ ಲಭಿಸಿದ್ದು, ಕಿಚ್ಚ ಸುದೀಪ್ ಅವರು ಈ ಮೊತ್ತವನ್ನು ಹಸ್ತಾಂತರಿಸಿದರು.
ಅವಿನಾಶ್ ಎಕ್ಸಿಟ್ ಬಗ್ಗೆ ಪತ್ನಿ ಹೇಳಿದ್ದೇನು?
ರಂಗಭೂಮಿ ಕಲಾವಿದ ಅವಿನಾಶ್ ಶಟಮರ್ಷಣ ಅವರಿಗೆ ಬಿಗ್ ಬಾಸ್ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ವೇದಿಕೆಯಲ್ಲಿ ಅವರ ಜರ್ನಿ ವಿಡಿಯೋ ವೀಕ್ಷಿಸಿದ ಸುದೀಪ್, "ನಿಮ್ಮ ವ್ಯಕ್ತಿತ್ವ ಈ ರೀತಿಯ ಶೋಗೆ ಹೊಂದಾಣಿಕೆ ಆಗಲ್ಲ" ಎಂದಾಗ, ಸ್ವತಃ ಅವಿನಾಶ್ ಕೂಡ ಅದನ್ನು ಒಪ್ಪಿಕೊಂಡರು.
Bigg Boss Kannada 13: ಬಿಗ್ ಬಾಸ್ ಆಟ ಅವಿನಾಶ್‌ಗೆ ಅರ್ಥ ಆಗಿಲ್ಲ! ಪತ್ನಿ ಪ್ರಿಯಾ ಕಣ್ಣೀರು
"ನನಗೆ ನಿಜಕ್ಕೂ ಇಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ, ಒಮ್ಮೆ ಮನೆಯಿಂದ ಹೋಗಿಬಿಡೋಣ ಎನಿಸಿತ್ತು. ಬಿಗ್ ಬಾಸ್ ಸ್ಕ್ರಿಪ್ಟೆಡ್ ಎನ್ನುವವರಿಗೆ ಇದು ಸಂಪೂರ್ಣ ನೈಜ ಶೋ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದು ಅವಿನಾಶ್ ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ವೇದಿಕೆಯಲ್ಲಿದ್ದ ಅವರ ಪತ್ನಿ, 'ಭೀಮ' ಖ್ಯಾತಿಯ ನಟಿ ಪ್ರಿಯಾ ಶಟಮರ್ಷಣ ಭಾವುಕರಾಗಿ, ಸಂತ ಶಿಶುನಾಳ ಶರೀಫರ "ತರವಲ್ಲ ತಗಿ ನಿನ್ನ ತಂಬೂರಿ" ತತ್ವಪದದ ಸಾಲುಗಳನ್ನು ಹಾಡಿದರು, ಬಿಗ್ ಬಾಸ್ ಆಟದ ಮರ್ಮ ತಮ್ಮ ಪತಿಗೆ ಅರ್ಥವಾಗಲಿಲ್ಲ ಎಂದು ಅವರು ಹೇಳಿದರು.
ಸೀರಿಯಲ್‌ನಲ್ಲಿ ಸಕ್ರಿಯವಾಗಲಿದ್ದಾರೆ ವೈಷ್ಣವಿ
ಇನ್ನೊಂದೆಡೆ, ಭಾನುವಾರದ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿ ವೇದಿಕೆಗೆ ಬಂದ ವೈಷ್ಣವಿ ಕೌಂಡಿನ್ಯ ತಮ್ಮ ಜರ್ನಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸುದೀಪ್ ಅವರೊಂದಿಗೆ ಮಾತನಾಡುತ್ತಾ, ನಾಲ್ಕನೇ ತರಗತಿಯಲ್ಲಿದ್ದಾಗಿನಿಂದಲೂ ಕಿಚ್ಚನ ಮೇಲೆ ತಮಗಿದ್ದ ‘ಕ್ರಶ್’ ಬಗ್ಗೆ ಮುಕ್ತವಾಗಿ ಹೇಳಿಕೊಂಡರು. ಆಟದಲ್ಲಿ ಎಡವಿದ್ದೆಲ್ಲಿ ಎಂಬ ಸುದೀಪ್ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಮಕ್ಕಳಂತೆ ಇರುತ್ತೇನೆ, ಯಾರನ್ನೂ ಮ್ಯಾನಿಪುಲೇಟ್ ಮಾಡಲು ನನಗೆ ಬರುವುದಿಲ್ಲ. ಮೊದಲ ವಾರದ ತಪ್ಪುಗಳನ್ನು ತಿದ್ದಿಕೊಂಡು ನನಗಾಗಿ ಸ್ಟ್ಯಾಂಡ್ ತೆಗೆದುಕೊಳ್ಳಲು ಶುರು ಮಾಡುವಷ್ಟರಲ್ಲೇ ಎಲಿಮಿನೇಟ್ ಆಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ" ಎಂದರು.
'ಮಿಥುನ ರಾಶಿ', 'ಪ್ರೇಮಕಾವ್ಯ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ, ಬಿಗ್ ಬಾಸ್ ನಂತರವೂ ಸೀರಿಯಲ್ ನಟನೆಯನ್ನೇ ಮುಂದುವರಿಸುವುದಾಗಿ ತಮ್ಮ ಮುಂದಿನ ಹಾದಿಯನ್ನು ಸ್ಪಷ್ಟಪಡಿಸಿದರು.