ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

14ನೇ ದಿನ ಜಾದೂ ಮಾಡಿದ ʻಪ್ರೇಮದ ಊರಲಿʼ; ಇದು ಸ್ಯಾಂಡಲ್‌ವುಡ್‌ನಲ್ಲೇ ಹೊಸ ದಾಖಲೆ, ಈವರೆಗೂ ಎಷ್ಟಾಯ್ತು ಕಲೆಕ್ಷನ್?

Premada Oorali Movie: ʻಪ್ರೇಮದ ಊರಲಿʼ ಸಿನಿಮಾ ಬಿಡುಗಡೆಯಾಗಿ 2 ವಾರ ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ನಾಗಾಲೋಟ ಮುಂದುವರಿಸಿದೆ. ಮೊದಲ ದಿನ ಕೇವಲ ಲಕ್ಷಗಳಲ್ಲಿ ಗಳಿಕೆ ಕಂಡಿದ್ದ ಈ ಕೌಟುಂಬಿಕ ಚಿತ್ರ, 14ನೇ ದಿನ ಬರೋಬ್ಬರಿ ನಾಲ್ಕು ಕೋಟಿ ಗಡಿ ಮುಟ್ಟುವ ಮೂಲಕ ಇತಿಹಾಸ ಸೃಷ್ಟಿಸಿದೆ. ಹಳ್ಳಿಯ ಸೊಗಡಿನ ನೈಜ ಕಥೆಗೆ ಮಾರುಹೋದ ಕನ್ನಡಿಗರು ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿದ್ದಾರೆ.

14ನೇ ದಿನ ಹೊಸ ದಾಖಲೆ ಬರೆದ ʻಪ್ರೇಮದ ಊರಲಿʼ; ಈವರೆಗೂ ಎಷ್ಟಾಯ್ತು ಕಲೆಕ್ಷನ್?

-

Avinash GR
Avinash GR Oct 9, 2026 4:41 PM

ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಸಾಮಾನ್ಯವಾಗಿ ಯಾವುದೇ ಚಿತ್ರ ತೆರೆಕಂಡು ದಿನಗಳು ಕಳೆದಂತೆ ಗಳಿಕೆಯಲ್ಲಿ ಇಳಿಮುಖ ಕಾಣುವುದು ಸಹಜ. ಆದರೆ ಈ ಸಿನಿಮಾ ಮಾತ್ರ ಬಿಡುಗಡೆಯಾಗಿ ಎರಡು ವಾರಗಳು ಕಳೆದರೂ ತನ್ನ ಕ್ರೇಜ್ ಕಾಯ್ದುಕೊಂಡಿದ್ದು, 14ನೇ ದಿನದಂದು ಅತಿ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಅಚ್ಚರಿಯ ದಾಖಲೆ ಬರೆದಿದೆ.

13ನೇ ದಿನ 3.85 ಕೋಟಿ ರೂ. ಕಲೆಹಾಕಿದ್ದ ಚಿತ್ರ, 14ನೇ ದಿನ ಬರೊಬ್ಬರಿ 3.90 ಕೋಟಿ ರೂ. ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿದೆ. ಮೊದಲ ದಿನ ಕೇವಲ 13 ಲಕ್ಷ ರೂ. ಗಳಿಕೆಯೊಂದಿಗೆ ಸಾಧಾರಣ ಆರಂಭ ಪಡೆದಿದ್ದ ಚಿತ್ರ, ಇಂದು ದಿನಕ್ಕೆ ಬರೋಬ್ಬರಿ 4 ಕೋಟಿ ರೂ. ಗಡಿ ತಲುಪುವ ಮಟ್ಟಕ್ಕೆ ಬೆಳೆದು ನಿಂತಿರುವುದು ಸ್ಯಾಂಡಲ್‌ವುಡ್ ಮಂದಿಯ ಹುಬ್ಬೇರಿಸಿದೆ.

ದೊಡ್ಡಮಟ್ಟದ ಲಾಭ ಕಂಡ ಕನ್ನಡ ಸಿನಿಮಾ

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ದಂಡು ದಿನೇದಿನೆ ಹೆಚ್ಚಾಗುತ್ತಿದ್ದು, ಬುಕ್‌ಮೈಶೋನಲ್ಲಿ ಇಂದಿಗೂ ಪ್ರತಿ ಗಂಟೆಗೆ 8 ರಿಂದ 10 ಸಾವಿರದಷ್ಟು ಟಿಕೆಟ್‌ಗಳು ಮಾರಾಟವಾಗುತ್ತಿವೆ. ಪ್ರತಿದಿನ ಸರಾಸರಿ 1.50 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಬುಕ್‌ಮೈಶೋನಲ್ಲಿ ಮೂಲಕವೇ ಬುಕ್ ಆಗುತ್ತಿದ್ದು, ದಿನವೊಂದಕ್ಕೆ ಅಂದಾಜು 2.50 ರಿಂದ 3 ಲಕ್ಷ ಮಂದಿ ಚಿತ್ರ ವೀಕ್ಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಈ ಚಿತ್ರ ಒಟ್ಟಾರೆಯಾಗಿ ಸುಮಾರು 33 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೇ ವೇಗ ಮುಂದುವರಿದರೆ, 20ನೇ ದಿನದೊತ್ತಿಗೆ ಒಟ್ಟು ಮೊತ್ತ 50 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದ್ದು, ಆ ಮೂಲಕ ಈ ವರ್ಷದ ಅತ್ಯಂತ ದೊಡ್ಡ ಲಾಭ ಕಂಡ ಕನ್ನಡದ ಸಿನಿಮಾವಾಗಿ ‘ಪ್ರೇಮದ ಊರಲಿ’ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Premada Oorali Review: ಅಬ್ಬರವಿಲ್ಲದ ಹಳ್ಳಿ ಸೊಗಡಿನ ಮನಮುಟ್ಟುವ ಅಪ್ಪ- ಮಗನ ಬಾಂಧವ್ಯದ ಕಥೆ

ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ

ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಅಪ್ಪಟ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾವಾಗಿದೆ. ಹಳ್ಳಿಯ ಸೊಗಡಿನ ಹಿನ್ನೆಲೆಯಲ್ಲಿ ಸಾಗುವ ಕಥೆಯು ಸಂಪ್ರದಾಯಸ್ಥ ಕುಟುಂಬವೊಂದಕ್ಕೆ ಸೊಸೆಯಾಗಿ ಕಾಲಿಡುವ ವಿದೇಶದಿಂದ ಮರಳುವ ಯುವತಿಯ ಬದುಕಿನ ಸುತ್ತ ಸುತ್ತುತ್ತದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಆಕೆ ಪಡುವ ಪಾಡು, ತಲೆಮಾರುಗಳ ನಡುವಿನ ಅಂತರ, ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಕೌಟುಂಬಿಕ ಸವಾಲುಗಳನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ. ಪ್ರೀತಿ, ತಿಳಿವಳಿಕೆ ಮತ್ತು ವಿಭಿನ್ನ ಜೀವನಶೈಲಿಗಳ ನಡುವಿನ ಹೊಂದಾಣಿಕೆಯೇ ಚಿತ್ರದ ಮುಖ್ಯ ತಿರುಳಾಗಿದ್ದು, ಇದು ಪ್ರತಿಯೊಬ್ಬ ಕುಟುಂಬಸ್ಥರನ್ನೂ ಸೆಳೆಯುತ್ತಿದೆ.

ಸಿನಿಮಾವನ್ನು ಹೊತ್ತು ಮೆರೆಸಿದ ಕನ್ನಡಿಗರು

ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ಇಳಾ ವಿಟ್ಲ ಮತ್ತು ಗೋವಿಂದೇ ಗೌಡ ಪ್ರಮುಖ ಪಾತ್ರಗಳಲ್ಲಿ ತಮ್ಮ ನೈಜ ನಟನೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಉಳಿದಂತೆ ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದ್ದು, ರಾಜಕಾಂತ್ ಎಸ್.ಕೆ. ಅವರ ಸುಂದರ ಛಾಯಾಗ್ರಹಣ, ಸುನಾದ್ ಗೌತಮ್ ಅವರ ಇಂಪಾದ ಸಂಗೀತ ಮತ್ತು ಹರ್ಷಿತ್ ಪ್ರಭು ಅವರ ಸಂಕಲನ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಒಟ್ಟಿನಲ್ಲಿ ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಚಿತ್ರವನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಾರೆ ಎಂಬುದಕ್ಕೆ ‘ಪ್ರೇಮದ ಊರಲಿ’ ಸಿನಿಮಾ ಮತ್ತೊಮ್ಮೆ ಸಾಕ್ಷಿಯಾಗಿದೆ.