ತಮಿಳುನಾಡು ಎಲೆಕ್ಷನ್ ಮುಗಿದ್ಮೇಲೆ ʻದಳಪತಿʼ ವಿಜಯ್ ಫ್ಯಾನ್ಸ್‌ಗೆ ಬಿಗ್ ಗಿಫ್ಟ್! ಇದು ʻಜನ ನಾಯಗನ್ʼ ಟೀಮ್ ಹೊಸ ಲೆಕ್ಕಾಚಾರ
Thalapathy Vijay: ಜನ ನಾಯಗನ್ ಸಿನಿಮಾ ಬಿಡುಗಡೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 23 ರಂದು ಮುಕ್ತಾಯವಾಗಲಿದ್ದು, ಮತದಾನ ಪ್ರಕ್ರಿಯೆ ಮುಗಿದ ಮರುದಿನವೇ ಅಂದರೆ ಏಪ್ರಿಲ್ 24 ಅಥವಾ ಏಪ್ರಿಲ್ 30 ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ಕೆವಿಎನ್ ಪ್ರೊಡಕ್ಷನ್ಸ್ ಸಿದ್ಧತೆ ನಡೆಸುತ್ತಿದೆಯಂತೆ.
-
ತಮಿಳು ನಟ ದಳಪತಿ ವಿಜಯ್ ಅವರು ಸದ್ಯ ಚುನಾವಣೆ ಮೇಲೆ ಸಂಪೂರ್ಣ ಗಮನ ನೀಡಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧಿಸಿದ್ದಾರೆ. ತಮ್ಮ ಟಿವಿಕೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಅವರು ಹಠತೊಟ್ಟಿದ್ದಾರೆ. ಈ ನಡುವೆ ಅವರ ಅಭಿಮಾನಿಗಳಿಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ ಎಂದರೆ, ವಿಜಯ್ ಅವರ ಕೊನೆಯ ಸಿನಿಮಾ ʻಜನ ನಾಯಗನ್ʼ ಯಾವಾಗ ತೆರೆಗೆ ಬರಲಿದೆ ಎಂಬುದು. ಆ ಬಗ್ಗೆ ಚಿತ್ರತಂಡ ಒಂದು ಮೆಗಾ ಪ್ಲ್ಯಾನ್ ಮಾಡಿಕೊಂಡಿದೆ.
ಎಲೆಕ್ಷನ್ ಮುಗಿದ ಕೂಡಲೇ 'ಜನ ನಾಯಗನ್' ರಿಲೀಸ್
ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಅನ್ನು ಏಪ್ರಿಲ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಸೆನ್ಸಾರ್ ಮಂಡಳಿಯೊಂದಿಗಿನ ಸಮಸ್ಯೆಗಳು ಈಗ ಬಗೆಹರಿದಿದ್ದು, ಏಪ್ರಿಲ್ 24 ಅಥವಾ ಏಪ್ರಿಲ್ 30 ರಂದು ಜನ ನಾಯಗನ್ ಚಿತ್ರವನ್ನು ರಿಲೀಸ್ ಮಾಡಲು ಪ್ಲ್ಯಾನಿಂಗ್ ನಡೆಯುತ್ತಿದೆಯಂತೆ.
ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!
ತಮಿಳುನಾಡಿನಲ್ಲಿ ಚುನಾವಣೆ ಇರುವ ಕಾರಣಕ್ಕೆ ನೀತಿ ಸಂಹಿತೆ ಜಾರಿಯಲ್ಲಿದೆ. ಅಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಹಾಗಾಗಿ, ಮತದಾನ ಪ್ರಕ್ರಿಯೆ ಮುಗಿದ ನಂತರ ಅಂದರೆ ಏಪ್ರಿಲ್ 24 ಅಥವಾ 30 ರಂದು ಚಿತ್ರವು ಜನ ನಾಯಗನ್ ಚಿತ್ರವನ್ನು ರಿಲೀಸ್ ಮಾಡುವ ಪ್ಲ್ಯಾನ್ ಕೆವಿಎನ್ ಪ್ರೊಡಕ್ಷನ್ಸ್‌ಗೆ ಇದೆಯಂತೆ. ಈ ಮೂಲಕ ವಿಜಯ್ ಫ್ಯಾನ್ಸ್‌ಗೆ ತಮಿಳುನಾಡು ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಬಿಗ್ ಗಿಫ್ಟ್ ನೀಡಲು ನಿರ್ಮಾಪಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಕೆವಿಎನ್ ಪ್ರೊಡಕ್ಷನ್ಸ್‌ನ ಮತ್ತೊಂದು ಸಿನಿಮಾ ʻಕೆಡಿʼಯನ್ನು ಏಪ್ರಿಲ್ 30ರಂದು ರಿಲೀಸ್ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಅದೇ ಸಮಯಕ್ಕೆ ಈಗ ʻಜನ ನಾಯಗನ್ʼ ಬಂದರೆ, ʻಕೆಡಿʼ ಚಿತ್ರವನ್ನು ಮುಂದೂಡಬಹುದಾ ಎಂಬ ಮಾತುಗಳು ಕೇಳಿಬಂದಿವೆ. ಅದನ್ನು ಚಿತ್ರತಂಡವೇ ತಿಳಿಸಬೇಕು.
ಸೆನ್ಸಾರ್ ಸಮಸ್ಯೆ ಅನುಭವಿಸಿದ್ದ ಚಿತ್ರತಂಡ
ಸೆನ್ಸಾರ್ ಪ್ರಕ್ರಿಯೆಯಲ್ಲಿ ಕೆಲವು ಆಕ್ಷೇಪಣೆಗಳು ವ್ಯಕ್ತವಾದ ನಂತರ, ಈ ಚಿತ್ರವನ್ನು ಮರುಪರಿಶೀಲನೆಗಾಗಿ ಕಳುಹಿಸಲಾಗಿತ್ತು. ಅಸಲಿಗೆ ಜನ ನಾಯಗನ್ ಚಿತ್ರವನ್ನು ಜನವರಿ 9ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಸೆನ್ಸಾರ್ ಪ್ರಕ್ರಿಯೆಯಲ್ಲಿ ಉಂಟಾದ ತಾಂತ್ರಿಕ ತೊಂದರೆಗಳಿಂದಾಗಿ ಬಿಡುಗಡೆ ಮುಂದೂಡಲ್ಪಟ್ಟಿತ್ತು.
ಜನ ನಾಯಗನ್ ರಿಲೀಸ್ ಕುರಿತ ಟ್ವೀಟ್
#JanaNayagan is likely to hit screens on April 24th or 30th#JanaNayagan planning for Post elections, April end release 🔥
— saran raj (@saranrajai) April 1, 2026
So it seems the team has received confirmation on the censor certificate & the summer holidays are also perfect release for the film👌
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಸಂಭಾಷಣೆಗಳಿರುವ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ, ಬಿಡುಗಡೆ ತಡವಾಗಿತ್ತು. ಮುಂಬೈನಲ್ಲಿ ರಿವೈಸಿಂಗ್ ಕಮಿಟಿಯು ಚಿತ್ರವನ್ನು ವೀಕ್ಷಿಸಿ ಕೆಲವು ಬದಲಾವಣೆಗಳನ್ನು ಸೂಚಿಸಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಹಲವಾರು ದೃಶ್ಯಗಳು ಮತ್ತು ಸಂಭಾಷಣೆಗಳಿರುವುದೇ ಈ ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇದೀಗ ಎಲ್ಲವೂ ಬಗೆಹರಿದು ಸಿನಿಮಾ ತಗೆರೆಕಾಣುವ ಹಂತ ತಲುಪಿದೆ ಎಂಬುದು ಮೂಲಗಳ ಮಾಹಿತಿ.
ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಮಿತಾ ಬೈಜು, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮುಂತಾದರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.