‘ರಾಮಾಯಣ’ ಚಿತ್ರದ ಕನ್ನಡ ವರ್ಷನ್ ‘ಜೈ ಜೈ ರಾಮ್’ ಸಾಂಗ್ ರಿಲೀಸ್; ಹಾಡಿಗೆ ಜೀವ ತುಂಬಿದ ಗಾಯಕರಾದ ರಾಘವ್ ಕೌಶಿಕ್ - ರಕ್ಷಿತಾ ಸುರೇಶ್
Ramayana Part 1: ‘ರಾಮಾಯಣ’ ಚಿತ್ರದ ಕನ್ನಡ ವರ್ಷನ್ ‘ಜೈ ಜೈ ರಾಮ್’ ಹಾಡು ಬಿಡುಗಡೆಯಾಗಿದೆ. ನಿತೀಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್ ಮತ್ತು ಯಶ್ ನಟಿಸಿರುವ ಈ ಸಿನಿಮಾಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದು, ರಾಘವ್ ಕೌಶಿಕ್ ಹಾಗೂ ರಕ್ಷಿತಾ ಸುರೇಶ್ ಕನ್ನಡ ವರ್ಷನ್‌ಗೆ ಧ್ವನಿ ನೀಡಿದ್ದಾರೆ.
-
‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಮ್ಯೂಸಿಕಲ್ ಜರ್ನಿ ಅಧಿಕೃತವಾಗಿ ಆರಂಭವಾಗಿದೆ. ಚಿತ್ರತಂಡವು ಶ್ರೀರಾಮನ ದಿವ್ಯ ಚೇತನವನ್ನು ಸಾರುವ ‘ಜೈ ಜೈ ರಾಮ್’ ಎಂಬ ಮೊದಲ ಗೀತೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಈ ಹಾಡು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ.
ಎ. ಆರ್. ರೆಹಮಾನ್ ಸಂಗೀತ ಸಂಯೋಜನೆ
ಆಸ್ಕರ್ ಪುರಸ್ಕೃತ ಭಾರತೀಯ ಚಿತ್ರರಂಗದ ಲೆಜೆಂಡರಿ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಈ ಗೀತೆಗೆ ಸ್ವರ ಸಂಯೋಜಿಸಿದ್ದಾರೆ. ಹಾಡಿನ ಕನ್ನಡ ಆವೃತ್ತಿಗೆ ವರದರಾಜ್ ಚಿಕ್ಕಬಳ್ಳಾಪುರ ಅವರು ಅರ್ಥಪೂರ್ಣ ಸಾಹಿತ್ಯ ರಚಿಸಿದ್ದು, ಗಾಯಕರಾದ ರಾಘವ್ ಕೌಶಿಕ್ ಮತ್ತು ರಕ್ಷಿತಾ ಸುರೇಶ್ ತಮ್ಮ ಸುಮಧುರ ಕಂಠದಲ್ಲಿ ಹಾಡಿಗೆ ಜೀವ ತುಂಬಿದ್ದಾರೆ. ಶ್ರೀರಾಮನ ಕರುಣೆ, ಅಭಯ, ರಕ್ಷಣೆ ಮತ್ತು ಧರ್ಮನಿಷ್ಠೆಯನ್ನು ಸಾರುವ ಸಾಲುಗಳು ಹಾಗೂ ಮತ್ತೆ ಮತ್ತೆ ಮೊಳಗುವ 'ಜೈ ಜೈ ರಾಮ್' ನಾಮಸ್ಮರಣೆಯು ಕೇಳುಗರ ಮನದಲ್ಲಿ ಗಾಢವಾದ ಭಕ್ತಿರಸವನ್ನು ತುಂಬುತ್ತದೆ.
ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದಾನೆ
ಹಾಡಿನ ಕುರಿತು ಮಾತನಾಡಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ, "ಶ್ರೀರಾಮನು ರಾಮಾಯಣದ ಹೃದಯಭಾಗವಾಗಿದ್ದು, ತಲೆಮಾರುಗಳಿಂದ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದಾನೆ" ಎಂದಿದ್ದಾರೆ. ‘ಜೈ ಜೈ ರಾಮ್’ ಗೀತೆಯು ಪ್ರತಿಯೊಬ್ಬ ಭಾರತೀಯನು ಶ್ರೀರಾಮನೊಂದಿಗೆ ಹೊಂದಿರುವ ಅತ್ಯಂತ ವೈಯಕ್ತಿಕ ಹಾಗೂ ಪವಿತ್ರ ಸಂಬಂಧದ ನೈಜ ಅಭಿವ್ಯಕ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಚಿತ್ರವನ್ನು ಅತ್ಯಂತ ಬೃಹತ್ ಕ್ಯಾನ್ವಾಸ್‌ನಲ್ಲಿ ನಿರ್ಮಿಸುತ್ತಿದ್ದರೂ, ಅದರ ನಿಜವಾದ ಆತ್ಮ ಅಡಗಿರುವುದು ನಮ್ಮ ಭಾವನೆ, ಮೌಲ್ಯ ಹಾಗೂ ಭಕ್ತಿಯಲ್ಲಿ. ಹಾಗಾಗಿಯೇ ಮೊದಲ ಹಾಡು ಆ ಸತ್ವವನ್ನು ಬಿಂಬಿಸುವಂತೆ ಮೂಡಿಬಂದಿದೆ ಎಂದು ಅವರು ವಿವರಿಸಿದ್ದಾರೆ.
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮಾತನಾಡಿ, "ಶ್ರೀರಾಮನ ಹೆಸರಿನ ಸರಳ ಹಾಗೂ ಶಕ್ತಿಯುತ ಜಪವೇ ಈ ಹಾಡಿನ ಜೀವಾಳ" ಎಂದು ಬಣ್ಣಿಸಿದ್ದಾರೆ. ಕಿವಿಗೆ ತಲುಪುವ ಪ್ರಾರ್ಥನೆಯ ಸಾತ್ವಿಕತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುತ್ತಲೇ, ಅದನ್ನು ವಿಶಾಲವಾದ ವಿಶ್ವಮಟ್ಟದ ಗೀತೆಯಾಗಿ ರೂಪಿಸುವುದು ತಮ್ಮ ಉದ್ದೇಶವಾಗಿತ್ತು ಎಂದಿರುವ ಅವರು, ಗಾಯಕರ ಭಾವಪೂರ್ಣ ಕಂಠಸಿರಿ ಹಾಡಿನ ಭಕ್ತಿಭಾವಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದು, ಈ ಗೀತೆ ಪ್ರತಿಯೊಬ್ಬರಿಗೂ ನೆಮ್ಮದಿ, ಶಾಂತಿ ಮತ್ತು ದೈವಿಕ ಅನುಭವ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Ramayana posters: ರಣಬೀರ್ ಕಪೂರ್, ಸಾಯಿ ಪಲ್ಲವಿ ಜೊತೆ ಯಶ್ ಅವರ ಈ ಹೊಸ ಪೋಸ್ಟರ್ ಔಟ್!
ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಂಕೇಶ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಜಾಗತಿಕ ವಿಎಫ್‌ಎಕ್ಸ್ ಸಂಸ್ಥೆ ‘DNEG’ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ‘ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ.
'ಟಿ-ಸೀರೀಸ್' ಸಂಸ್ಥೆಯು ಸಂಗೀತದ ಹಕ್ಕುಗಳನ್ನು ಹೊಂದಿದ್ದು, ಭಾರತ ಹೊರತುಪಡಿಸಿ ವಿಶ್ವದಾದ್ಯಂತ ಸೋನಿ ಪಿಕ್ಚರ್ಸ್ ಈ ಚಿತ್ರವನ್ನು ಬೃಹತ್ ಮಟ್ಟದಲ್ಲಿ ವಿತರಿಸಲಿದೆ. 'ರಾಮಾಯಣ: ಪಾರ್ಟ್ 1' ಚಿತ್ರವು 2026ರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.