ರಾವಣನ ಗೆಟಪ್ನಲ್ಲಿ ಮಕ್ಕಳ ಜೊತೆ ಪೋಸ್ ಕೊಟ್ಟ ʻರಾಕಿ ಭಾಯ್ʼ; ದೀಪಾವಳಿ ಸಂಭ್ರಮದಲ್ಲಿ ನಟ ಯಶ್ ಕುಟುಂಬ
ʻರಾಮಾಯಣʼ ಚಿತ್ರದಲ್ಲಿ ಲಂಕೇಶ್ವರನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್, ಈ ಬಾರಿಯ ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಸಂಭ್ರಮಿಸಿದ್ದಾರೆ. ಸಂಪೂರ್ಣ ರಾವಣನ ವೇಷಭೂಷಣದಲ್ಲಿ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜೊತೆ ತಮಾಷೆಯಾಗಿ ಪೋಸ್ ನೀಡಿರುವ ಚಿತ್ರಗಳು ವೈರಲ್ ಆಗಿವೆ.
-
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸ್ಯಾಂಡಲ್ವುಡ್ನ ತಾರಾ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಸುಂದರ ಕ್ಷಣಗಳನ್ನು ಕಳೆದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾದಲ್ಲಿ ಲಂಕೇಶ್ವರ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್, ಹಬ್ಬದ ಪ್ರಯುಕ್ತ ಕುಟುಂಬದ ಜೊತೆಗಿನ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಈ ಫೋಟೋಗಳಲ್ಲಿ ಯಶ್, ಪತ್ನಿ ರಾಧಿಕಾ ಪಂಡಿತ್, ಮಗಳು ಆಯ್ರಾ ಮತ್ತು ಮಗ ಯಥರ್ವ್ ಜೊತೆ ಪೋಸ್ ನೀಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಅಪ್ಪನಂತೆ ಪೋಸ್ ನೀಡಿದ ಮಕ್ಕಳು
ಒಂದು ಫೋಟೋದಲ್ಲಿ ಇಡೀ ಕುಟುಂಬ ಒಟ್ಟಾಗಿ ಪೋಸ್ ನೀಡಿದ್ದರೆ, ನಂತರದ ಫೋಟೋದಲ್ಲಿ ಯಶ್ ಸಂಪೂರ್ಣ ರಾವಣನ ವೇಷಭೂಷಣದಲ್ಲಿ ಮಿಂಚಿದ್ದಾರೆ. ಈ ತಮಾಷೆಯ ಸೆಲ್ಫಿಯಲ್ಲಿ ಯಶ್ ಜೊತೆಗೆ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಕೂಡ ತಂದೆಯ ರಾವಣನ ಮುಖಭಾವ ಹಾಗೂ ರೌದ್ರತೆಯನ್ನು ಅನುಕರಿಸಿ ತಮಾಷೆಯಾಗಿ ಪೋಸ್ ನೀಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇನ್ಸ್ಟಾಗ್ರಾಮ್ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡ ಯಶ್, "ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ನಿರ್ದೇಶಕ ನಿತೇಶ್ ತಿವಾರಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದು ‘ಟಾಕ್ಸಿಕ್’ ನೋಡಿ ತೆಗಳಿಕೆ, ಈಗ ‘ರಾಮಾಯಣ’ ಕಂಡು ಹೊಗಳಿಕೆ; ಯಶ್ ಅಭಿನಯಕ್ಕೆ ರಾಮ್ ಗೋಪಾಲ್ ವರ್ಮಾ ಫಿದಾ!
ರಾವಣನ ಬಗ್ಗೆ ಮಗನಿಗೆ ಹೇಳಿದ್ದ ಯಶ್
ತೆರೆಯ ಮೇಲೆ ರಾವಣನಾಗಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಯಶ್, ನಿಜ ಜೀವನದಲ್ಲಿ ಮಾತ್ರ ಪತ್ನಿ ಮತ್ತು ಮಕ್ಕಳ ಪಾಲಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ್ದ ಯಶ್, ಮಗ ಯಥರ್ವ್ಗೆ ಚಿತ್ರದ ಬಗ್ಗೆ ವಿವರಿಸುತ್ತಾ, "ತೆರೆಯ ಮೇಲೆ ನನ್ನ ರಾವಣನ ಅವತಾರವನ್ನು ಇಷ್ಟಪಡು, ಆದರೆ ನಿಜ ಜೀವನದಲ್ಲಿ ಸದಾ ಶ್ರೀರಾಮನ ಆದರ್ಶಗಳನ್ನು ಪಾಲಿಸು" ಎಂದು ತಿಳಿಹೇಳಿದ್ದಾಗಿ ಹಂಚಿಕೊಂಡಿದ್ದರು. ಸಿನಿಮಾ ಪ್ರಚಾರದುದ್ದಕ್ಕೂ ಮಕ್ಕಳ ಕುರಿತು ಅಪಾರ ಪ್ರೀತಿ ಮತ್ತು ಹೆಮ್ಮೆಯಿಂದ ಮಾತನಾಡುವ ಯಶ್ ಅವರ ಕಾಳಜಿ ಅಭಿಮಾನಿಗಳ ಮನಗೆದ್ದಿದೆ.
ಯಶ್ ಹಂಚಿಕೊಂಡ ಪೋಸ್ಟ್
ಸಾಯಿ ಪಲ್ಲವಿ ಹೇಳಿದ್ದ ಆ ಘಟನೆ
ಅಂದಹಾಗೆ, ಲಾಸ್ ಏಂಜಲೀಸ್ನಲ್ಲಿ ನಡೆದ ಸಿನಿಮಾದ ಪ್ರೀಮಿಯರ್ನಲ್ಲಿ ರಾವಣನ ಪಾತ್ರವು ಪೌರಾಣಿಕ ಪಕ್ಷಿ ಜಟಾಯುವನ್ನು ಕೊಲ್ಲುವ ದೃಶ್ಯವನ್ನು ನೋಡಿ ಯಥರ್ವ್ ತೀವ್ರವಾಗಿ ಬೇಸರಗೊಂಡಿದ್ದನಂತೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಯಶ್, "ಮಕ್ಕಳು ಈಗಷ್ಟೇ ಜೀವನವನ್ನು ಕಲಿಯುತ್ತಿದ್ದಾರೆ, ಒಬ್ಬರಿಗೊಬ್ಬರು ಗೌರವ ಕೊಡುವುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಮಗನ ಈ ಮುಗ್ಧ ಪ್ರಶ್ನೆಗಳು ಮತ್ತು ಪ್ರತಿಕ್ರಿಯೆ ನನಗೆ ನಿಜಕ್ಕೂ ಆಶ್ಚರ್ಯ ತಂದಿತು" ಎಂದಿದ್ದರು. ಸಾಯಿ ಪಲ್ಲವಿ ಕೂಡ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನಪಿಸಿಕೊಂಡು, "ಇದು ಸಿನಿಮಾ ಮತ್ತು ನಟನೆ ಎಂದು ಗೊತ್ತಿದ್ದರೂ, 'ನೀವು ಆ ಹಕ್ಕಿಯನ್ನು ಕೊಂದಿದ್ದು ನನಗೆ ಇಷ್ಟವಾಗಲಿಲ್ಲ, ಸಿನಿಮಾದಲ್ಲಾದರೂ ನೀವು ಹಾಗೆ ಮಾಡಬಾರದಿತ್ತು' ಎಂದು ಯಥರ್ವ್ ತನ್ನ ತಂದೆಗೆ ಮುಗ್ಧವಾಗಿ ಹೇಳಿದ ಕ್ಷಣ ಅತ್ಯಂತ ಸುಂದರವಾಗಿತ್ತು" ಎಂದು ತಿಳಿಸಿದ್ದರು.