ರಾಹುಲ್ ಗಾಂಧಿ ಬಂಧನದ ವೇಳೆ ಹೈಡ್ರಾಮ: ಕಾರ್ ಹೈಜಾಕ್ ಯತ್ನ, ಕಾಲರ್ ಹಿಡಿದು ಜಗ್ಗಾಡಿದ ಪ್ರತಿಭಟನಾಕಾರರು!
Delhi Cops: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಸೇರಿ ವಿಪಕ್ಷ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರಿ ನೂಕುನುಗ್ಗಲು ನಡೆದಿದೆ. ಪೊಲೀಸರ ಆರೋಪದ ಪ್ರಕಾರ, ಕೆಲ ಪ್ರತಿಭಟನಾಕಾರರು ರಾಹುಲ್ ಗಾಂಧಿ ಇದ್ದ ವಾಹನವನ್ನು ಸುತ್ತುವರಿದು ಕಾರಿನ ಕೀ ಕಿತ್ತುಕೊಳ್ಳಲು ಯತ್ನಿಸಿದ್ದು, ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು ಸಮವಸ್ತ್ರ ಹರಿದು ಹಲ್ಲೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 8: ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಜ್ಞಾನೇಶ್ ಕುಮಾರ್ (Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಪ್ರತಿಭಟನೆಯ ವೇಳೆ, ಕಾನೂನು ಸುವ್ಯವಸ್ಥೆ ಕಾಪಾಡಲು ಯತ್ನಿಸುತ್ತಿದ್ದ ದೆಹಲಿ ಪೊಲೀಸ್ (Delhi Police) ಸಿಬ್ಬಂದಿಯ ಮೇಲೆ ಪ್ರತಿಭಟನಾಕಾರರು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ. ಕರ್ತವ್ಯ ನಿರತ ಪೊಲೀಸರ ನೇಮ್‌ಪ್ಲೇಟ್‌ಗಳನ್ನು ಮುರಿದು, ಸಮವಸ್ತ್ರ ಹರಿದು, ತಲೆಯ ಮೇಲಿದ್ದ ಟೋಪಿಗಳನ್ನು ಕಿತ್ತು ಎಸೆಯಲಾಗಿದೆ ಎಂದು ಗಾಯಗೊಂಡ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾನ ವ್ಯವಸ್ಥೆಯ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಹೊರಟಿದ್ದರು. ಈ ವೇಳೆ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಪೊಲೀಸರು ನಾಯಕರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರಿ ನೂಕುನುಗ್ಗಲು ಉಂಟಾಗಿದೆ.
ಪೊಲೀಸರ ಮೇಲೆ ಹಲ್ಲೆ:
"They bit me, assaulted me, even tore my uniform." - Delhi Police constable reveals true nature of protesters. Look what these slaves are doing to those Police constables who are on duty. https://t.co/89hemYewP2
— Avinash K S🇮🇳 (@AvinashKS14) October 7, 2026
ಘಟನೆಯ ಬಗ್ಗೆ ಎಎನ್‌ಐ ಜತೆ ಮಾತನಾಡಿದ ಕಾನ್‌ಸ್ಟೆಬಲ್ ದೇವೇಂದ್ರ ಸಂಧು, "ನಾವು ಪ್ರೊಟೆಕ್ಷನ್ ವ್ಯಾಪ್ತಿಯಲ್ಲಿದ್ದುಕೊಂಡು, ಇಲ್ಲಿ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ, ದಯವಿಟ್ಟು ಬಸ್‌ಗಳನ್ನು ಹತ್ತಿ ಎಂದು ಶಾಂತಿಯುತವಾಗಿ ಮನವಿ ಮಾಡುತ್ತಿದ್ದೆವು. ಆದರೆ ಪ್ರತಿಭಟನಾಕಾರರು ನಮ್ಮ ನೇಮ್‌ಪ್ಲೇಟ್‌ಗಳನ್ನು ಮುರಿದು, ತಲೆಯ ಮೇಲಿದ್ದ ಟೋಪಿಗಳನ್ನು ಕಿತ್ತು ಎಸೆದರು. ನಂತರ ನಮ್ಮನ್ನು ಹಿಂದಿನಿಂದ ಎಳೆದು ನೆಲಕ್ಕೆ ತಳ್ಳಿ ಕಾಲಿನಿಂದ ತುಳಿದರು. ನನ್ನ ಸೊಂಟ ಮತ್ತು ತಲೆಯ ಹಿಂಭಾಗಕ್ಕೆ ತೀವ್ರ ಗಾಯಗಳಾಗಿವೆ" ಎಂದು ತಿಳಿಸಿದ್ದಾರೆ.
ಅಕ್ಟೋಬರ್ 10ರವರೆಗೆ ರಿಯಾದ್ ಟ್ರಿಪ್ ರದ್ದುಗೊಳಿಸಿದ ಏರ್ ಇಂಡಿಯಾ, ಇಂಡಿಗೋ
ಮತ್ತೋರ್ವ ಕಾನ್‌ಸ್ಟೆಬಲ್ ಅಂಕಿತ್ ಕಸಾನಾ ಮಾತನಾಡಿ, ರಾಹುಲ್ ಗಾಂಧಿ ಅವರಿದ್ದ ವಾಹನವನ್ನು ಸಾಗಿಸಲು ಯತ್ನಿಸುತ್ತಿದ್ದಾಗ 30 ರಿಂದ 35 ಮಂದಿ ಸುತ್ತುವರೆದರು. ಕೆಲವರು ಕಾರಿನ ಕೀ ಕಿತ್ತುಕೊಳ್ಳಲು ಮತ್ತು ವಾಹನವನ್ನು ಹೈಜಾಕ್ ಮಾಡಲು ಯತ್ನಿಸಿದರು. ಈ ವೇಳೆ ನನ್ನ ಕಾಲರ್ ಹಿಡಿದು ಸಮವಸ್ತ್ರ ಹರಿದು ಬಟನ್‌ಗಳನ್ನು ಕಿತ್ತೆಸೆದರು ಎಂದು ಆರೋಪಿಸಿದ್ದು, ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಹಿಳಾ ಪೊಲೀಸರ ಮೇಲೂ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ ಎಂದು ಮಹಿಳಾ ಸಿಬ್ಬಂದಿ ದೂರಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ದೆಹಲಿ ಡಿಸಿಪಿ ಸೃಷ್ಟಿ ಪಾಂಡೆ, "ಯುವ ಪೀಳಿಗೆಯು ಯಾವುದೋ ಕೆಟ್ಟ ಪ್ರಭಾವಕ್ಕೆ ಒಳಗಾಗಿ ದಾರಿತಪ್ಪುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಮವಸ್ತ್ರಧಾರಿ ಪೊಲೀಸರ ಮೇಲೆ ಕೈಮಾಡುವುದು, ಕಚ್ಚುವುದು ಅಥವಾ ಪರಚುವುದು ಸಮಾಜಕ್ಕೆ ಒಳ್ಳೆಯ ಸಂದೇಶವಲ್ಲ" ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಮತ್ತು ಅನುಚಿತ ವರ್ತನೆ ಆರೋಪದಡಿ ದೆಹಲಿ ಪೊಲೀಸರು ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.