ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vikalpa Review: ಭಯ ಮತ್ತು ಭ್ರಮೆಯ ನಡುವಿನ ವಾಸ್ತವದ ಸೈಕಲಾಜಿಕಲ್ ಥ್ರಿಲ್ಲರ್

Vikalpa Movie Review: ಭಯ ಮತ್ತು ಭ್ರಮೆಯ ನಡುವಿನ ಸಂಘರ್ಷದ ಕಥೆಯನ್ನ ವಿಕಲ್ಪ ಚಿತ್ರದ ಮೂಲಕ ನಿರ್ದೇಶಕ ಹಾಗೂ ನಟ ಪೃಥ್ವಿರಾಜ್ ಪಾಟೀಲ್ ಹೇಳಿದ್ದಾರೆ. ಯಕ್ಷಗಾನ ಕಲೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬ್ಲೆಂಡ್‌ ಮಾಡಿ, ಈ ಸಿನಿಮಾ ಮಾಡಲಾಗಿದ್ದು, ಇದರ ವಿಮರ್ಶೆ ಮತ್ತು ರೇಟಿಂಗ್‌ ಬಗ್ಗೆ ಇಲ್ಲಿದೆ ಮಾಹಿತಿ.

Vikalpa Review: ಸೈಕಲಾಜಿಕಲ್ ಥ್ರಿಲ್ಲರ್  ʻವಿಕಲ್ಪʼ ಸಿನಿಮಾದ ವಿಮರ್ಶೆ

-

Avinash GR
Avinash GR Jan 31, 2026 1:38 PM

ಮೂಲತಃ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಪೃಥ್ವಿರಾಜ್ ಪಾಟೀಲ್ ಅವರು ʻವಿಕಲ್ಪʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ, ನಟರಾಗಿ ಎಂಟ್ರಿ ನೀಡಿದ್ದಾರೆ. ತಮ್ಮ ವೈಯಕ್ತಿಕ ಅನುಭವಗಳನ್ನು ಆಧರಿಸಿ 'ವಿಕಲ್ಪ' ಸಿನಿಮಾ ಮಾಡಿರುವ ಅವರು, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಜಾನರ್‌ನ ಸಿನಿಮಾ ಎಂದು ಹೇಳಿದ್ದರು. ಹಾಗ್ನೋಡಿದ್ರೆ ಸ್ಯಾಂಡಲ್‌ವುಡ್‌ನಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಮಾದರಿಯ ಸಿನಿಮಾಗಳು ತೆರೆಕಾಣುವುದು ತೀರಾ ಅಪರೂಪ. ಸದ್ಯ ತೆರೆಕಂಡಿರುವ ಸೈಕಲಾಜಿಕಲ್ ಥ್ರಿಲ್ಲರ್ ವಿಕಲ್ಪ ಹೇಗಿದೆ? ಮುಂದೆ ಓದಿ.

ವಿಕಲ್ಪ ಕಥೆ ಏನು?

ಪ್ರೀತಿ, ಬಾಂಧವ್ಯ ಮತ್ತು ಹಾಸ್ಯದ ಅಂಶಗಳ ಜೊತೆಗೆ ಯಕ್ಷಗಾನವನ್ನು ಮುಖ್ಯವಾಗಿಟ್ಟುಕೊಂಡು ವಿಕಲ್ಪ ಸಿನಿಮಾ ಸಾಗುತ್ತದೆ. ಭ್ರಮೆ, ಭಯ ಮತ್ತು ವಾಸ್ತವದ ತಳಹದಿಯ ಮೇಲೆ ಸಾಗುವ ಈ ಕಥೆಯಲ್ಲಿ ಕಥಾ ನಾಯಕ ಪೃಥ್ವಿ ಅಲಿಯಾಸ್ ಪಿಟ್ಟು (ಪೃಥ್ವಿರಾಜ್) ಬಾಲ್ಯದಲ್ಲಿ ನಡೆದ ಒಂದು ಘಟನೆ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ. ಆ ಭಯ ಅವನನ್ನು ಎಷ್ಟು ಕಾಡುತ್ತದೆ ಎಂದರೆ, ಆತನಿಗೆ ಈಗ 33 ವರ್ಷ ವಯಸ್ಸು! ಆದರೂ ಆ ಭಯ ಬಿಡದಂತೆಯೇ ಅವನನ್ನು ಕಾಡುತ್ತಿರುತ್ತದೆ. ಆತನಿಗೆ ವಿಚಿತ್ರ ಅನುಭವಗಳಾಗುತ್ತಿರುತ್ತವೆ. ಈ ಮಾನಸಿಕ ಯಾತನೆಯಿಂದ ಪೃಥ್ವಿ ಬದುಕಿನಲ್ಲಿ ಏನೆಲ್ಲಾ ಅಲ್ಲೋಲ ಕಲ್ಲೋಲಗಳಾಗುತ್ತವೆ? ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ? ಇದು ದೆವ್ವದ ಕಾಟವೇ ಅಥವಾ ಮಾನಸಿಕ ತಳಮಳವೇ? ಅಷ್ಟಕ್ಕೂ ಬಾಲ್ಯದಲ್ಲಿ ನಡೆದ ಆ ಘಟನೆ ಏನು? ಈ ಎಲ್ಲಾ ಪ್ರಶ್ನೆಗಳ ಜೊತೆಗೆ ವಿಕಲ್ಪ ಸಿನಿಮಾ ಸಾಗುತ್ತದೆ.

Vikalpa Trailer: ಸೈಕಾಲಜಿಕಲ್‌ ಥ್ರಿಲ್ಲರ್‌ ʻವಿಕಲ್ಪʼ ಟ್ರೈಲರ್‌ ಔಟ್‌; ತೆರೆಗೆ ಯಾವಾಗ?

ಮೇಕಿಂಗ್‌ ಹೇಗಿದೆ?

ಇಡೀ ಸಿನಿಮಾವನ್ನು ಯಕ್ಷಗಾನದ ಜೊತೆಗೆ ಬ್ಲೆಂಡ್‌ ಮಾಡಿಕೊಂಡು, ನಿರೂಪಣೆ ಮಾಡಿದ್ದಾರೆ ನಿರ್ದೇಶಕ ಪೃಥ್ವಿರಾಜ್.‌ ಇಲ್ಲಿ ಯಕ್ಷಗಾನಕ್ಕೂ ಬಹಳ ಪ್ರಮುಖವಾದ ಪಾತ್ರವಿದೆ. ಇನ್ನು, ಇಲ್ಲಿ ಪೃಥ್ವಿರಾಜ್ ಕಥೆ ಹೇಳುವುದಕ್ಕೆ ಫ್ಲ್ಯಾಶ್‌ಬ್ಯಾಕ್ ತಂತ್ರ ಬಳಕೆ ಮಾಡಿರುವುದು ಕುತೂಹಲವನ್ನು ಹೆಚ್ಚಿಸಿದೆ. ಆರಂಭದಿಂದ ಅಂತ್ಯದವರೆಗೂ ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ಸಿನಿಮಾದ ನಿರೂಪಣೆ ಯಶಸ್ವಿಯಾಗಿದೆ. ಇಡೀ ಸಿನಿಮಾವನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ ಮತ್ತು ಪಾತ್ರಗಳ ನೈಜ ಅಭಿನಯ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಚಿತ್ರಕ್ಕೆ ಒಂದು ಮೂಡ್‌ ಅನ್ನು ಕಟ್ಟಿಕೊಡಲು ಸಹಾಯಕವಾಗಿರುವ ಸಂಗೀತ ಮತ್ತು ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಮೆಚ್ಚುಗೆ ಸಲ್ಲಬೇಕು.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದರೂ, ಅದರೊಳಗೆ ಪ್ರೇಮಕಥೆ, ತಾಯಿ ಸೆಂಟಿಮೆಂಟ್ ಅನ್ನು ಸೇರಿಸಲಾಗಿದೆ. ವಿಕಲ್ಪ ಚಿತ್ರದ ಕಥೆ ಸರಳವಾಗಿದೆ. ಆದರೆ ಚಿತ್ರಕಥೆಯಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು. ರೋಚಕ ತಿರುವುಗಳನ್ನು ನೀಡಿದ್ದರೆ ವಿಕಲ್ಪ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು. ಇನ್ನು, ಮೌಢ್ಯಗಳನ್ನು ಪ್ರಚಾರ ಮಾಡುವುದರ ಬದಲು ವೈಜ್ಞಾನಿಕತೆಯ ಪ್ರದರ್ಶನ ಮಾಡಿರುವುದು, ಚಿತ್ರತಂಡದ ಪ್ರಬುದ್ಧತೆಗೆ ಸಾಕ್ಷಿಯಾಗಿದೆ.

ನಟನೆ ಮತ್ತು ನಿರ್ದೇಶನ ಎರಡನ್ನೂ ಬ್ಯಾಲೆನ್ಸ್‌ ಮಾಡುವಲ್ಲಿ ಪೃಥ್ವಿರಾಜ್‌ ಪಾಟೀಲ್‌ ಭಾಗಶಃ ಗೆದ್ದಿದ್ದಾರೆ. ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪೃಥ್ವಿರಾಜ್ ಪಾಟೀಲ್ ಮತ್ತು ಗಣಪತಿ ಹೆಗಡೆ ವಡ್ಡಿನಗದ್ದೆ ಅವರ ನಡುವಿನ ಕೆಲವು ಹಾಸ್ಯ ದೃಶ್ಯಗಳು ನಗು ತರಿಸುತ್ತವೆ ಮತ್ತು ಇದು ಚಿತ್ರಕ್ಕೆ ಅಲ್ಲಲ್ಲಿ ಬೂಸ್ಟ್‌ ನೀಡುತ್ತದೆ.

ಒಟ್ಟಾರೆಯಾಗಿ, ಸಾಮಾನ್ಯ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿ ಕಟ್ಟಿಕೊಟ್ಟಿರುವ 'ವಿಕಲ್ಪ' ಚಿತ್ರವು ಸೈಕಲಾಜಿಕಲ್ ಹಾರರ್-ಥ್ರಿಲ್ಲರ್ ಮತ್ತು ಉತ್ತಮ ಸಸ್ಪೆನ್ಸ್ ಇಷ್ಟಪಡುವ ಪ್ರೇಕ್ಷಕರಿಗೆ ಇಷ್ಟವಾಗಬಹುದು. ಜೊತೆಗೆ ಯಕ್ಷಗಾನ ಪ್ರಿಯರಿಗೂ!

Movie: ವಿಕಲ್ಪ

Release Date: ಜನವರಿ 30, 2026

Language: ಕನ್ನಡ

Genre: ಥ್ರಿಲ್ಲರ್‌, ಡ್ರಾಮಾ

Director: ಪೃಥ್ವಿರಾಜ್ ಪಾಟೀಲ್

Cast: ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಗಣಪತಿ ಹೆಗಡೆ ವಡ್ಡಿನಗದ್ದೆ, ಸ್ವರೂಪ್

Duration: 122 Minutes

Rating: 3/5