ʻಟಾಕ್ಸಿಕ್ʼ ಚಿತ್ರದ ಮಲಯಾಳಂ ವರ್ಷನ್ ಹಕ್ಕುಗಳು ಯಾರ ಪಾಲಾಯ್ತು? ಯಶ್ ಸಿನಿಮಾ ಸಿಕ್ಕಿದ್ದಕ್ಕೆ ಕೇರಳ ವಿತರಕರು ಫುಲ್ ಖುಷ್
Toxic Malayalam Rights: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಕೇರಳ ವಿತರಣಾ ಹಕ್ಕುಗಳನ್ನು E4 ಎಂಟರ್‌ಟೈನ್‌ಮೆಂಟ್ ಸಂಸ್ಥೆ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ತವರು ರಾಜ್ಯವಾದ ಕೇರಳದಲ್ಲಿ ಸುಮಾರು 350ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.
-
ಯಶ್ ಅಭಿನಯದ ʻಟಾಕ್ಸಿಕ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲು ಸಜ್ಜಾಗದೆ. ಈ ಸಿನಿಮಾದ ವಿತರಣಾ ಹಕ್ಕುಗಳನ್ನು ಈಗಾಗಲೇ ವಿವಿಧ ಭಾಷೆಯ ವಿತರಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಸದ್ಯ ಕೇರಳ ರಾಜ್ಯದ ಟಾಕ್ಸಿಕ್ ವಿತರಣಾ ಹಕ್ಕುಗಳು ಮಾರಾಟವಾಗಿದ್ದು, ಮುಖೇಶ್ ಮೆಹ್ತಾ ಮತ್ತು ಸಿ. ವಿ. ಸಾರಥಿ ನೇತೃತ್ವದ E4 ಎಂಟರ್‌ಟೈನ್‌ಮೆಂಟ್ (E4 Entertainment) ಸಂಸ್ಥೆಯು ಅಧಿಕೃತವಾಗಿ ಈ ಚಿತ್ರದ ಕೇರಳ ವಿತರಣಾ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.
350 ಚಿತ್ರಮಂದಿರಗಳಲ್ಲಿ ರಿಲೀಸ್
ಈ ಹಿಂದೆ 'ಪುಷ್ಪ 2', 'ಅನಿಮಲ್', 'ಲಿಯೋ' ಮತ್ತು 'ಅವತಾರ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಕೇರಳದಲ್ಲಿ ಬಿಡುಗಡೆ ಮಾಡಿದ ಖ್ಯಾತಿ E4 ಎಂಟರ್‌ಟೈನ್‌ಮೆಂಟ್ ಸಂಸ್ಥೆಗೆ ಇದೆ. ಕೇರಳದಲ್ಲಿ ನಟ ಯಶ್ ಅವರಿಗೆ ಇರುವ ಜನಪ್ರಿಯತೆ ಅಪ್ರತಿಮವಾದುದು. ಈ ಹಿಂದೆ 'ಕೆಜಿಎಫ್ 2' ಚಿತ್ರವು ಕೇರಳದಲ್ಲಿ ಮಲಯಾಳಂ ಅಲ್ಲದ ಚಿತ್ರವೊಂದು ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆಯನ್ನು ಹೊಂದಿತ್ತು. ಈಗ 'ಟಾಕ್ಸಿಕ್' ಚಿತ್ರವು ಕೇರಳದ ಯುವಕರು ಮತ್ತು ಮಾಸ್ ಪ್ರೇಕ್ಷಕರ ಮೊದಲ ಆಯ್ಕೆಯಾಗಿದ್ದು, ಸುಮಾರು 350ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು E4 ಎಂಟರ್‌ಟೈನ್‌ಮೆಂಟ್ ಯೋಜಿಸಿದೆ.
Dhurandhar 2 vs Toxic: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್ಜಿವಿ? ಗರಂ ಆದ್ರು ಕನ್ನಡಿಗರು
ಈ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಮೂಲತಃ ಕೇರಳದವರಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬೃಹತ್ ಕ್ಯಾನ್ವಾಸ್‌ನ ಸಿನಿಮಾವನ್ನು ಸ್ವಂತ ರಾಜ್ಯದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಿರುವುದು ಗೀತು ಅವರಿಗೂ ಒಂದು ರೀತಿಯಲ್ಲಿ 'ಹೋಮ್ ಕಮಿಂಗ್' ಎನ್ನಲಾಗಿದೆ. ಗೀತು ಮೋಹನ್ ದಾಸ್ ಅವರ ಕಥಾಹಂದರ ಮತ್ತು ಯಶ್ ಅವರ ಮಾಸ್ ಅವತಾರವನ್ನು ನೋಡಲು ಮಲಯಾಳಂ ಪ್ರೇಕ್ಷಕರು ತುದಿಗಾಲಿನಲ್ಲಿ ಕಾಯುತ್ತಿರುವುದಂತೂ ಪಕ್ಕಾ.
ವಿತರಕರು ಹೇಳಿದ್ದೇನು?
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ E4 ಎಂಟರ್‌ಟೈನ್‌ಮೆಂಟ್‌ನ ಮುಖೇಶ್ ಮೆಹ್ತಾ, "ನಮ್ಮ ಮೇಲೆ ನಂಬಿಕೆಯಿಟ್ಟು ಕೇರಳದ ವಿತರಣಾ ಜವಾಬ್ದಾರಿ ನೀಡಿದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌ಗೆ ನಾವು ಆಭಾರಿ. 'ಟಾಕ್ಸಿಕ್' ಒಂದು ಧೈರ್ಯಶಾಲಿ ದೃಶ್ಯಕಾವ್ಯವಾಗಿದ್ದು, ಕೇರಳದ ಪ್ರೇಕ್ಷಕರಿಗೆ ಇದನ್ನು ಅದ್ಧೂರಿಯಾಗಿ ತಲುಪಿಸುವುದು ನಮ್ಮ ಗುರಿ" ಎಂದು ಹೇಳಿದ್ದಾರೆ.
ಈಗಾಗಲೇ ಉತ್ತರ ಭಾರತದಲ್ಲಿ ಅನಿಲ್ ಥಡಾನಿ (AA Films) ಮತ್ತು ತೆಲುಗು ರಾಜ್ಯಗಳಲ್ಲಿ ದಿಲ್ ರಾಜು (SVC) ಅಂತಹ ದಿಗ್ಗಜರು ಟಾಕ್ಸಿಕ್ ಸಿನಿಮಾದ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದ್ದು, ಈಗ E4 ಎಂಟರ್‌ಟೈನ್‌ಮೆಂಟ್ ಸೇರ್ಪಡೆಯಿಂದ 'ಟಾಕ್ಸಿಕ್' ಮಾರುಕಟ್ಟೆ ಮತ್ತಷ್ಟು ಬಲಗೊಂಡಿದೆ. ಮಾರ್ಚ್ 19ರಂದು 'ಟಾಕ್ಸಿಕ್' ವಿಶ್ವಾದ್ಯಂತ ಕನ್ನಡ, ಇಂಗ್ಲಿಷ್, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಾಣಲಿದೆ.