'ಟಗರು ಪಲ್ಯ' ಡೈರೆಕ್ಟರ್ ಜೊತೆ ಹೊಸ ಸಿನಿಮಾಕ್ಕಾಗಿ ಕೈಜೋಡಿಸಿದ 'ಪುಟ್ಟಕ್ಕನ ಮಕ್ಕಳು' ನಟ ಧನುಷ್
'ಟಗರು ಪಲ್ಯ' ಖ್ಯಾತಿಯ ನಿರ್ದೇಶಕ ಉಮೇಶ್ ಕೆ. ಕೃಪ ತಮ್ಮ ಎರಡನೇ ಸಿನಿಮಾಗೆ ಸದ್ದಿಲ್ಲದೆ ಚಾಲನೆ ನೀಡಿದ್ದು, ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಖ್ಯಾತ ನಟ ಧನುಷ್ ಮತ್ತು ಮನಸ್ವಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
-
ಎರಡು ವರ್ಷಗಳ ಹಿಂದೆ ತೆರೆಕಂಡು ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಸೂಪರ್ ಹಿಟ್ ಕೌಟುಂಬಿಕ ಚಿತ್ರ ʻಟಗರು ಪಲ್ಯʼ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದವರು ಉಮೇಶ್ ಕೆ. ಕೃಪ. ಇದೀಗ ಇವರು ತಮ್ಮ ಎರಡನೇ ಸಿನಿಮಾಗೆ ಸದ್ದಿಲ್ಲದೆ ಚಾಲನೆ ನೀಡಿದ್ದಾರೆ. ಆಕಾಂಕ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗೇಶ್ ವಾಸ್ಟರ್ ಬಂಡವಾಳ ಹೂಡುತ್ತಿರುವ ಈ ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭವು ಬೆಂಗಳೂರಿನ ಪ್ರಸಿದ್ಧ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ.
ಈ ಸಿನಿಮಾಗೆ ಕಥೆಯೇ ನಾಯಕ
ಮುಹೂರ್ತದ ಬಳಿಕ ಮಾತನಾಡಿದ ನಿರ್ದೇಶಕ ಉಮೇಶ್ ಕೆ. ಕೃಪ, "ನನ್ನ ಚೊಚ್ಚಲ ನಿರ್ದೇಶನದ 'ಟಗರು ಪಲ್ಯ' ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಹಾಗೂ ಮಾಧ್ಯಮದವರು ತೋರಿದ ಪ್ರೋತ್ಸಾಹ ಮತ್ತು ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗ ಅದೇ ಜವಾಬ್ದಾರಿಯೊಂದಿಗೆ ನನ್ನ 2ನೇ ನಿರ್ದೇಶನದ ಚಿತ್ರಕ್ಕೆ ಚಾಲನೆ ದೊರಕಿದೆ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದು, ಈ ಚಿತ್ರಕ್ಕೆ ಕಥೆಯೇ ಅಸಲಿ ಹೀರೋ. ನನ್ನ ಹಿಂದಿನ ಸಿನಿಮಾದಂತೆಯೇ ಈ ಚಿತ್ರದಲ್ಲೂ ಅನುಭವಿ ಕಲಾವಿದರ ಒಂದು ದೊಡ್ಡ ತಾರಾಬಳಗವೇ ಇರಲಿದೆ" ಎಂದು ಹೇಳಿದ್ದಾರೆ.
"ಸದ್ಯಕ್ಕೆ ಕಿರುತೆರೆಯ ಜನಪ್ರಿಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ 'ಕಂಠಿ' ಪಾತ್ರದ ಮೂಲಕ ಫೇಮಸ್ ಆಗಿರುವ ನಟ ಧನುಷ್ ಹಾಗೂ ಕೆಲವು ಧಾರಾವಾಹಿ- ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಮನಸ್ವಿ ಪ್ರಮುಖ ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ. ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ಸದ್ಯ ಚಾಲ್ತಿಯಲ್ಲಿದೆ" ಎಂದು ಮಾಹಿತಿ ನೀಡುತ್ತಾರೆ ಉಮೇಶ್.
ಈ ಚಿತ್ರದಲ್ಲಿ ಮಳೆಯೇ ಹೈಲೈಟ್
"ಇದೊಂದು ಅಪ್ಪಟ ನಮ್ಮ ನಾಡಿನ ಮಣ್ಣಿನ ಕಥೆ. ಇದರಲ್ಲಿ ಪ್ರೀತಿ, ಆ್ಯಕ್ಷನ್, ಕಾಮಿಡಿ ಹಾಗೂ ಸೆಂಟಿಮೆಂಟ್ ಹೀಗೆ ಪ್ರತಿಯೊಬ್ಬ ನೋಡುಗನಿಗೂ ಬೇಕಾದ ಎಲ್ಲಾ ಕಮರ್ಷಿಯಲ್ ಅಂಶಗಳೂ ಇಲ್ಲಿವೆ. ಕುಟುಂಬಸಮೇತ ಕುಳಿತು ಎಲ್ಲರೂ ಆನಂದಿಸಬಹುದಾದ ಪಕ್ಕಾ ಮನೋರಂಜನಾ ಚಿತ್ರವಿದು. ವಿಶೇಷವೆಂದರೆ, ಈ ಕಥೆಯಲ್ಲಿ 'ಮಳೆ' ಕೂಡ ಒಂದು ಮುಖ್ಯ ಪಾತ್ರವಾಗಿ ಕಾಣಿಸಿಕೊಳ್ಳಲಿದೆ. ಇದೇ ಕಾರಣಕ್ಕಾಗಿ ನಾವು ಚಿತ್ರೀಕರಣಕ್ಕೆ ಮಳೆಗಾಲದ ಸಮಯವನ್ನೇ ನಿಗದಿ ಮಾಡಿಕೊಂಡು ಕಾಯುತ್ತಿದ್ದೆವು. ಮುಂದಿನ ವಾರದಿಂದಲೇ ಅಧಿಕೃತವಾಗಿ ಚಿತ್ರೀಕರಣ ಆರಂಭವಾಗಲಿದ್ದು, ತೀರ್ಥಹಳ್ಳಿ, ಆಗುಂಬೆ, ಕಾರ್ಕಳ ಹಾಗೂ ಚಿಕ್ಕಮಗಳೂರಿನ ಸುತ್ತಮುತ್ತ ಮೊದಲ ಹಂತದ ಶೂಟಿಂಗ್ ನಡೆಸಲು ಪ್ಲಾನ್ ಮಾಡಿಕೊಂಡಿದ್ದೇವೆ" ಎನ್ನುತ್ತಾರೆ ಉಮೇಶ್.
ಎಸ್.ಕೆ. ರಾವ್ ಅವರ ಛಾಯಾಗ್ರಹಣ ಹಾಗೂ ಪಳನಿ ಡಿ. ಸೇನಾಪತಿ ಅವರ ಸಂಗೀತ ನಿರ್ದೇಶನವಿರಲಿದೆ. ಮಧು ತುಂಬಕೆರೆ ಸಂಕಲನದ ಹೊಣೆ ಹೊತ್ತಿದ್ದರೆ, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಹಾಗೂ ಎ. ಸತೀಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.