23,000 ಸಶಸ್ತ್ರ ಪೊಲೀಸ್ ಪಡೆ, ಬಹುಹಂತದ ಬ್ಯಾರಿಕೇಡ್: ಅಕ್ಟೋಬರ್ 10ರ ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಪಗಾವಲು
CJP Protest: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ಅಕ್ಟೋಬರ್ 10ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಹೀಗಾಗಿ ಅಧಿಕಾರಿಗಳು ಭಾರಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಅಕ್ಟೋಬರ್ 8ರಿಂದ 12ರವರೆಗೆ 221 ಸಿಎಪಿಎಫ್ ಘಟಕಗಳ ನಿಯೋಜನೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 8: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಅಕ್ಟೋಬರ್ 10ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಾರಿ ಭದ್ರತೆಯನ್ನು ನಿಯೋಜಿಸಿದ್ದು, ಸುತ್ತಮುತ್ತಲಿನ ರಾಜ್ಯಗಳು ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು 23,000 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಅಕ್ಟೋಬರ್ 8ರಿಂದ 12ರವರೆಗೆ 221 ಸಿಎಪಿಎಫ್ ಘಟಕಗಳ ನಿಯೋಜನೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ. ಇದಲ್ಲದೆ, ದೆಹಲಿ ಪೊಲೀಸರಿಗೆ ಹೆಚ್ಚುವರಿಯಾಗಿ 110 ಸಿಎಪಿಎಫ್ ಘಟಕಗಳನ್ನು ಒದಗಿಸಲಾಗಿದೆ. ಇವುಗಳಲ್ಲಿ 85 ಕೇಂದ್ರ ಮೀಸಲು ಪೊಲೀಸ್ ಪಡೆ, 10 ಸಶಸ್ತ್ರ ಸೀಮಾ ಬಲ್, 7 ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, 7 ಕ್ಷಿಪ್ರ ಕಾರ್ಯಪಡೆ ಮತ್ತು 1 ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಘಟಕ ಸೇರಿವೆ. ಪ್ರತಿಭಟನೆಯ ಸಮಯದಲ್ಲಿ 20,000 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಜುಲೈಯಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಸುಮಾರು 150 ಸಿಎಪಿಎಫ್ ಘಟಕಗಳನ್ನು ನಿಯೋಜಿಸಲಾಗಿತ್ತು. ರೈತರ ಪ್ರತಿಭಟನೆಯ ಸಂದರ್ಭದಲ್ಲಿ 93 ಘಟಕಗಳನ್ನು ನಿಯೋಜಿಸಲಾಗಿತ್ತು. ದೆಹಲಿಯ ಎಲ್ಲ ಗಡಿಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಬಂಧನದ ವೇಳೆ ಪ್ರತಿಭಟನಾಕಾರರಿಂದ ದೆಹಲಿ ಪೊಲೀಸರ ಮೇಲೆ ಹಲ್ಲೆ?
ಪೊಲೀಸರು ದೆಹಲಿಯ ಎಲ್ಲ ಮೆಟ್ರೋ ನಿಲ್ದಾಣಗಳನ್ನು ಮುಚ್ಚುವ ಸಾಧ್ಯತೆಯಿದೆ. ಅಗತ್ಯವಿದ್ದರೆ ಮಾರುಕಟ್ಟೆಗಳನ್ನು ಸಹ ಮುಚ್ಚಬಹುದು ಎಂದು ಮೂಲಗಳು ತಿಳಿಸಿವೆ. ಬಹುಹಂತದ ಬ್ಯಾರಿಕೇಡ್‌ಗಳನ್ನು ಸಹ ಅಳವಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿಯಾದ್ಯಂತ ಮುಖ ಗುರುತಿಸುವ ವ್ಯವಸ್ಥೆ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.
ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ತುರ್ತು ಆದೇಶಗಳನ್ನು ಹೊರಡಿಸುವ ಅಧಿಕಾರವನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ನೀಡುವ ಬಿಎನ್‌ಎಸ್‌ಎಸ್ ಸೆಕ್ಷನ್ 163 ಕೂಡ ಜಾರಿಯಲ್ಲಿರಲಿದೆ. ಪ್ರತಿಭಟನೆಗಳು ಅಥವಾ ಜನರು ಗುಂಪುಗೂಡುವುದಕ್ಕೆ ಯಾವುದೇ ಅನುಮತಿ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ರೈಲು ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳ ಮೇಲೂ ನಿಗಾ ಇರಿಸಲಾಗುವುದು ಎಂದು ಹೇಳಲಾಗಿದೆ.
ಪ್ರತಿಭಟನೆಗಳ ಸಂದರ್ಭದಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿ ನೆರೆಯ ಎಲ್ಲ ರಾಜ್ಯಗಳಿಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ವಕ್ತಾರ ಸೌರವ್ ದಾಸ್ ಘೋಷಿಸಿದ್ದಾರೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತಾವಿತ ಪ್ರತಿಭಟನೆ ಕುರಿತು ದೆಹಲಿ ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ನೀಡುವುದಾಗಿ ತಿಳಿಸಿದರು. ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಅವರು ಹೇಳಿದರು.