ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

​‘ನಂದಗೋಕುಲ’ ಧಾರಾವಾಹಿಯ ಕೇಶವ ಈಗ ಹೀರೋ; ‘ಸಮುದ್ರ ಮಂಥನ’ ಚಿತ್ರದ ಮೂಲಕ ನಾಯಕನಾದ ಯಶ್ವಂತ್ ಕುಮಾರ್

ಕಿರುತೆರೆಯ ಜನಪ್ರಿಯ ನಟನಾಗಿ ಮನೆಮಾತಾಗಿದ್ದ ಯಶ್ವಂತ್‌ ಕುಮಾರ್, ಇದೀಗ ‘ಸಮುದ್ರ ಮಂಥನ’ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ‘ನಂದಗೋಕುಲ’ ಧಾರಾವಾಹಿಯಿಂದ ಹೊರಬಂದು ಪೂರ್ಣಪ್ರಮಾಣದಲ್ಲಿ ಸಿನಿರಂಗದತ್ತ ಮುಖ ಮಾಡಿದ್ದಾರೆ.‌ ಈ ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.

ʻನಂದಗೋಕುಲʼ ಧಾರಾವಾಹಿಯ ʻಕೇಶವʼ ಪಾತ್ರಧಾರಿ ಯಶ್ವಂತ್‌ ಕುಮಾರ್ ಈಗ ಹೀರೋ!

-

Avinash GR
Avinash GR Nov 15, 2026 4:07 PM

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಪ್ರತಿಭಾವಂತ ನಟ ಯಶ್ವಂತ್ ಕುಮಾರ್, ಇದೀಗ ತಮ್ಮ ಕಿರುತೆರೆ ಪಯಣಕ್ಕೆ ತಾತ್ಕಾಲಿಕ ವಿರಾಮ ನೀಡಿ ಪೂರ್ಣಪ್ರಮಾಣದಲ್ಲಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ‘ನಂದಗೋಕುಲ’ ಧಾರಾವಾಹಿಯ ಕೇಶವ ಪಾತ್ರದ ಮೂಲಕ ಗಮನ ಸೆಳೆದಿದ್ದ ಅವರು, ‘ಸಮುದ್ರ ಮಂಥನ’ ಚಿತ್ರದ ಮೂಲಕ ಬೆಳ್ಳಿತೆರೆ‌ ಮೇಲೆ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎರಡೆರಡು ಯಶಸ್ವಿ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದ ಯಶ್ವಂತ್, ಇದೀಗ ಸದ್ದಿಲ್ಲದೇ ಹಿರಿತೆರೆಯಲ್ಲಿ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದ ಯಶ್ವಂತ್

ತಮ್ಮ ಈ ಮಹತ್ವದ ನಿರ್ಧಾರದ ಹಿಂದಿನ ಕಾರಣವನ್ನು ಹಂಚಿಕೊಂಡಿರುವ ಯಶ್ವಂತ್ ಕುಮಾರ್, "ನಾನು ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಸಮುದ್ರ ಮಂಥನ’ ಸಿನಿಮಾ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ನಾನು ಕೇವಲ ನಟನಾಗಿ ಮಾತ್ರವಲ್ಲದೆ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿಯೂ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಚಿತ್ರದ ಬಿಡುಗಡೆ ಹಾಗೂ ಇನ್ನಿತರ ಕೆಲಸಗಳಿಗೆ ನನ್ನ ಸಂಪೂರ್ಣ ಸಮಯ ಮತ್ತು ಇರುವಿಕೆಯ ಅಗತ್ಯವಿತ್ತು. ಇದೇ ಕಾರಣಕ್ಕಾಗಿ ನಾನಾಗಿಯೇ ‘ನಂದಗೋಕುಲ’ ಧಾರಾವಾಹಿಯಿಂದ ಹೊರಬಂದೆ. ಮತ್ತೊಂದೆಡೆ ‘ಅಮೃತಧಾರೆ’ ಧಾರಾವಾಹಿ ಕೂಡ ಮುಕ್ತಾಯದ ಹಂತಕ್ಕೆ ತಲುಪಿರುವುದರಿಂದ, ಸಿನಿಮಾದತ್ತ ಸಂಪೂರ್ಣ ಗಮನ ಹರಿಸಲು ಇದು ಅತ್ಯಂತ ಪ್ರಶಸ್ತ ಸಮಯ ಎನಿಸಿತು" ಎಂದು ಸ್ಪಷ್ಟಪಡಿಸಿದ್ದಾರೆ.

‘ನಂದಗೋಕುಲ’ ಧಾರಾವಾಹಿಗೆ ನಟ ಯಶವಂತ್‌ ಗುಡ್‌ಬೈ ಹೇಳೋದಕ್ಕೆ ʻಬಿಗ್‌ ಬಾಸ್‌ʼ ಶೋ ಕಾರಣವೇ? ದೊಡ್ಮನೆಯಿಂದ ಕೇಶವನಿಗೆ ಬಂದೈತಾ ಆಫರ್?

‘ಸಮುದ್ರ ಮಂಥನ’ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ

ಕಿರುತೆರೆಯಲ್ಲಿ ಸಿಕ್ಕ ಯಶಸ್ಸು ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, "ಸದ್ಯ ಸಾಕಷ್ಟು ಧಾರಾವಾಹಿ ಅವಕಾಶಗಳು ನನ್ನನ್ನು ಹುಡುಕಿಕೊಂಡು ಬರುತ್ತಿದ್ದರೂ, ಇನ್ನುಮುಂದೆ ನನ್ನ ಪೂರ್ಣ ಗಮನವನ್ನು ಸಿನಿಮಾಗಳ ಮೇಲೆಯೇ ಕೇಂದ್ರೀಕರಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳಲು ‘ಸಮುದ್ರ ಮಂಥನ’ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿರುವುದೇ ಮುಖ್ಯ ಕಾರಣ. ಪ್ರೇಕ್ಷಕರು ಈ ಸಿನಿಮಾವನ್ನು ಖಂಡಿತವಾಗಿಯೂ ಮೆಚ್ಚಿಕೊಳ್ಳುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ಇತ್ತೀಚೆಗಷ್ಟೇ ನಾನು ನಟಿಸುತ್ತಿದ್ದ ಎರಡೂ ಧಾರಾವಾಹಿಗಳ ವಾಹಿನಿಗಳ ಪ್ರಶಸ್ತಿ ಸಮಾರಂಭಗಳಲ್ಲಿ ನನ್ನ ಪಾತ್ರಗಳಿಗೆ ಪ್ರಶಸ್ತಿ ಲಭಿಸಿರುವುದು ನನ್ನ ಕಿರುತೆರೆ ಪಯಣಕ್ಕೆ ಸಾರ್ಥಕತೆ ತಂದಿದೆ. ಒಂದೇ ವರ್ಷದಲ್ಲಿ ಎರಡು ವಿಭಿನ್ನ ವಾಹಿನಿಗಳಿಂದ ಪ್ರಶಸ್ತಿ ಪಡೆದ ಹೆಮ್ಮೆ ಹಾಗೂ ಧನ್ಯತಾ ಭಾವದೊಂದಿಗೆ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ ತೆರೆಗೆ ಬರಲಿದೆ ಸಮುದ್ರ ಮಂಥನ

ವಿಭಿನ್ನ ಕಥಾಹಂದರದ ‘ಒಂದು ಶಿಕಾರಿಯ ಕಥೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸಚಿನ್ ಶೆಟ್ಟಿ ಅವರು ‘ಸಮುದ್ರ ಮಂಥನ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಯಶ್ವಂತ್ ಕುಮಾರ್ ಅವರು ‘ಶ್ರೀ’ ಎಂಬ ಜನರ ಬದುಕಿಗೆ ತೀರಾ ಹತ್ತಿರವಾಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮನಗೆಲ್ಲಲು ಉತ್ಸುಕರಾಗಿದ್ದಾರೆ. ಮಂದಾರ ಬಟ್ಟಲಹಳ್ಳಿ, ಸ್ಕಂದ ಅಶೋಕ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದು, ಸದ್ಯದಲ್ಲೇ ‘ಸಮುದ್ರ ಮಂಥನ’ ತೆರೆಗೆ ಅಪ್ಪಳಿಸಲು ಭರ್ಜರಿ ಸಿದ್ಧತೆ ನಡೆಸಿದೆ.