ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೇಣುಕಾಸ್ವಾಮಿ ಕೇಸ್‌: ಕೋರ್ಟ್‌ಗೆ ಸಾಕ್ಷಿ‌ ಹೇಳಲು ಬಂದು ತಡವರಿಸಿದ ಚಿಕ್ಕಣ್ಣ; ಗಾಬರಿಗೊಂಡ ಹಾಸ್ಯನಟನಿಗೆ ಜಡ್ಜ್‌ ನೀಡಿದ ಸೂಚನೆ ಏನು?

Renukaswamy Murder Case: ರೇಣುಕಾಸ್ವಾಮಿ ಕೇಸ್‌ನ ವಿಚಾರಣೆಯಲ್ಲಿ ನಟ ಚಿಕ್ಕಣ್ಣ ಕಟಕಟೆಯಲ್ಲಿ ಸಾಕ್ಷಿ ಹೇಳಲು ನಿಂತು ತೀವ್ರ ಭಯ ಹಾಗೂ ಆತಂಕದಿಂದ ನಡುಗಿದರು. ಸ್ಟೋನಿ ಬ್ರೂಕ್ ಹೋಟೆಲ್ ವಿವರಗಳ ಪ್ರಶ್ನೆಗೆ ಉತ್ತರಿಸಲಾಗದೆ ಅವರು ತಡಬಡಾಯಿಸಿದರು. ನ್ಯಾಯಾಧೀಶರು ನೀಡಿದ ಹತ್ತು ನಿಮಿಷಗಳ ವಿಶ್ರಾಂತಿಯ ನಂತರವೂ ಅವರ ಗಾಬರಿ ಕಡಿಮೆಯಾಗದ ಕಾರಣ, ಅಧಿಕೃತ ಹೇಳಿಕೆ ದಾಖಲಾಗದೆ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ.

ರೇಣುಕಾಸ್ವಾಮಿ ಕೇಸ್: ಕೋರ್ಟ್‌ಗೆ ಸಾಕ್ಷಿ ಹೇಳಲು ಬಂದು ತಡವರಿಸಿದ ಚಿಕ್ಕಣ್ಣ!

-

Avinash GR
Avinash GR Oct 13, 2026 3:57 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ (ಅ.13) ಬೆಂಗಳೂರಿನ 59ನೇ ಸಿಸಿಎಚ್ (ಸೆಷನ್ಸ್) ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪ ಅವರ ಆಪ್ತ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಸಾಕ್ಷಿ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಕಳೆದ ವಾರವೇ ಇಬ್ಬರೂ ನಟರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ, ಖುದ್ದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಮಂಗಳವಾರ ಮಾಧ್ಯಮಗಳ ಕಣ್ಣು ತಪ್ಪಿಸಿ ನಟ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಕೋರ್ಟ್‌ ಆವರಣಕ್ಕೆ ಆಗಮಿಸಿದ್ದರು.

ನೀವೇನೂ ತಪ್ಪು ಮಾಡಿಲ್ಲ

ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ನಟ ಚಿಕ್ಕಣ್ಣ ತೀವ್ರ ಆತಂಕ ಹಾಗೂ ಒತ್ತಡಕ್ಕೆ ಒಳಗಾದರು. ಘಟನೆ ನಡೆದ ದಿನ ಹಾಗೂ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಡೆದ ಊಟದ ವಿವರಗಳ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಅವರು ಉತ್ತರ ನೀಡಲು ತಡಬಡಾಯಿಸಿದರು. ಚಿಕ್ಕಣ್ಣ ಅವರ ಮುಖದಲ್ಲಿ ಆತಂಕ ಎದ್ದು ಕಾಣುತ್ತಿದ್ದ ಹಿನ್ನೆಲೆಯಲ್ಲಿ, ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ಮಧ್ಯಪ್ರವೇಶಿಸಿ, "ಯಾವುದೇ ಕಾರಣಕ್ಕೂ ಟೆನ್ಷನ್ ಮಾಡಿಕೊಳ್ಳಬೇಡಿ, ನೀವೇನೂ ತಪ್ಪು ಅಥವಾ ಅಪರಾಧ ಮಾಡಿಲ್ಲ" ಎಂದು ಸಮಾಧಾನಪಡಿಸಲು ಯತ್ನಿಸಿದರು.

ಚಿಕ್ಕಣ್ಣನಿಗೆ 10 ನಿಮಿಷ ವಿಶ್ರಾಂತಿ

ಆದರೂ ಚಿಕ್ಕಣ್ಣ ಅವರ ಗಾಬರಿ ಕಡಿಮೆಯಾಗದಿದ್ದಾಗ, ನ್ಯಾಯಾಧೀಶರು ಅವರನ್ನು "ಏನಾಯಿತು?" ಎಂದು ವಿಚಾರಿಸಿದರು. ಆಗ ಚಿಕ್ಕಣ್ಣ, "ಜೀವನದಲ್ಲಿ ಇಂತಹ ನ್ಯಾಯಾಲಯ ಪ್ರಕ್ರಿಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲು. ಹೀಗಾಗಿ ತೀವ್ರ ಆತಂಕವಾಗುತ್ತಿದೆ" ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಗಮನಿಸಿದ ನ್ಯಾಯಾಧೀಶರು, ಸುಮಾರು 10 ನಿಮಿಷಗಳ ಕಾಲ ವಿಶ್ರಾಂತಿ ಪಡೆದು, ಮನಸ್ಸು ಶಾಂತವಾದ ಬಳಿಕ ಬರುವಂತೆ ಸೂಚಿಸಿದರು.

'ರಾಕಿ ಭಾಯ್' ಮನೆಗೆ ಲಗ್ನಪತ್ರಿಕೆ ಹಿಡಿದು ಹೋದ ನಟ ಚಿಕ್ಕಣ್ಣ; ಯಶ್‌ - ರಾಧಿಕಾ ಪಂಡಿತ್‌ಗೆ ತಲುಪಿತು ಮದುವೆ ಆಹ್ವಾನ

ಚಿಕ್ಕಣ್ಣ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ನ್ಯಾಯಾಲಯವು ಮತ್ತೊಬ್ಬ ನಟ ಯಶಸ್ ಸೂರ್ಯ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು. ಆ ಬಳಿಕ ಎರಡನೇ ಬಾರಿಗೆ ಚಿಕ್ಕಣ್ಣ ಅವರನ್ನು ಕಟಕಟೆಗೆ ಕರೆದಾಗಲೂ ಅವರ ಮೇಲಿದ್ದ ಮಾನಸಿಕ ಒತ್ತಡ ಕಡಿಮೆಯಾಗಿರಲಿಲ್ಲ. ಅವರು ಹೇಳಿಕೆ ನೀಡಲು ಮತ್ತೆ ತಡವರಿಸಿದ ಕಾರಣ, ಮಂಗಳವಾರ ಅವರ ಯಾವುದೇ ಅಧಿಕೃತ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪರಿಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯವು ಚಿಕ್ಕಣ್ಣ ಅವರಿಗೆ ಒಂದು ದಿನದ ಕಾಲಾವಕಾಶ ನೀಡಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. ಬುಧವಾರದಂದು ನಟ ಚಿಕ್ಕಣ್ಣ ಅವರ ಹೇಳಿಕೆ ದಾಖಲಾಗಲಿದ್ದು, ಅದೇ ದಿನ ನಟ ಯಶಸ್ ಸೂರ್ಯ ಅವರಿಗೆ ಸರ್ಕಾರಿ ವಕೀಲರಿಂದ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ.