ಎರಡೇ ದಿನಕ್ಕೆ ಒಟಿಟಿಯಿಂದ ‘ಸತ್ಲುಜ್’ ಡಿಲೀಟ್: ʻಸಿನಿಮಾ ಡೌನ್‌ಲೋಡ್ ಲಿಂಕ್‌ನ ಶೇರ್ ಮಾಡಿʼ ಅಂತ ಕರೆಕೊಟ್ಟ ನಟ ದಿಲ್ಜಿತ್ ದೋಸಾಂಜ್
ಪಂಜಾಬ್‌ನ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ನೈಜ ಜೀವನದ ಕಥೆ ಆಧಾರಿತ, ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಚಿತ್ರವು ಬಿಡುಗಡೆಯಾದ ಎರಡೇ ದಿನಕ್ಕೆ ಝೀ5 ಒಟಿಟಿಯಿಂದ ದಿಢೀರ್ ಡಿಲೀಟ್ ಆಗಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ದಿಲ್ಜಿತ್, ಚಿತ್ರದ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
-
ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಹನಿ ಟ್ರೆಹನ್ ನಿರ್ದೇಶನದ ಬಹುನಿರೀಕ್ಷಿತ ‘ಸತ್ಲುಜ್’ (Satluj) ಚಿತ್ರವು ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಝೀ5 ಒಟಿಟಿಯಿಂದ ಡಿಲೀಟ್ ಆಗಿದೆ. ಈ ಬೆಳವಣಿಗೆಯು ಭಾರಿ ವಿವಾದ ಸೃಷ್ಟಿಸಿದೆ. ಭಾರತದಲ್ಲಿ ಈ ಚಿತ್ರದ ಪ್ರಸಾರವನ್ನು ಸ್ಥಗಿತಗೊಳಿಸಿರುವ ಬೆನ್ನಲ್ಲೇ ನಟ ದಿಲ್ಜಿತ್ ದೋಸಾಂಜ್ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಬಂದು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಸಿನಿಮಾ ಡೌನ್‌ಲೋಡ್ ಮಾಡಿ ಹಂಚಿಕೊಳ್ಳಿ
"ಈ ಚಿತ್ರವನ್ನು ಒಟಿಟಿಯಿಂದ ತೆಗೆದುಹಾಕುವ ಮುನ್ನವೇ ನಾವು ಡೌನ್‌ಲೋಡ್ ಮಾಡಿಕೊಂಡಿದ್ದೇವೆ" ಎಂದು ಅಭಿಮಾನಿಗಳು ಲೈವ್ ಕಾಮೆಂಟ್ ಸೆಕ್ಷನ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಂತೋಷ ವ್ಯಕ್ತಪಡಿಸಿರುವ ದಿಲ್ಜಿತ್, "ಈ ಸಿನಿಮಾ ಮತ್ತೆ ಝೀ5 ಗೆ ಮರಳುವವರೆಗೆ ಹೆಚ್ಚಿನ ಜನರು ಇದನ್ನು ವೀಕ್ಷಿಸಲು ಅನುಕೂಲವಾಗುವಂತೆ, ಡೌನ್‌ಲೋಡ್ ಲಿಂಕ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಿ ಮತ್ತು ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸಿ" ಎಂದು ಕರೆಕೊಟ್ಟಿದ್ದಾರೆ.
ಲೈವ್ ಸೆಷನ್‌ನಲ್ಲಿ ಪಂಜಾಬಿಯಲ್ಲಿ ಮಾತನಾಡಿದ ಅವರು, "ಈಗ ಯಾವುದೇ ಆತಂಕವಿಲ್ಲ, ಎಲ್ಲರೂ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಒಮ್ಮೆ ಯಾವುದಾದರೂ ವಸ್ತು ಆನ್‌ಲೈನ್‌ಗೆ ಬಂದರೆ ಅದನ್ನು ಅಳಿಸಲು ಸಾಧ್ಯವಿಲ್ಲ ಎಂದು ಯೋಚಿಸುವವರು ಮುಗ್ಧರು. ರಾಜಸ್ಥಾನದ ಹಳ್ಳಿಯೊಂದರಲ್ಲಿ ಮತ್ತು ಗುರುದ್ವಾರದ ಒಳಗೆ ಈ ಸಿನಿಮಾವನ್ನು ವೀಕ್ಷಿಸುತ್ತಿರುವ ವಿಡಿಯೋಗಳನ್ನು ನಾನು ನೋಡಿದೆ. ನನ್ನ ಶ್ರಮ ಜನರನ್ನು ತಲುಪಿದೆ" ಎಂದು ಹೇಳಿದ್ದಾರೆ.
ಯಾರ ಸಹಾಯವೂ ಇಲ್ಲದೆ ನಾವೇ ಹೋರಾಡಿದೆವು
ಚಿತ್ರ ಬಿಡುಗಡೆಗಾಗಿ ಎದುರಿಸಿದ ಕಷ್ಟಗಳನ್ನು ನೆನೆದ ದಿಲ್ಜಿತ್, "ನಾವು ಕಳೆದ 3-4 ವರ್ಷಗಳಿಂದ ಈ ಚಿತ್ರದ ಬಿಡುಗಡೆಗಾಗಿ ಹೋರಾಡುತ್ತಿದ್ದೇವೆ. ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಸಹಾಯ ಮಾಡಿ ಎಂದು ನಾವು ಪಂಜಾಬಿ ಚಿತ್ರರಂಗ ಅಥವಾ ಬಾಲಿವುಡ್‌ನ ಯಾರ ಬಳಿಯೂ ಬೆಂಬಲ ಕೇಳಲು ಹೋಗಲಿಲ್ಲ, ಈ ಹೋರಾಟವನ್ನು ನಾವೇ ಸ್ವತಃ ಎದುರಿಸಿದ್ದೇವೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಹೋರಾಟ ದೊಡ್ಡದಾಗಿ ಅನಿಸುತ್ತದೆ. ನಾವು ಕೂಡ ನಮ್ಮ ಚಿತ್ರವನ್ನು ನಮ್ಮದೇ ಶಕ್ತಿಯ ಮೇಲೆ ಪ್ರೇಕ್ಷಕರ ಮುಂದೆ ತಂದೆವು" ಎಂದು ದಿಲ್ಜಿತ್ ತಿಳಿಸಿದ್ದಾರೆ.
Kantara: Chapter 1 Movie: 'ಕಾಂತಾರ ಚಾಪ್ಟರ್ 1' ಸಿನಿಮಾಕ್ಕಾಗಿ ಹಾಡಲಿದ್ದಾರೆ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್
'ಸತ್ಲುಜ್' ಚಿತ್ರದ ವಿವಾದವೇನು?
ಹನಿ ಟ್ರೆಹಾನ್ ನಿರ್ದೇಶನದ 'ಸತ್ಲುಜ್' ಚಿತ್ರಕ್ಕೆ ಆರಂಭದಲ್ಲಿ 'ಘಲ್ಲುಘಾರಾ' ಎಂದು ಹೆಸರಿಡಲಾಗಿತ್ತು, ನಂತರ ಅದನ್ನು 'ಪಂಜಾಬ್ 95' ಎಂದು ಬದಲಾಯಿಸಿ, ಅಂತಿಮವಾಗಿ 'ಸತ್ಲುಜ್' ಎಂದು ನಾಮಕರಣ ಮಾಡಲಾಗಿತ್ತು. ಸೆನ್ಸಾರ್ ಮಂಡಳಿಯು ಸುಮಾರು 120 ಕ್ಕೂ ಹೆಚ್ಚು ಕಟ್‌ಗಳನ್ನು ನೀಡಿತ್ತು. ಆನಂತರ ಜುಲೈ 3 ರಂದು ಝೀ5 ನಲ್ಲಿ ಪ್ರಥಮ ಪ್ರದರ್ಶನ ಕಂಡಿತ್ತು, ಆದರೆ ಕೇವಲ ಎರಡೇ ದಿನಗಳಲ್ಲಿ ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ನಿಂದ ಸಿನಿಮಾವನ್ನು ದಿಢೀರ್ ಆಗಿ ತೆಗೆದುಹಾಕಲಾಗಿದೆ.
ದಿಲ್ಜಿತ್ ದೋಸಾಂಜ್ ಇನ್‌ಸ್ಟಾಗ್ರಾಮ್ ಲೈವ್
ಅಂದಹಾಗೆ, ಈ ಚಿತ್ರವು ಪಂಜಾಬ್‌ನ ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನ ಮತ್ತು ನೈಜ ಹೋರಾಟವನ್ನು ಆಧರಿಸಿದೆ. 1980ರ ದಶಕದ ಪಂಜಾಬ್ ದಂಗೆಯ ಸಮಯದಲ್ಲಿ ಪೊಲೀಸರು ಸಾವಿರಾರು ಜನರನ್ನು ಕಾನೂನುಬಾಹಿರವಾಗಿ ಕಟುಂಬದವರಿಗೆ ತಿಳಿಸದೆ ರಹಸ್ಯವಾಗಿ ಶವಸಂಸ್ಕಾರ ಮಾಡಿದ್ದನ್ನು ಖಲ್ರಾ ಅವರು ಬಯಲಿಗೆಳೆದಿದ್ದರು. ನಂತರ 1995ರಲ್ಲಿ ಅವರನ್ನೂ ಸಹ ಅಪಹರಿಸಿ ಕೊಲೆ ಮಾಡಲಾಗಿತ್ತು. ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ಕರಾಳ ಮುಖವನ್ನು ಇದು ತೋರಿಸುವುದರಿಂದ ಚಿತ್ರದ ಕಂಟೆಂಟ್ ತೀವ್ರ ರಾಜಕೀಯ ಸೂಕ್ಷ್ಮತೆಯನ್ನು ಹೊಂದಿದೆ ಎಂದು ಹೇಳಲಾಗಿದೆ.