ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ahmedabad Air Crash: ಅಹಮದಾಬಾದ್ ವಿಮಾನ ದುರಂತ: ಏರ್ ಇಂಡಿಯಾದಿಂದ ಸಂತ್ರಸ್ತ ಕುಟುಂಬಗಳಿಗೆ ಬೆದರಿಕೆ ಆರೋಪ

ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಬೇಕಿರುವ ಪರಿಹಾರಕ್ಕೆ ಸಂಬಂಧಿಸಿ ಏರ್ ಇಂಡಿಯಾ ಸಂಸ್ಥೆ ಬೆದರಿಕೆ ಹಾಕುತ್ತಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದು, ಇದನ್ನು ವಿಮಾನಯಾನ ಸಂಸ್ಥೆ ನಿರಾಕರಿಸಿದೆ. ಅಹಮದಾಬಾದ್‌ನಲ್ಲಿ ಜೂನ್ 12ರಂದು ನಡೆದ ಏರ್ ಇಂಡಿಯಾ- 171 ವಿಮಾನ ಅಪಘಾತದಲ್ಲಿ ಒಟ್ಟು 241 ಮಂದಿ ಸಾವನ್ನಪ್ಪಿದ್ದರು.

ಪರಿಹಾರದ ಬಗ್ಗೆ ಏರ್ ಇಂಡಿಯಾದಿಂದ ಬೆದರಿಕೆ:  ಆರೋಪ

ಅಹಮದಾಬಾದ್: ಇತ್ತೀಚೆಗೆ ಅಹಮದಾಬಾದ್ (Ahmedabad) ನಲ್ಲಿ ನಡೆದ ವಿಮಾನ ದುರಂತದಲ್ಲಿ (Air Crash) ಮೃತಪಟ್ಟವರ ಕುಟುಂಬಗಳಿಗೆ ನೀಡಬೇಕಿರುವ ಪರಿಹಾರಕ್ಕೆ ಸಂಬಂಧಿಸಿ ಏರ್ ಇಂಡಿಯಾ (Air India) ಸಂಸ್ಥೆ ಬೆದರಿಕೆ ಹಾಕುತ್ತಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದು, ಇದನ್ನು ವಿಮಾನಯಾನ ಸಂಸ್ಥೆ ನಿರಾಕರಿಸಿದೆ. ಅಹಮದಾಬಾದ್‌ನಲ್ಲಿ ಜೂನ್ 12ರಂದು ನಡೆದ ಏರ್ ಇಂಡಿಯಾ- 171 ವಿಮಾನ ಅಪಘಾತದಲ್ಲಿ ಒಟ್ಟು 241 ಮಂದಿ ಸಾವನ್ನಪ್ಪಿದ್ದರು. ಬಳಿಕ ಸಂತ್ರಸ್ತ ಕುಟುಂಬಗಳಿಗೆ ವಿಮಾನಯಾನ ಸಂಸ್ಥೆಯು ಪರಿಹಾರ ನೀಡುವ ಪ್ರಕ್ರಿಯೆಯನ್ನು ಚಾಲನೆಗೊಳಿಸಿದೆ. ಆದರೆ ಈ ನಡುವೆ ವಿಮಾನಯಾನ ಸಂಸ್ಥೆಯು ತಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಸಂತ್ರಸ್ತ ಕುಟುಂಬಗಳು ಆರೋಪಿಸಿವೆ.

ಅಪಘಾತದ ವಾರಗಳ ಬಳಿಕ ವಿಮಾನಯಾನ ಸಂಸ್ಥೆಯು ಒದಗಿಸುವ ಪ್ರಶ್ನಾವಳಿಯನ್ನು ಪೂರ್ಣಗೊಳಿಸಲು ವಿಫಲವಾದರೆ ಪರಿಹಾರ ನೀಡಲಾಗುವುದಿಲ್ಲ ಎನ್ನುವ ಬೆದರಿಕೆ ಒಡ್ಡುತ್ತಿದೆ. ಅಲ್ಲದೇ ಪರಿಹಾರ ಪಾವತಿಗಳನ್ನು ಕಡಿತಗೊಳಿಸಲು ತಮ್ಮ ಕುಟುಂಬದ ಮೃತ ಸದಸ್ಯರ ಮೇಲಿನ ಆರ್ಥಿಕ ಅವಲಂಬನೆಯನ್ನು ಬಹಿರಂಗಪಡಿಸುವ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ವಿರುದ್ಧ ಕೆಲವರು ಆರೋಪಿಸಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆಗಳು, ಇದು ಆಧಾರ ರಹಿತ ಎಂದು ಹೇಳಿ ತಿರಸ್ಕರಿಸಿದೆ.

ಏನಾಗಿತ್ತು?

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವೈದ್ಯಕೀಯ ಕಾಲೇಜಿನ ವಸತಿ ಕಟ್ಟಡಕ್ಕೆ ಅಪ್ಪಳಿಸಿದೆ. ಪರಿಣಾಮ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸಾವನ್ನಪ್ಪಿದ್ದರು.

ಆರೋಪವೇನು?

ವಿಮಾನ ಅಪಘಾತದಲ್ಲಿ ಮೃತಪಟ್ಟವರ ಯುಕೆ ಮತ್ತು ಭಾರತದ 40 ಕ್ಕೂ ಹೆಚ್ಚು ಪ್ರಯಾಣಿಕರ ಕುಟುಂಬಗಳು ಕಾನೂನು ಬಾಧ್ಯತೆಗಳನ್ನು ಪೂರೈಸಲು ಯುಕೆ ಮೂಲದ ಕಾನೂನು ಸಂಸ್ಥೆ ಸ್ಟೀವರ್ಟ್ಸ್ ಅನ್ನು ನೇಮಕಗೊಳಿಸಿದೆ. ಪರಿಹಾರ ಕಾರ್ಯಕ್ಕಾಗಿ ಇದು ಅಹಮದಾಬಾದ್‌ನಲ್ಲಿರುವ ನಾನಾವತಿ ಎಂಬ ಕಾನೂನು ಸಂಸ್ಥೆಯೊಂದಿಗೆ ವ್ಯವಹರಿಸುತ್ತಿದೆ ಎನ್ನಲಾಗಿದೆ.

ಪರಿಹಾರ ವಿತರಣೆ ಪ್ರಕ್ರಿಯೆಯಲ್ಲಿ ಮುಂಗಡ ಪಾವತಿಯನ್ನು ಪಡೆಯಲು ಪ್ರಶ್ನಾವಳಿಯನ್ನು ಪೂರ್ಣಗೊಳಿಸಬೇಕು ಎಂದು ಏರ್ ಇಂಡಿಯಾ ತನ್ನ ಕಕ್ಷಿದಾರರಿಗೆ ತಿಳಿಸಿದೆ ಎಂದು ಕಾನೂನು ಸಂಸ್ಥೆಯು ಹೇಳಿದೆ.

ಈ ಮೂಲಕ ವಿಮಾನಯಾನ ಸಂಸ್ಥೆಯು ಈ ಪ್ರಶ್ನಾವಳಿಯನ್ನು ಭರ್ತಿ ಮಾಡಲು ಕಕ್ಷಿದಾರರನ್ನು ಒತ್ತಾಯಿಸುತ್ತಿದೆ. ಮುಂಗಡ ಪಾವತಿಯನ್ನು ಪಡೆಯಲು ಮಾತ್ರ ಈ ಪ್ರಶ್ನಾವಳಿ ಅಗತ್ಯವಿದೆ ಎನ್ನಲಾಗಿದೆ ಎಂದು ಸಂತ್ರಸ್ತ ಕುಟುಂಬಸ್ಥರು ಆರೋಪಿಸಿದ್ದಾರೆ.

ಅಲ್ಲದೇ ಏರ್ ಇಂಡಿಯಾ ಕೆಲವು ಕುಟುಂಬಗಳನ್ನು ಸಂಪರ್ಕಿಸಿ ಯಾವುದೇ ಪರಿಹಾರ ಪಡೆಯುವುದಿಲ್ಲ ಎಂದು ಹೇಳಲು ಬೆದರಿಕೆ ಒಡ್ಡುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ ಎಂದು ಕಾನೂನು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾ ಒದಗಿಸಿರುವ ಪ್ರಶ್ನಾವಳಿಯಲ್ಲಿ ಭವಿಷ್ಯದಲ್ಲಿ ಪರಿಹಾರವನ್ನು ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ನಿಯಮಗಳನ್ನು ವಿಮಾನಯಾನ ಸಂಸ್ಥೆಯು ಕುಟುಂಬಗಳಿಗೆ ಸರಿಯಾಗಿ ವಿವರಿಸುತ್ತಿಲ್ಲ ಎಂದು ಕಾನೂನು ಸಂಸ್ಥೆ ತಿಳಿಸಿದೆ.

ಪ್ರಶ್ನಾವಳಿಯಲ್ಲಿರುವ ಪ್ರಶ್ನೆಗಳನ್ನು ಕೆಲವರು ಮಾತ್ರ ಅರ್ಥ ಮಾಡಿಕೊಳ್ಳುವಂತಿದೆ. ಸಾಮಾನ್ಯರು ಇದನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವರು ಸರಿಯಾದ ಉತ್ತರ ನೀಡುವುದು ಕಷ್ಟ. ಇದರಿಂದ ಅವರಿಗೆ ಸಿಗುವ ಪರಿಹಾರದಲ್ಲಿ ಕಡಿತವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸಂಸ್ಥೆ ಹೇಳಿದೆ.

ನಾವು ನಮ್ಮ ಕಕ್ಷಿದಾರರಿಗೆ ಫಾರ್ಮ್ ಅನ್ನು ಪೂರ್ಣಗೊಳಿಸದಂತೆ ಸಲಹೆ ನೀಡಿದ್ದೇವೆ. ಕುಟುಂಬಗಳು ಅತ್ಯಂತ ದುಃಖದ ಸ್ಥಿತಿಯಲ್ಲಿರುವಾಗ ಏರ್ ಇಂಡಿಯಾ ಮಾಹಿತಿಗಾಗಿ ಒತ್ತಡ ಹೇರುತ್ತಿರುವುದು ಆಘಾತವನ್ನು ಉಂಟು ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.

ಏರ್ ಇಂಡಿಯಾ ಏನು ಹೇಳಿದೆ?

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ, ಅರ್ಹರು ಪರಿಹಾರ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ಮಾಹಿತಿಗಳನ್ನು ಕೇಳಲಾಗಿದೆ. ಅಲ್ಲದೇ ಸಹಾಯದ ಹೆಚ್ಚು ಅಗತ್ಯವಿರುವವರಿಗೆ ಮೊದಲು ಪಾವತಿಗಳನ್ನು ಮಾಡಲು ಇದು ಅಗತ್ಯ ಪ್ರಶ್ನೆಯಾಗಿದೆ ಎಂದು ತಿಳಿಸಿದೆ.

ಕುಟುಂಬಗಳು ಅಹಮದಾಬಾದ್‌ನಲ್ಲಿ ಸ್ಥಾಪಿಸಲಾದ ಕೇಂದ್ರದಲ್ಲಿ ಅಥವಾ ಇ-ಮೇಲ್ ಮೂಲಕವು ಈ ಪ್ರಶ್ನಾವಳಿಗೆ ಪ್ರತಿಕ್ರಿಯಿಸಬಹುದು ಎಂದು ಹೇಳಿದೆ.ಜೂನ್ 15 ರಿಂದ ಏರ್ ಇಂಡಿಯಾ ಅಹಮದಾಬಾದ್‌ನ ತಾಜ್ ಸ್ಕೈಲೈನ್ ಹೊಟೇಲ್ ನಲ್ಲಿ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿದ್ದು, ಅಲ್ಲಿ ಮಧ್ಯಂತರ ಪರಿಹಾರಕ್ಕೆ ಸಂಬಂಧಿಸಿದ ಪ್ರಶ್ನಾವಳಿ ಲಭ್ಯವಿದೆ. ಸಂತ್ರಸ್ತ ಕುಟುಂಬಗಳು ಕೇಂದ್ರಕ್ಕೆ ಭೇಟಿ ನೀಡಲು ಬಯಸದಿದ್ದರೆ ಪ್ರಶ್ನಾವಳಿ ಇ-ಮೇಲ್ ಮೂಲಕವೂ ಲಭ್ಯವಿದೆ ಎಂದು ಕುಟುಂಬಗಳಿಗೆ ತಿಳಿಸಲು ಸಂದೇಶಗಳನ್ನು ಕಳುಹಿಸಲಾಗಿದೆ. ಕುಟುಂಬ ಸದಸ್ಯರಿಗೆ ಪ್ರಶ್ನಾವಳಿಯ ಅಂಶಗಳನ್ನು ವಿವರಿಸಲು ಏರ್ ಇಂಡಿಯಾ ಸಿಬ್ಬಂದಿ ಕೇಂದ್ರದಲ್ಲಿದ್ದಾರೆ. ಅಲ್ಲದೇ ಕುಟುಂಬ ಸದಸ್ಯರು ಕೇಂದ್ರದಲ್ಲಿ ಪ್ರಶ್ನಾವಳಿಯನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಶ್ನಾವಳಿಯನ್ನು ಪೂರ್ಣಗೊಳಿಸಲು ಮತ್ತು ಅದನ್ನು ಇ-ಮೇಲ್ ಮೂಲಕ ಸಲ್ಲಿಸಬಹುದು. ಕುಟುಂಬಗಳು ಬಯಸಿದರೆ ಕಾನೂನು ಸಲಹೆಯನ್ನು ಪಡೆಯಲು ಮುಕ್ತರಾಗಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: Baba Vanga: ನಾಳೆ ಸುನಾಮಿ ಸಂಭವಿಸೋದು ಪಕ್ಕಾನಾ? ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯವಾಣಿ?

ಈಗಾಗಲೇ ಏರ್ ಇಂಡಿಯಾ ಇದುವರೆಗೆ 47 ಕುಟುಂಬಗಳಿಗೆ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿದೆ. ಇತರ 55 ಜನರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಪರಿಹಾರವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂತ್ರಸ್ತ ಕುಟುಂಬಗಳು ಮತ್ತು ಅವರ ಅಧಿಕೃತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದೆ.