ಕಟ್ಟುನಿಟ್ಟಿನ ನಿಯಮ ಇದ್ದರೂ ಕೇಂದ್ರ ಕಾರಾಗೃಹದಲ್ಲಿ ಪ್ರೇಮ ಪಕ್ಷಿಗಳ ರೀಲ್ಸ್; ಕಾನೂನು ಉಲ್ಲಂಘಿಸಿ ವಿಡಿಯೊ ಶೂಟ್ ಮಾಡಿದ್ದು ಹೇಗೆ?
Raipur Central Jail: ಛತ್ತೀಸ್‌ಗಢದ ರಾಯ್‌ಪುರ ಕೇಂದ್ರ ಕಾರಾಗೃಹದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಮತ್ತೊಮ್ಮೆ ವಿವಾದಕ್ಕೀಡಾಗಿದೆ. ಜೈಲಿನ ಭೇಟಿ ವೇಳೆಯಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿ ಖೈದಿಯೊಂದಿಗೆ ಮುಕ್ತವಾಗಿ ವಿಡಿಯೊ ರೆಕಾರ್ಡಿಂಗ್ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ.
ಜೈಲಿನಲ್ಲಿರುವ ಪ್ರೇಮಿಯೊಂದಿಗೆ ಯುವತಿಯ ರೀಲ್ಸ್ -
ರಾಯ್‌ಪುರ, ಜ. 31: ಛತ್ತೀಸ್‌ಗಢದ ಅತ್ಯಂತ ಸುರಕ್ಷಿತ ಜೈಲುಗಳಲ್ಲಿ ಒಂದೆಂದು ಪರಿಗಣಿಸಲಾದ ರಾಯ್‌ಪುರ ಕೇಂದ್ರ ಕಾರಾಗೃಹವು (Raipur Central Jail) ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಯುವತಿಯೊಬ್ಬಳು ಜೈಲಿನಲ್ಲಿರುವ ತನ್ನ ಗೆಳೆಯನನ್ನು ಭೇಟಿಯಾಗಿದ್ದಾಳೆ. ಈ ವೇಳೆ ಜೈಲಿನ ಸಂದರ್ಶಕ ಕೋಣೆಯೊಳಗೆ ಮುಕ್ತವಾಗಿ ವಿಡಿಯೊ ರೆಕಾರ್ಡ್ ಮಾಡಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗುತ್ತಿದ್ದಂತೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಜೈಲಿನ ಭದ್ರತೆ ಮತ್ತು ಅಧಿಕೃತ ಮೇಲ್ವಿಚಾರಣೆಯ ಬಗ್ಗೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಯುವತಿಯು ಭಾವನಾತ್ಮಕವಾಗಿ ಕ್ಯಾಮರಾದ ಮುಂದೆ ಮಾತನಾಡುತ್ತ, ʼʼಇಂದು ನನ್ನ ಪ್ರೇಮಿಯ ಹುಟ್ಟುಹಬ್ಬ. ನಾನು ಅವನನ್ನು ಭೇಟಿಯಾಗಲು ಕೇಂದ್ರ ಕಾರಾಗೃಹಕ್ಕೆ ಬಂದಿದ್ದೇನೆ. ಅವನು ನನ್ನೊಂದಿಗೆ ಇಲ್ಲದಿರುವುದು ತುಂಬ ನೋವುಂಟು ಮಾಡುತ್ತದೆ. ಅವನ ಹುಟ್ಟುಹಬ್ಬದಂದು ನಾನು ಅವನೊಂದಿಗೆ ಇಲ್ಲ. ಆದರೆ ನಾನು ಅವನನ್ನು ಭೇಟಿಯಾಗಲು ಬಂದಿದ್ದೇನೆ. ಅವನ ಪ್ರತಿಕ್ರಿಯೆ ಏನೆಂದು ನೋಡೋಣʼʼ ಎಂದು ಹೇಳಿದ್ದಾಳೆ.
ಸಂದರ್ಶಕ ಕೋಣೆಯೊಳಗೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ವಿಡಿಯೊವನ್ನು ಚಿತ್ರೀಕರಿಸಿದ್ದಾಳೆ. ಬಳಿಕ ವಿಡಿಯೊವನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾಳೆ. ಬಳಿಕ ಇದು ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ:
#BreakingNews #ChhattisgarhNews #RaipurNews #CentralJail #PoliceNews
— Mukesh S Singh (@truth_finder04) January 29, 2026
Breaking | Raipur Central Jail under scanner
रायपुर सेंट्रल जेल से viral video सामने आया है।
Mobile ban के बावजूद आरोपी से मिलने आई girlfriend ने mulaqat room में video रिकॉर्ड कर Insta पर डाल दिया. @CG_Police… pic.twitter.com/HbCbPYjUiQ
ಖೈದಿಯನ್ನು ತಾರಕೇಶ್ವರ ಎಂದು ಗುರುತಿಸಲಾಗಿದ್ದು, ಮಾದಕ ದ್ರವ್ಯ ಮತ್ತು ಎನ್‌ಡಿಪಿಎಸ್ ಕಾಯ್ದೆ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ಪ್ರಸ್ತುತ ರಾಯ್‌ಪುರ ಕೇಂದ್ರ ಕಾರಾಗೃಹದಲ್ಲಿದ್ದಾನೆ. ವೈರಲ್ ವಿಡಿಯೊದ ಬಗ್ಗೆ ಜೈಲು ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದು ಭಾವನಾತ್ಮಕ ಪುನರ್ಮಿಲನವಲ್ಲ, ಬದಲಾಗಿ ಜೈಲು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೇಟಿ ನೀಡುವ ಪ್ರದೇಶಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಯುವತಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಲ್ಲದೆ ಜೈಲಿನೊಳಗೆ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾಳೆ. ಅಷ್ಟೇ ಅಲ್ಲ ಆ ವಿಡಿಯೊಗೆ ʼಖುದಾ ಗವಾʼ ಸಿನಿಮಾದ ʼತು ನಾ ಜಾ ಮೇರೆ ಬಾದ್‌ಶಾʼ ಹಾಡನ್ನು ಹಾಕಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾಳೆ.
ಇತ್ತೀಚಿಗೆ ಜೈಲಿನ ಒಳಗಿನಿಂದ ಹಲವು ವಿಡಿಯೊಗಳು ವೈರಲ್ ಆಗಿದ್ದು, ಕಟ್ಟುನಿಟ್ಟಿನ ಕ್ರಮವಿಲ್ಲ ಎಂಬ ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿದೆ.
ಇದು ಜೈಲು ಹಕ್ಕಿಗಳ ಲವ್ ಸ್ಟೋರಿ: ಕೊಲೆ ಪಾತಕಿಗಳ ನಡುವೆ ಪ್ರೇಮಾಂಕುರ
ಪ್ರತ್ಯೇಕ ಪ್ರಕರಣದಲ್ಲಿರಾಯ್‌ಪುರ ಜೈಲಿನಲ್ಲಿರುವ ಆರೋಪಿ ಖೈದಿ ಮೊಹಮ್ಮದ್ ರಶೀದ್ ಅಲಿ ಅಲಿಯಾಸ್ ರಾಜಾ ಬೈಜಾದ್ ಎಂಬಾತ ಮೂರು ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಜಿಮ್ ವ್ಯಾಯಾಮದ ವಿಡಿಯೊಗಳು ಮತ್ತು ಸಹ ಖೈದಿಗಳೊಂದಿಗೆ ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾನೆ. ಅಕ್ಟೋಬರ್ 13 ಮತ್ತು 15ರ ನಡುವೆ, ಆತ ಜೈಲಿನೊಳಗೆ ವ್ಯಾಯಾಮ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿತ್ತು.
ರಶೀದ್ ಅಲಿ ವಿರುದ್ಧ 2014ರಿಂದ ಕೊಲೆ, ಎನ್‌ಡಿಪಿಎಸ್ ಉಲ್ಲಂಘನೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳು, ಹಲ್ಲೆ ಮತ್ತು ಕೊಲೆ ಬೆದರಿಕೆ ಸೇರಿದಂತೆ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮೊದಲು, ರಾಯ್‌ಪುರ ಕೇಂದ್ರ ಜೈಲಿನಲ್ಲಿ ಜಾರ್ಖಂಡ್‌ನ ದರೋಡೆಕೋರ ಅಮನ್ ಸಾನ ಫೋಟೊಶೂಟ್ ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು. ಆ ಫೋಟೊಗಳು ಸಹ ವೈರಲ್ ಆಗಿದ್ದವು. ಖೈದಿಗಳು ಮತ್ತು ಜೈಲು ಅಧಿಕಾರಿಗಳ ನಡುವಿನ ಒಪ್ಪಂದದ ಆರೋಪಗಳು ಕೇಳಿಬಂದಿದ್ದವು. ನಂತರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅಮನ್ ಸಾ ಹತನಾಗಿದ್ದ.