ದಸರಾ ಹಬ್ಬದ ಮೇಲೆ ಕಣ್ಣಿಟ್ಟ ರಜನಿಕಾಂತ್; ʻಜೈಲರ್ 2ʼ ರಿಲೀಸ್ ಡೇಟ್ ಫಿಕ್ಸ್, ಫುಲ್ ಖುಷ್ ಆದ್ರು ʻತಲೈವಾʼ ಫ್ಯಾನ್ಸ್!
ʻಸೂಪರ್ ಸ್ಟಾರ್ʼ ರಜನಿಕಾಂತ್ ಮತ್ತು ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ಅಕ್ಟೋಬರ್ 15 ರ ದಸರಾ ಹಬ್ಬದ ಸುದಿನದಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇಂದು ಬಿಡುಗಡೆಯಾದ ಭರ್ಜರಿ ಪ್ರೋಮೋದಲ್ಲಿ ತಲೈವಾ ಖಡಕ್ ಲುಕ್ ಅನಾವರಣಗೊಂಡಿದೆ.
-
`ಸೂಪರ್ ಸ್ಟಾರ್' ರಜನಿಕಾಂತ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಆ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗದಲ್ಲೇ ತೀವ್ರ ಕುತೂಹಲ ಮೂಡಿಸಿರುವ 'ಜೈಲರ್ 2' ಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕವನ್ನು ಚಿತ್ರತಂಡವು ಇಂದು (ಜುಲೈ 2) ಭರ್ಜರಿ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಪ್ರಕಟಿಸಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಮೆಗಾ ಆ್ಯಕ್ಷನ್ ಸಿನಿಮಾ ಅಕ್ಟೋಬರ್ 15 ರಂದು ದಸರಾ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ತೆರೆಕಾಣಲಿದೆ.
ಸಾಲು ಸಾಲು ರಜೆಯಿಂದ ಸಖತ್ ಲಾಭ
ಚಿತ್ರತಂಡ ಹಂಚಿಕೊಂಡಿರುವ ವಿಶೇಷ ಪ್ರೋಮೋ ವಿಡಿಯೋದಲ್ಲಿ ರಜನಿಕಾಂತ್ ಅವರ ಖಡಕ್ ಎಂಟ್ರಿಯ ಝಲಕ್ ತೋರಿಸಲಾಗಿದೆ. ಅನಿರುದ್ಧ್ ರವಿಚಂದರ್ ಅವರ ಭರ್ಜರಿ ಹಿನ್ನೆಲೆ ಸಂಗೀತದೊಂದಿಗೆ ತಲೈವಾ ನೆರಳಿನಲ್ಲಿ ಕಾಣಿಸಿಕೊಂಡು, ರಸ್ತೆಯಲ್ಲಿ ನಡೆದು ಬರುವ ಮಾಸ್ ದೃಶ್ಯ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.
ಚಿತ್ರತಂಡವು, "ಅಕ್ಟೋಬರ್ 15 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ #Jailer2FromOct15" ಎಂದು ಮಾಹಿತಿ ಹಂಚಿಕೊಂಡಿದೆ. ಅಕ್ಟೋಬರ್ 15ರ ಗುರುವಾರ ಸಿನಿಮಾ ತೆರೆಗೆ ಬರುತ್ತಿರುವುದರಿಂದ, ಸಾಲು ಸಾಲು ದಸರಾ ರಜೆ ಹಾಗೂ ಸುದೀರ್ಘ ವಾರಾಂತ್ಯದ ಲಾಭ ಚಿತ್ರಕ್ಕೆ ಸಿಗಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ಚಿತ್ರತಂಡದ್ದಾಗಿದೆ.
ಮಾಜಿ ಅಳಿಯ ಧನುಷ್ ಜೊತೆಗೆ ಕ್ಲ್ಯಾಶ್?
ಕುತೂಹಲಕಾರಿ ವಿಷಯವೆಂದರೆ, ಧನುಷ್ ಮತ್ತು ಮಮ್ಮುಟ್ಟಿ ನಟನೆಯ ಬಹುನಿರೀಕ್ಷಿತ 'ಓಂ' ಚಿತ್ರವು ಈಗಾಗಲೇ ಅಕ್ಟೋಬರ್ 16 ರಂದು ಬಿಡುಗಡೆಯಾಗಲು ದಿನಾಂಕ ನಿಗದಿಪಡಿಸಿದೆ. ಈಗ ರಜನಿಕಾಂತ್ ಅವರ ಸಿನಿಮಾ ಒಂದು ದಿನ ಮುಂಚಿತವಾಗಿ (ಅಕ್ಟೋಬರ್ 15) ಬರುತ್ತಿದೆ. ʻಓಂʼ ಸಿನಿಮಾವು ಈಗ ಬಹುಶಃ ರಿಲೀಸ್ ದಿನಾಂಕವನ್ನು ಬದಲಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿವೆ.
ʻಜೈಲರ್ 2ʼ ಮೇಲೆ ಭಾರಿ ನಿರೀಕ್ಷೆ
2023 ರಲ್ಲಿ ಬಿಡುಗಡೆಯಾಗಿದ್ದ 'ಜೈಲರ್' ಮೊದಲ ಭಾಗವು ರಜನಿಕಾಂತ್ ವೃತ್ತಿಜೀವನದ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಆಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಅವರ ಅತಿಥಿ ಪಾತ್ರಗಳು ಆ ಚಿತ್ರದ ಪ್ರಮುಖ ಹೈಲೈಟ್ ಆಗಿದ್ದವು. ಇದೀಗ 'ಜೈಲರ್ 2' ಸೀಕ್ವೆಲ್‌ನಲ್ಲಿಯೂ ಆ ಇಬ್ಬರು ನಟರೊಂದಿಗೆ ರಮ್ಯಾ ಕೃಷ್ಣನ್, ವಿನಾಯಕನ್, ಯೋಗಿ ಬಾಬು, ಜಾಕಿ ಶ್ರಾಫ್ ಮುಂತಾದ ದೊಡ್ಡ ತಾರಾಗಣ ಮುಂದುವರಿಯಲಿದ್ದು, ಕೆಲವು ಅಚ್ಚರಿಯ ಪಾತ್ರಗಳೂ ಹೊಸದಾಗಿ ಸೇರ್ಪಡೆಗೊಂಡಿವೆ ಎಂದು ಹೇಳಲಾಗುತ್ತಿದೆ.
Jailer 2 Movie: ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ರಜನಿಕಾಂತ್; 'ಜೈಲರ್ 2' ಚಿತ್ರದ ಟೀಸರ್ ಔಟ್
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಹಾಗೂ ಆರ್. ನಿರ್ಮಲ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಹೃತಿಕ್ ರೋಷನ್ ಅವರು ಈ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.