ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನಮ್ಮ ಚಿತ್ರರಂಗ ಅವನತಿಯ ಕಡೆ ಸಾಗುತ್ತಿದೆʼ; ಗಂಭೀರ ಆತಂಕವನ್ನು ವ್ಯಕ್ತಪಡಿಸಿದ ನಿರ್ದೇಶಕ ಕೆ. ಎಂ. ಚೈತನ್ಯ

ಮಲ್ಟಿಪ್ಲೆಕ್ಸ್‌ಗಳ ದುಬಾರಿ ದರ, ಒಟಿಟಿಗಳ ಪೈಪೋಟಿ ಹಾಗೂ ನಟ-ತಂತ್ರಜ್ಞರ ಅತಿಯಾದ ಸಂಭಾವನೆಯಿಂದಾಗಿ ಕನ್ನಡ ಚಿತ್ರರಂಗ ಅವನತಿಯತ್ತ ಸಾಗುತ್ತಿದೆ ಎಂದು ನಿರ್ದೇಶಕ ಕೆ. ಎಂ. ಚೈತನ್ಯ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬೆಂಬಲ ನೀಡಿರುವ ಬಿ. ಎಸ್. ಲಿಂಗದೇವರು ಲಾಭದಲ್ಲಿ ಪಾಲುದಾರಿಕೆ ಮಾದರಿ ಅಳವಡಿಸಲು ಸಲಹೆ ನೀಡಿದ್ದರೆ, ನಾಗೇಂದ್ರ ಅರಸ್ ಅವರು ಕೇರಳ ಫಿಲಂ ಚೇಂಬರ್ ಮಾದರಿಯಲ್ಲಿ ಸ್ಟಾರ್‌ಗಳ ಸಂಭಾವನೆಗೆ ನಿಯಂತ್ರಣ ಹೇರಬೇಕು ಎಂದು ಹೇಳಿದ್ದಾರೆ.

ಮಲ್ಟಿಪ್ಲೆಕ್ಸ್ ದಂಧೆ, ನಟರ ದುಬಾರಿ ಸಂಭಾವನೆ; ಕನ್ನಡ ಚಿತ್ರರಂಗ ಅವನತಿಯತ್ತ!

-

Avinash GR
Avinash GR Jul 13, 2026 12:40 PM

ಈಚೆಗಷ್ಟೇ ವಿನೋದ ಪ್ರಭಾಕರ್‌ ನಟನೆಯ ʻಬಲರಾಮನ ದಿನಗಳುʼ ಸಿನಿಮಾವನ್ನು ನಿರ್ದೇಶಿಸಿದ್ದ ಕೆ. ಎಂ. ಚೈತನ್ಯ ಇದೀಗ ಒಂದು ಗಂಭೀರ ಪಶ್ನೆಯನ್ನು ಎತ್ತಿದ್ದಾರೆ. ಅದು ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ವಿಚಾರ. ಸದ್ಯ ಕನ್ನಡ ಚಿತ್ರರಂಗ ಅವನತಿಯತ್ತ ಸಾಗುತ್ತಿದೆ ಎಂದು ನಿರ್ದೇಶಕ ಕೆ. ಎಂ. ಚೈತನ್ಯ ಹೇಳದ್ದಾರೆ. ಅದನ್ನು ತಡೆಯಲು ಎಲ್ಲರೂ ಸೇರಿ ಯೋಚನೆ ಮಾಡಬೇಕಿದೆ ಅಂತಲೂ ಸಲಹೆ ನೀಡಿದ್ದಾರೆ ಚೈತನ್ಯ.

ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕೆ. ಎಂ. ಚೈತನ್ಯ ಅವರು. "ಒಂದು ಸಿನಿಮಾ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನೇ ಅತ್ಯಂತ ದುಬಾರಿ ಮಾಡಿರುವ ಮಲ್ಟಿಪ್ಲೆಕ್ಸ್‌ಗಳು ಒಂದು ಕಡೆ. ಸುಲಭವಾಗಿ ಮನೆಯಲ್ಲೇ ನೋಡಲು ಸಾಧ್ಯ ಮಾಡಿಕೊಟ್ಟ ಒಟಿಟಿಗಳು ಮತ್ತೊಂದು ಕಡೆ. ಈ ಎರಡರ ಒತ್ತಡ ಅರಿಯದೇ ಹಿಂದಿನಂತೆ ಬಹಳ ಜಾಸ್ತಿ ಸಂಭಾವನೆ ಬಯಸುವ ನಟರು-ತಂತ್ರಜ್ಞರು ಇನ್ನೊಂದು ಕಡೆ. ಇವೆಲ್ಲವೂ ಸೇರಿ ನಮ್ಮ ಚಿತ್ರರಂಗ ಅವನತಿಯ ಕಡೆ ಸಾಗುತ್ತಿದೆ. ಇದನ್ನು ತಡೆಯಲು ಎಲ್ಲರೂ ಸೇರಿ ಯೋಚನೆ ಮಾಡಬೇಕಿದೆ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಕಾಮಂಟ್ ಮಾಡಿದ್ದಾರೆ.

ಬಿ.ಎಸ್‌. ಲಿಂಗದೇವರು ಏನಂದ್ರು ನೋಡಿ

ಚೈನತ್ಯ ಪೋಸ್ಟ್‌ಗೆ ಕಾಮೆಂಟ್‌ ಹಾಕಿರುವ ನಿರ್ದೇಶಕ ಬಿ. ಎಸ್.‌ ಲಿಂಗದೇವರು, "ಚಿತ್ರರಂಗ ಉಳಿಯಬೇಕಾದರೆ ಎಲ್ಲರಿಗೂ ಹೊಣೆಗಾರಿಕೆ ಇದೆ. ಒಂದು ಸಿನಿಮಾ ತನ್ನ ಮೂಲ ಸ್ವರೂಪದಲ್ಲಿ ಮೊದಲು ಚಿತ್ರಮಂದಿರದಲ್ಲೇ ಪ್ರೇಕ್ಷಕರನ್ನು ತಲುಪಬೇಕು. ನಂತರ ದೂರದರ್ಶನ, OTT, ಮೊಬೈಲ್ ಹಾಗೂ ಇತರ ಮಾಧ್ಯಮಗಳ ಮೂಲಕ ಮನೆಮನೆಗೆ ತಲುಪಬೇಕು. ಈ ಕ್ರಮ ಉಳಿದಾಗ ಮಾತ್ರ ಚಿತ್ರೋದ್ಯಮದ ಆರ್ಥಿಕ ಚಕ್ರ ಸುಸ್ಥಿರವಾಗಿ ಸಾಗಲು ಸಾಧ್ಯ" ಎಂದು ಹೇಳಿದ್ದಾರೆ.

ಪಾಲುದಾರಿಗೆ ಮಾದರಿಗಳನ್ನು ಅಳವಡಿಸಿಕೊಳ್ಳಬಹುದು

"ಇದಕ್ಕಾಗಿ ನಿರ್ಮಾಪಕರೊಬ್ಬರೇ ಹೊಣೆಗಾರರಲ್ಲ. ಪ್ರದರ್ಶಕರು, ವಿತರಕರು, ಕಲಾವಿದರು, ತಂತ್ರಜ್ಞರು, ಸ್ಟುಡಿಯೋಗಳು ಸೇರಿದಂತೆ ಎಲ್ಲ ಪಾಲುದಾರರೂ ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು. ಚಿತ್ರದ ಬಜೆಟ್, ನಿರ್ಮಾಪಕರ ಹೂಡಿಕೆಯ ಅಪಾಯ ಮತ್ತು ಚಿತ್ರದ ವಾಣಿಜ್ಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಂಭಾವನೆ, ಬಾಡಿಗೆ ಹಾಗೂ ಸೇವಾ ಶುಲ್ಕವನ್ನು ನಿಗದಿಪಡಿಸುವ ಮನೋಭಾವ ಬೆಳೆಸಬೇಕು. ಅಗತ್ಯವಿದ್ದರೆ ನಿಗದಿತ ಸಂಭಾವನೆಯ ಜೊತೆಗೆ ಚಿತ್ರದ ಯಶಸ್ಸಿಗೆ ಅನುಗುಣವಾಗಿ ಲಾಭದಲ್ಲಿ ಪಾಲುದಾರರಾಗುವಂತಹ ಮಾದರಿಗಳನ್ನು ಅಳವಡಿಸಿಕೊಳ್ಳಬಹುದು. ಹೀಗೆ ಮಾಡಿದರೆ ನಿರ್ಮಾಪಕರ ಮೇಲಿನ ಆರಂಭಿಕ ಆರ್ಥಿಕ ಒತ್ತಡ ಕಡಿಮೆಯಾಗಿ, ಉತ್ತಮ ಸಿನಿಮಾಗಳ ನಿರ್ಮಾಣಕ್ಕೆ ಹೆಚ್ಚಿನ ಅವಕಾಶ ಸೃಷ್ಟಿಯಾಗುತ್ತದೆ" ಎಂದು ಬಿ. ಎಸ್.‌ ಲಿಂಗದೇವರು ಹೇಳಿದ್ದಾರೆ.

ಕೆ ಎಂ ಚೈತನ್ಯ ಹಂಚಿಕೊಂಡಿರುವ ಪೋಸ್ಟ್



ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು

"ಕಾರ್ಮಿಕರ ವೇತನ, ದೈನಂದಿನ ಆಹಾರ ಹಾಗೂ ಇತರ ಅಗತ್ಯ ನಿರ್ಮಾಣ ವೆಚ್ಚಗಳಿಗೆ ಮಾತ್ರ ನಿರ್ಮಾಪಕರು ಸಂಪೂರ್ಣ ಜವಾಬ್ದಾರರಾಗಬೇಕು. ಇವು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು. ಉಳಿದ ಎಲ್ಲ ಪಾಲುದಾರರು ಚಿತ್ರರಂಗದ ಭವಿಷ್ಯಕ್ಕಾಗಿ ಸ್ವಲ್ಪ ತ್ಯಾಗ, ಹೆಚ್ಚು ಸಹಕಾರ ಮತ್ತು ದೀರ್ಘದೃಷ್ಟಿಯ ಮನೋಭಾವ ಬೆಳೆಸಿದರೆ, ಕನ್ನಡ ಸೇರಿದಂತೆ ಭಾರತೀಯ ಸಿನಿಮಾ ತನ್ನ ಮೂಲ ಸ್ವರೂಪದಲ್ಲೇ ಮತ್ತಷ್ಟು ಬಲಿಷ್ಠವಾಗಿ ಉಳಿಯಲು ಮತ್ತು ಬೆಳೆಯಲು ಸಾಧ್ಯ" ಎಂದು ಅವರು ಸಲಹೆ ನೀಡಿದ್ದಾರೆ.‌

'ಬಲರಾಮನ ದಿನಗಳು' ಚಿತ್ರಕ್ಕೆ ಧ್ವನಿಯಾದ 'ಆಲ್ ಓಕೆ' ಅಲೋಕ್; ಸಖತ್‌ ಖುಷಿಯಾದ ನಟ ವಿನೋದ್‌ ಪ್ರಭಾಕರ್

ನಟ, ನಿರ್ದೇಶಕ ನಾಗೇಂದ್ರ ಅರಸ್‌ ಕಾಮೆಂಟ್‌ ಹೀಗಿತ್ತು

"ಕೇರಳ ಫಿಲಂ ಚೇಂಬರ್ ಮಾದರಿ ಆಗಬೇಕಿದೆ ಸರ್. ಕಲಾವಿದರು ಬೇಕಾಬಿಟ್ಟಿ ಸಂಭಾವನೆ ಕೇಳುವಂತಿಲ್ಲ. ಇಂತಿಂಥ ಕೆಟಗಿರಿ ಕಲಾವಿದರಿಗೆ ಇಂತಿಂಥ ಸಂಭಾವನೆ ಅಂತಾ ಇದೆ. ಆದ್ರೆ ಇಲ್ಲಿ ಬಾಯಿಗೆ ಬಂದಷ್ಟು ಕೇಳ್ತಾರೆ, ಅವರ ಮಾರ್ಕೆಟ್ ಏನಿದೆ ಎಷ್ಟಿದೆ ಅಂತಾ ಅರಿವು ಇದ್ಯೋ ಇಲ್ವೋ ಗೊತ್ತಿಲ್ಲ. ಆ ಕೆಲವು ಸ್ಟಾರ್‌ ಕಲಾವಿದರು ಒಂದೇ ಒಂದು ದಿನ ಹೌಸ್ ಫುಲ್ ಮಾಡಿಸಲಿ ನೋಡೋಣ" ಎಂದು ಸವಾಲು ಹಾಕಿದ್ದಾರೆ ನಟ, ನಿರ್ದೇಶಕ ನಾಗೇಂದ್ರ ಅರಸ್.