ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಮ್ಯಾರೇಜ್ ಪಾರ್ಟಿ’ ಚಿತ್ರದ ಮಧುರ ಪ್ರೇಮಗೀತೆ ‘ಅಂದಗಾತಿಯೇ..’ ಲಿರಿಕಲ್ ವಿಡಿಯೋ ಬಿಡುಗಡೆ; ಡಿ.4ರಂದು ಸಿನಿಮಾ ತೆರೆಗೆ

ʻಮ್ಯಾರೇಜ್‌ ಪಾರ್ಟಿʼ ಚಿತ್ರತಂಡವು ಇದೀಗ ‘ಅಂದಗಾತಿಯೇ..’ ಎಂಬ ಸುಮಧುರ ಪ್ರೇಮಗೀತೆಯ ಲಿರಿಕಲ್ ವಿಡಿಯೋ ಅನಾವರಣಗೊಳಿಸಿದೆ. ಈ ಹಾಡನ್ನು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಯನ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಡಿಸೆಂಬರ್‌ 4ರಂದು ತೆರೆಗೆ ಬರಲಿದೆ.

‘ಮ್ಯಾರೇಜ್ ಪಾರ್ಟಿ’ ಚಿತ್ರದ ‘ಅಂದಗಾತಿಯೇ’ ಸಾಂಗ್‌ ರಿಲೀಸ್

-

Avinash GR
Avinash GR Nov 15, 2026 5:00 PM

ಕಡಲ ತಡಿಯ ಸುಂದರ ಪರಿಸರದಲ್ಲಿ ನಡೆಯುವ ಮಜವಾದ ಕಥಾಹಂದರವನ್ನು ಹೊಂದಿರುವ ‘ಮ್ಯಾರೇಜ್ ಪಾರ್ಟಿ’ ಚಿತ್ರತಂಡ, ಇದೀಗ ‘ಅಂದಗಾತಿಯೇ..’ ಎಂಬ ಸುಮಧುರ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಿದೆ. ಚಯನ್ ಶೆಟ್ಟಿ ನಿರ್ದೇಶನದ ಹಾಗೂ ಶ್ರೀ ವಾರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ವಿ. ನಿರ್ಮಾಣ ಮಾಡಿರುವ ಈ ಚಿತ್ರದ ‘ಗಲಾಟೆ ಸಾಂಗ್’ ಈಗಾಗಲೇ ಬಿಡುಗಡೆಯಾಗಿ ಪಾರ್ಟಿ ಪ್ರಿಯರನ್ನು ರಂಜಿಸುತ್ತಿದೆ.

ಆ ಹಾಡಿನ ಗುಂಗು ಇನ್ನೂ ಹಸಿರಾಗಿರುವಾಗಲೇ, ಚಿತ್ರತಂಡ ಪ್ರೀತಿಯ ನವಿರು ಭಾವಗಳಿಂದ ತುಂಬಿರುವ ‘ಅಂದಗಾತಿಯೇ’ ಗೀತೆಯನ್ನು ಅನಾವರಣಗೊಳಿಸುವ ಮೂಲಕ ಸಿನಿಮಾದ ಮತ್ತೊಂದು ರೊಮ್ಯಾಂಟಿಕ್ ಮಜಲನ್ನು ಪ್ರೇಕ್ಷಕರ ಮುಂದಿಟ್ಟಿದೆ. "ಮೊದಲಾ ಮಳೆಹನಿ ಎದೆಯೊಳಗಡೆ ಇಳಿದು..." ಎಂಬ ಅರ್ಥಪೂರ್ಣ ಸಾಲುಗಳೊಂದಿಗೆ ಶುರುವಾಗುವ ಈ ಹಾಡಿಗೆ ರಿತ್ವಿಕ್ ಮುರಳೀಧರ್ ಸುಮಧುರ ಸಂಗೀತ ಸಂಯೋಜಿಸಿದ್ದಾರೆ.

ಕರಾವಳಿ ಸೊಗಡಿನ ‘ಮ್ಯಾರೇಜ್ ಪಾರ್ಟಿ’ ಚಿತ್ರದ ʻಗಲಾಟೆ...ʼ ವಿಡಿಯೋ ಸಾಂಗ್ ರಿಲೀಸ್; ಮದುವೆ ಮನೆಯಲ್ಲಿ ಎಣ್ಣೆ ಪಾರ್ಟಿ ಗಮ್ಮತ್ತು!‌

ಖ್ಯಾತ ಗಾಯಕ ಕಪಿಲ್ ಕಪಿಲನ್ ಹಾಗೂ ಸುಮನ್ ನಾರಾಯಣ್ ಅವರ ಇಂಪಾದ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಚಿತ್ರದ ಕಥಾಹಂದರದಲ್ಲಿ ಹಾಸ್ಯ, ಸಂಭ್ರಮದ ಜೊತೆಗೆ ಭಾವನಾತ್ಮಕ ಅಂಶಗಳೂ ಇರಲಿವೆ ಎಂಬುದನ್ನು ನಿರ್ದೇಶಕ ಚಯನ್ ಶೆಟ್ಟಿ ಈ ಹಿಂದೆಯೇ ತಿಳಿಸಿದ್ದರು. ಈ ಹಿಂದಿನ ಗಲಾಟೆ ಹಾಡು ಚಿತ್ರದ ಸಂಭ್ರಮವನ್ನು ತೋರಿಸಿದ್ದರೆ, ‘ಅಂದಗಾತಿಯೇ’ ಗೀತೆಯು ಚಿತ್ರದಲ್ಲಿನ ಮಧುರ ಪ್ರೇಮಕಥನದ ಛಾಯೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದೆ.

ಭಾರಿ ನಿರೀಕ್ಷೆ ಹುಟ್ಟಿಸಿರುವ ‘ಮ್ಯಾರೇಜ್ ಪಾರ್ಟಿ’ ಸಿನಿಮಾ ಇದೇ ಡಿಸೆಂಬರ್ 4ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗಾಣಲು ಸಜ್ಜಾಗಿದೆ. ವಿಶೇಷವೆಂದರೆ, ಈ ಚಿತ್ರವು ಕನ್ನಡದ ಜೊತೆಗೆ ಮಲಯಾಳಂ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ತಾಂತ್ರಿಕವಾಗಿಯೂ ಶ್ರೀಮಂತವಾಗಿರುವ ಈ ಚಿತ್ರಕ್ಕೆ ಶ್ರೀಕಾಂತ್ ಛಾಯಾಗ್ರಹಣ, ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ ಹಾಗೂ ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಅವರ ಸಾಹಿತ್ಯವಿದೆ.

ಚಿತ್ರದಲ್ಲಿ ಕರಾವಳಿ ಹಾಗೂ ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ. ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿ.ಡಿ. ಸತೀಶ್ ಹಾಗೂ ಭೀಮ್ ರಾವ್ ವಾಸ್ಟರ್ ಸೇರಿದಂತೆ ಹಲವು ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.