ಸಿಎಂ ವಿಜಯ್ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ತಮಿಳು ಚಿತ್ರರಂಗ ಖುಷಿ; ನಟ ವಿಶಾಲ್ ಏನಂದ್ರು ನೋಡಿ!
ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಹೊಸ ಸಿನಿಮಾಗಳ ಬಿಡುಗಡೆಯ ಮೊದಲ ವಾರದಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳ ನಿಯಮಾವಳಿಗೆ ತಿದ್ದುಪಡಿ ಮಾಡಿದ್ದಾರೆ. ಮೇ 16ರಂದು ಚಿತ್ರರಂಗದ ನಿಯೋಗ ಸಲ್ಲಿಸಿದ್ದ ಮನವಿಗೆ ಸಿಎಂ ತಕ್ಷಣ ಸ್ಪಂದಿಸಿದ್ದು, ಈ ನಡೆಯನ್ನು ನಟ ವಿಶಾಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
-
ಹೊಸದಾಗಿ ಬಿಡುಗಡೆಯಾಗುವ ತಮಿಳು ಸಿನಿಮಾಗಳಿಗೆ ಮೊದಲ ಒಂದು ವಾರ ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು (Shows) ನಡೆಸಲು ತಮಿಳುನಾಡು ಸರ್ಕಾರ ಅಧಿಕೃತ ಅನುಮತಿ ನೀಡಿದೆ. ಚಿತ್ರರಂಗದ ಬಿಕ್ಕಟ್ಟನ್ನು ಅರಿತು ಈ ಮಹತ್ವದ ನಿರ್ಧಾರ ಕೈಗೊಂಡಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಕಾಲಿವುಡ್‌ನ ಖ್ಯಾತ ನಟ ವಿಶಾಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ವಿಜಯ್ ಅವರನ್ನು "ಚಿತ್ರರಂಗದಿಂದ ರಾಜಕೀಯಕ್ಕೆ ಬಂದು ಯಶಸ್ವಿಯಾದ ಅತ್ಯಂತ ಪ್ರಭಾವಿ ಜನನಾಯಕ" ಎಂದು ಬಣ್ಣಿಸಿದ್ದಾರೆ.
ನಿಯಮಾವಳಿಗೆ ಹೊಸ ತಿದ್ದುಪಡಿ
ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಪ್ರಮುಖ ಗಣ್ಯರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ, ಚಿತ್ರೋದ್ಯಮ ಎದುರಿಸುತ್ತಿರುವ ನಷ್ಟ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿ ಕೆಲವು ಪ್ರಮುಖ ಬೇಡಿಕೆಗಳನ್ನು ಅವರೆದುರು ಇಟ್ಟಿದ್ದರು. ಚಿತ್ರರಂಗದ ಮನವಿಗೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ವಿಜಯ್, ತಮಿಳುನಾಡು ಚಿತ್ರಮಂದಿರಗಳ ನಿಯಂತ್ರಣ ನಿಯಮಾವಳಿಗಳಿಗೆ ತುರ್ತು ತಿದ್ದುಪಡಿ ತಂದು ಹೊಸ ಆದೇಶ ಹೊರಡಿಸಿದೆ.
ಸಿಎಂ ವಿಜಯ್ - ತ್ರಿಶಾ ಬಗ್ಗೆ ಕೇಳಿದ್ದಕ್ಕೆ ಉರಿದುಬಿದ್ದ ನಟಿ ಮಾಳವಿಕಾ ಮೋಹನನ್; ವಿಡಿಯೋ ವೈರಲ್!
ಹೊಸ ನಿಯಮದಲ್ಲೇನಿದೆ?
ಇನ್ನು ಮುಂದೆ ತಮಿಳುನಾಡಿನಲ್ಲಿ ಯಾವುದೇ ಹೊಸ ಸಿನಿಮಾ ಬಿಡುಗಡೆಯಾದಾಗ, ಮೊದಲ 7 ದಿನಗಳವರೆಗೆ ದಿನಕ್ಕೆ 5 ಪ್ರದರ್ಶನಗಳನ್ನು ಚಿತ್ರಮಂದಿರದಲ್ಲಿ ನಡೆಸಲು ಅವಕಾಶವಿರುತ್ತದೆ. ಇದರೊಂದಿಗೆ ಸ್ಥಳೀಯ ಹಬ್ಬ ಹರಿದಿನಗಳು, ಸರ್ಕಾರಿ ರಜೆಗಳು ಹಾಗೂ ಶನಿವಾರ ಮತ್ತು ಭಾನುವಾರಗಳಲ್ಲೂ ದಿನಕ್ಕೆ 5 ಪ್ರದರ್ಶನಗಳನ್ನು ಪ್ರದರ್ಶಿಸಲು ಚಿತ್ರಮಂದಿರಗಳಿಗೆ ಮುಕ್ತ ಅನುಮತಿ ನೀಡಲಾಗಿದೆ. ಈ ನಿರ್ಧಾರದಿಂದಾಗಿ ಚಿತ್ರಗಳ ಕಲೆಕ್ಷನ್ ಹೆಚ್ಚಾಗಲಿದ್ದು, ನಷ್ಟದಲ್ಲಿರುವ ಚಿತ್ರಮಂದಿರ ಮಾಲೀಕರು ಹಾಗೂ ನಿರ್ಮಾಪಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಮುಖ್ಯಮಂತ್ರಿಗೆ ನಟ ವಿಶಾಲ್ ಧನ್ಯವಾದ
ಸರ್ಕಾರದ ಈ ಐತಿಹಾಸಿಕ ನಿರ್ಧಾರಕ್ಕೆ ಧನ್ಯವಾದ ತಿಳಿಸಿರುವ ನಟ, ನಿರ್ಮಾಪಕ ವಿಶಾಲ್, "ನಮ್ಮ ಹೆಮ್ಮೆಯ ಮುಖ್ಯಮಂತ್ರಿ, ಜನಸಾಮಾನ್ಯರ ಪ್ರೀತಿಯ ಡಾರ್ಲಿಂಗ್ ಎನಿಸಿಕೊಂಡಿರುವ ಗೌರವಾನ್ವಿತ ವಿಜಯ್ ಅವರಿಗೆ ಧನ್ಯವಾದಗಳು. ಚಿತ್ರರಂಗದ ಪ್ರಸ್ತುತ ಕಠಿಣ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು, ಮೊದಲ ವಾರ 5 ಶೋಗಳಿಗೆ ಅನುಮತಿ ನೀಡಿರುವುದು ಇಡೀ ಉದ್ಯಮಕ್ಕೆ ಆನೆಬಲ ತಂದಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಇಂತಹದ್ದೇ ಪ್ರಗತಿಪರ ಹಾಗೂ ಜನಸ್ನೇಹಿ ಆದೇಶಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ವಿಶಾಲ್ ಅವರ ಟ್ವೀಟ್
Thank you dear @CMOTamilnadu #Vijay avargale, darling of the masses and the most prolific actor turned politician for understanding the current situation in the film industry and implementing five shows a day for all films for the first 7 days of the film s theatrical release.…
— Vishal (@VishalKOfficial) May 26, 2026
ಕಳೆದ ಮೇ 16ರಂದು ಚಿತ್ರರಂಗದ ನಿಯೋಗವು ಸಿಎಂ ವಿಜಯ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಆ ಭೇಟಿ ನಡೆದ ಕೆಲವೇ ದಿನಗಳಲ್ಲಿ ಚಿತ್ರೋದ್ಯಮದ ಪರವಾಗಿ ಈ ಮಹತ್ವದ ಆದೇಶ ಹೊರಬಿದ್ದಿರುವುದು ಇಡೀ ಕಾಲಿವುಡ್ ವಲಯದಲ್ಲಿ ಸಂತಸ ತಂದಿದೆ.