ʻರಾಮಾಯಣʼ ಸಿನಿಮಾ ಡಿಸ್ಟ್ರೀಬ್ಯೂಷನ್ ರೈಟ್ಸ್ ಬೆಲೆ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ವಿತರಕರು! ನಿರ್ಮಾಪಕರ ಡಿಮ್ಯಾಂಡ್ ಏನು?
'ರಾಮಾಯಣ' ಸಿನಿಮಾದ ಹಿಂದಿ ಆವೃತ್ತಿಯ ಥಿಯೇಟ್ರಿಕಲ್ ವಿತರಣಾ ಹಕ್ಕುಗಳಿಗಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಬರೋಬ್ಬರಿ 450 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. 2026ರ ದೀಪಾವಳಿಗೆ ರಿಲೀಸ್ ಆಗಲಿರುವ ಈ ಚಿತ್ರದ ಬೆಲೆ ಕೇಳಿ ವಿತರಕರು ಹಿಂಜರಿಯುತ್ತಿದ್ದಾರೆ.
-
ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ರಾಮಾಯಣ' ಸಿನಿಮಾವು 2026ರ ದೀಪಾವಳಿ ಪ್ರಯುಕ್ತ ಬಿಡುಗಡೆ ಆಗಲಿದೆ. ಆದರೆ, ಅದಕ್ಕೂ ಮುನ್ನ ಈ ಚಿತ್ರದ ದೇಶೀಯ ವಿತರಣಾ ಹಕ್ಕುಗಳ ಕುರಿತಾದ ಚರ್ಚೆಗಳು ಜೋರಾಗಿವೆ. 'ವೆರೈಟಿ ಇಂಡಿಯಾ' ವರದಿಯ ಪ್ರಕಾರ, ಭಾರತದ ಅತ್ಯಂತ ದುಬಾರಿ ಸಿನಿಮಾ ಎಂದು ಬಿಂಬಿತವಾಗುತ್ತಿರುವ ಈ ಚಿತ್ರದ ಡಿಸ್ಟ್ರೀಬ್ಯೂಷನ್ ರೈಟ್ಸ್ ಪಡೆದುಕೊಳ್ಳಲು ದೇಶದ ಪ್ರಮುಖ ವಿತರಣಾ ಸಂಸ್ಥೆಗಳು ಮುಂದಾಗಿವೆಯಂತೆ. ಆದರೆ ನಿರ್ಮಾಪಕರು ಕೋಟ್ ಮಾಡುತ್ತಿರುವ ಬೆಲೆ ಕೇಳಿ ಹೌಹಾರಿದ್ದಾರೆ ಎನ್ನಲಾಗಿದೆ.
ಹೌದು, ರಾಮಾಯಣ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೇವಲ ಹಿಂದಿ ಅವೃತ್ತಿಯ ಥಿಯೇಟ್ರಿಕಲ್ ವಿತರಣಾ ಹಕ್ಕುಗಳಿಗಾಗಿಯೇ ಬರೋಬ್ಬರಿ 450 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಮೊತ್ತಕ್ಕೆ ಡೀಲ್ ಕುದುರಿದರೆ, ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಇದು ಸಾರ್ವಕಾಲಿಕ ದಾಖಲೆಯಾಗಲಿದೆ. ವಿತರಕರು ಸದ್ಯಕ್ಕೆ ಈ ಒಪ್ಪಂದಕ್ಕೆ ಸಹಿ ಹಾಕಲು ಹಿಂಜರಿಯುತ್ತಿದ್ದಾರೆ. ಈ ಮೊತ್ತಕ್ಕೆ ಡೀಲ್ ಮುಗಿಸಲು ಸಿದ್ಧರಿಲ್ಲ ಎನ್ನಲಾಗಿದೆ.
Ramayana Movie: ರಾಮಾಯಣದ ಈ 20 ನಿಮಿಷಗಳ ಕ್ಲಿಪ್ ಬಗ್ಗೆ ಭಾರಿ ಮೆಚ್ಚುಗೆ; ಏನಿದು ಸುದ್ದಿ?
ಶಾರುಖ್ ಸಿನಿಮಾಗೆ 250 ಕೋಟಿ ರೂ.
ಇದಕ್ಕೆ ಕಾರಣ ಇತ್ತೀಚೆಗಷ್ಟೇ ಶಾರುಖ್ ಖಾನ್ ನಟನೆಯ ಮುಂಬರುವ 'ಕಿಂಗ್' ಚಿತ್ರದ ಥಿಯೇಟ್ರಿಕಲ್ ಹಕ್ಕುಗಳನ್ನು 'ಪೆನ್ ಮರುಧರ್' ಸಂಸ್ಥೆಯು 250 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಆದರೆ, 'ರಾಮಾಯಣ' ಚಿತ್ರಕ್ಕೆ ಕೇಳುತ್ತಿರುವ ಬೆಲೆ ತುಂಬಾ ಹೆಚ್ಚಾಗಿದೆ ಎಂಬುದು ವಿತರಕರ ಅಭಿಪ್ರಾಯ. ಸದ್ಯ ಬಾಲಿವುಡ್‌ನ ಪ್ರಮುಖ ವಿತರಕರಾದ ಅನಿಲ್ ತಡಾನಿ, ಜಯಂತಿಲಾಲ್ ಗಡ ಮತ್ತು ಕರಣ್ ಜೋಹರ್ ಅವರು ರಾಮಾಯಣ ಚಿತ್ರದ ವಿತರಣೆ ಹಕ್ಕುಗಳನ್ನು ಖರೀದಿಸಲು ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ.
Ramayana Teaser: ರಣಬೀರ್ ಮುಖದಲ್ಲಿ ಮುಗ್ಧತೆ ಇಲ್ಲ ಎಂದ 'ರಾಮಾಯಣ' ನಟ
ರಾಮಾಯಣ ಬರೆಯಲಿದೆಯಾ ದಾಖಲೆ?
ಈ ಡೀಲ್ 450 ಕೋಟಿ ರೂ. ಬದಲು, ಅಂತಿಮವಾಗಿ 300-400 ಕೋಟಿ ರೂಪಾಯಿಗೆ ಓಕೆ ಆದರೂ, ಅದು ಹಿಂದಿ ಚಿತ್ರರಂಗದ ವ್ಯಾಪಾರ ವಲಯದಲ್ಲಿ ಹೊಸ ಮೈಲಿಗಲ್ಲಾಗಲಿದೆ. ಸದ್ಯಕ್ಕಂತೂ ನಿರ್ಮಾಪಕ ನಮೀತ್ ಮಲ್ಹೋತ್ರಾ 450 ಕೋಟಿ ರೂ.ಗಿಂತ ಕಡಿಮೆಗೆ ಒಪ್ಪುತ್ತಿಲ್ಲ ಎನ್ನಲಾಗಿದೆ. ಈ ಸಿನಿಮಾವನ್ನು 450 ಕೋಟಿ ರೂ. ಖರೀದಿ ಮಾಡಿದರೂ ಗೆಲುವು ಕಾಣಬಹುದು. ಯಾಕೆಂದರೆ, ಈ ಸಿನಿಮಾಕ್ಕೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿಯೇ 1,000 ಕೋಟಿಯಿಂದ 1,500 ಕೋಟಿ ರೂ.ವರೆಗೂ ನೆಟ್ ಕಲೆಕ್ಷನ್ ಮಾಡುವ ಸಾಮರ್ಥ್ಯ ಇದೆ. ಇದರಿಂದ ವಿತರಕರಿಗೆ ಲಾಭವಾಗಲಿದೆ ಎಂಬ ವಾದವನ್ನು ನಮೀತ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಡಿಜಿಟಲ್ ಹಕ್ಕುಗಳಿಂದಲೇ 1 ಸಾವಿರ ಕೋಟಿ ರೂಪಾಯಿ ಗಳಿಸುವ ಗುರಿಯೂ ಅವರದ್ದಾಗಿದೆ ಎಂಬ ಟಾಕ್ ಇದೆ.
ಅಂದಹಾಗೆ, 'ರಾಮಾಯಣ' ಚಿತ್ರದಲ್ಲಿ ಪ್ರಭು ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಸೀತಾದೇವಿಯಾಗಿ ಸಾಯಿ ಪಲ್ಲವಿ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.