ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2,000 ರೂಪಾಯಿ ಮೇಲಿನ ಯುಪಿಐ ಪಾವತಿಗೆ ಶುಲ್ಕ: ಮಧ್ಯಂತರ ತಡೆಗೆ ಸುಪ್ರೀಂ ಕೋರ್ಟ್‌ ನಕಾರ

Supreme Court: ₹ 2,000ಕ್ಕಿಂತ ಹೆಚ್ಚಿನ ವ್ಯಕ್ತಿಯಿಂದ ವ್ಯಾಪಾರಿ ಮಧ್ಯೆ ನಡೆಯುವ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಕುರಿತು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಸೇರಿ ಸಂಬಂಧಪಟ್ಟವರಿಗೆ ನಾಲ್ಕು ವಾರಗಳಲ್ಲಿ ಪ್ರತಿವಾದ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಯುಪಿಐ ಶುಲ್ಕ: ಆದೇಧ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಸಾಂದರ್ಭಿಕ ಚಿತ್ರ -

Profile
Sushmitha Jain Sep 28, 2026 6:09 PM

ನವದೆಹಲಿ, ಸೆ. 28: ₹ 2,000ಕ್ಕಿಂತ ಹೆಚ್ಚಿನ ವ್ಯಕ್ತಿಯಿಂದ ವ್ಯಾಪಾರಿ ಮಧ್ಯೆ ನಡೆಯುವ ಯುಪಿಐ (UPI) ವಹಿವಾಟುಗಳಿಗೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ(Central Government) ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ (Suprem Court) ಸೋಮವಾರ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಇತರರಿಗೆ ನಾಲ್ಕು ವಾರಗಳೊಳಗೆ ಪ್ರತಿವಾದ ಸಲ್ಲಿಸುವಂತೆ ಸೂಚಿಸಿದೆ.

ಈ ಶುಲ್ಕ ವಿಧಿಸುವ ನಿರ್ಧಾರದ ಆಧಾರವೇನು ಎಂಬುದನ್ನು ವಿವರಿಸುವಂತೆ ಕೇಂದ್ರ ಸರ್ಕಾರದಿಂದ ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಳಿದೆ. ಕೇಂದ್ರ ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್, ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಸುವ ಶೇ. 96ರಷ್ಟು ಜನರಿಗೆ ಈ ಶುಲ್ಕದಿಂದ ವಿನಾಯಿತಿ ಇದೆ ಎಂದು ಪೀಠಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ನ್ಯಾಯಪೀಠವು, “ಇದು ಕಾನೂನು ವಿಚಾರಕ್ಕಿಂತ ತಾಂತ್ರಿಕ ವಿಚಾರವಾಗಿದೆ” ಎಂದು ಅಭಿಪ್ರಾಯಪಟ್ಟಿತು.

ಅಕ್ಟೋಬರ್ 15ರಿಂದ ಹೊಸ ಶುಲ್ಕ ವ್ಯವಸ್ಥೆ

ಸುಮಾರು ಆರು ವರ್ಷಗಳ ಕಾಲ ಉಚಿತವಾಗಿದ್ದ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ಅಕ್ಟೋಬರ್ 15ರಿಂದ ₹ 2,000ಕ್ಕಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳಿಗೆ ಶೇ. 0.4ರಷ್ಟು ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.

UPI ಪಾವತಿಯಲ್ಲಿ ಹೊಸ ನಿಯಮ; 2,000 ರೂಪಾಯಿ ಮೇಲ್ಪಟ್ಟ ವಹಿವಾಟಿಗೆ ಶೇಕಡಾ 0.4 MDR

ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಯುಪಿಐ ವಹಿವಾಟುಗಳು ಹಾಗೂ ₹ 2,000ರವರೆಗಿನ ಸಣ್ಣ ವ್ಯಾಪಾರಿ ಪಾವತಿಗಳು ಉಚಿತವಾಗಿಯೇ ಮುಂದುವರಿಯಲಿವೆ. ಈ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗಿಲ್ಲ; ವ್ಯಾಪಾರಿಗಳೇ ಭರಿಸಬೇಕು. ₹ 75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಶುಲ್ಕವನ್ನು ಗರಿಷ್ಠ ₹ 300ಕ್ಕೆ ಮಿತಿಗೊಳಿಸಲಾಗಿದೆ.

ಕೆಲವು ಕ್ಷೇತ್ರಗಳಿಗೆ ಪ್ರತ್ಯೇಕ ಶುಲ್ಕ

ರೈಲ್ವೆ, ದೂರ ಸಂಪರ್ಕ, ವಿಮೆ, ಇಂಧನ ಮತ್ತು ಕೃಷಿ ಒಳಹರಿವುಗಳಂತಹ ಅಗತ್ಯ ಮತ್ತು ಕಡಿಮೆ ಲಾಭಾಂಶದ ಕ್ಷೇತ್ರಗಳಿಗೆ ₹2,000ಕ್ಕಿಂತ ಹೆಚ್ಚಿನ ಪ್ರತಿ ವಹಿವಾಟಿಗೆ ₹ 5ರ ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಮ್ಯೂಚುವಲ್ ಫಂಡ್‌ಗಳು, ಷೇರುಗಳು ಹಾಗೂ ಷೇರು ದಲ್ಲಾಳಿಗಳು ಮತ್ತು ವ್ಯಾಪಾರಿಗಳ ಮೂಲಕ ನಡೆಯುವ ಪಾವತಿಗಳಿಗೆ ಶೇ. 0.02ರಷ್ಟು ಶುಲ್ಕ ವಿಧಿಸಲಾಗುತ್ತದೆ. ಇದಕ್ಕೂ ಗರಿಷ್ಠ ₹ 300 ಮಿತಿ ಇರಲಿದೆ.

ಶುಲ್ಕದಿಂದ ಬಂದ ಆದಾಯ ಎಲ್ಲಿಗೆ?

ರಾಷ್ಟ್ರೀಯ ಪಾವತಿ ನಿಗಮವು 2016ರಲ್ಲಿ ಆರಂಭಿಸಿದ ಯುಪಿಐ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಶುಲ್ಕದಿಂದ ದೊರೆಯುವ ಆದಾಯವನ್ನು ತಾಂತ್ರಿಕ ಮೂಲಸೌಕರ್ಯ ಬಲಪಡಿಸುವುದು, ಸೈಬರ್ ಭದ್ರತೆ, ವಂಚನೆ ತಡೆ, ಹೊಸತನ ಮತ್ತು ಗ್ರಾಹಕ ಸೇವೆಗಳಿಗೆ ಬಳಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.