ನವೆಂಬರ್ 1ರಿಂದ ಅಯೋಧ್ಯೆ ರಾಮಮಂದಿರ ದರ್ಶನದ ಸಮಯ ಬದಲು: ಹೊಸ ವೇಳಾಪಟ್ಟಿ ಇಲ್ಲಿದೆ
Ayodhya Ram Mandir Darshan: ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪ್ರಕಾರ ದೇವಾಲಯವು ಬೆಳಗ್ಗೆ 4 ಗಂಟೆಗೆ ತೆರೆದು ರಾತ್ರಿ 10 ಗಂಟೆಗೆ ಮುಚ್ಚಲ್ಪಡುತ್ತದೆ. ಪ್ರಸ್ತುತ, ದೇವಾಲಯದ ಬಾಗಿಲು ಬೆಳಗ್ಗೆ 3:45ಕ್ಕೆ ತೆರೆದು ರಾತ್ರಿ 10:30ರವರೆಗೆ ತೆರೆದಿರುತ್ತವೆ. ದೇವಾಲಯದ ಬಾಗಿಲು ಬೆಳಗ್ಗೆ 4 ಗಂಟೆಗೆ ತೆರೆದ ನಂತರ ಮಂಗಳಾರಾತಿ ಬೆಳಗ್ಗೆ 4:30ರಿಂದ 4:40ರವರೆಗೆ ನಡೆಯಲಿದೆ.
ಅಯೋಧ್ಯೆ ರಾಮ ಮಂದಿರ (ಸಂಗ್ರಹ ಚಿತ್ರ) -
ಲಖನೌ, ಅ. 27: ಋತುಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಅಯೋಧ್ಯೆ (Ayodhya) ರಾಮ ಮಂದಿರದಲ್ಲಿ (Ram Mandir) ಪೂಜೆ, ಆರತಿ, ಭೋಗ, ವಿಶ್ರಾಂತಿ ಮತ್ತು ದರ್ಶನದ ದೈನಂದಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ಸಮಯ 2026ರ ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಘೋಷಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪ್ರಕಾರ, ದೇವಾಲಯವು ಬೆಳಗ್ಗೆ 4 ಗಂಟೆಗೆ ತೆರೆದು ರಾತ್ರಿ 10 ಗಂಟೆಗೆ ಮುಚ್ಚಲ್ಪಡುತ್ತದೆ. ಪ್ರಸ್ತುತ, ದೇವಾಲಯದ ಬಾಗಿಲು ಬೆಳಗ್ಗೆ 3:45ಕ್ಕೆ ತೆರೆದು ರಾತ್ರಿ 10:30ರವರೆಗೆ ತೆರೆದಿರುತ್ತವೆ.
ದೇವಾಲಯದ ಬಾಗಿಲು ಬೆಳಗ್ಗೆ 4 ಗಂಟೆಗೆ ತೆರೆದ ನಂತರ, ಮಂಗಳಾರಾತಿ ಬೆಳಗ್ಗೆ 4:30ರಿಂದ 4:40ರವರೆಗೆ ನಡೆಯಲಿದೆ. ನಂತರ ಅಭಿಷೇಕ, ಶೃಂಗಾರ, ಧೂಪದೀಪ ಮತ್ತು ನೈವೇದ್ಯಕ್ಕಾಗಿ ಬೆಳಗ್ಗೆ 6:30ರವರೆಗೆ ಬಾಗಿಲು ಮುಚ್ಚಲಾಗುತ್ತದೆ. ಬೆಳಗ್ಗೆ 6:30ಕ್ಕೆ ಶೃಂಗಾರ ಆರತಿ ನಡೆಯಲಿದ್ದು, ನಂತರ ಭಕ್ತರಿಗೆ ದರ್ಶನ ಪ್ರಾರಂಭವಾಗುತ್ತದೆ. ಬಾಲ ಭೋಗಕ್ಕಾಗಿ ದೇವಾಲಯವು ಮತ್ತೆ ಬೆಳಗ್ಗೆ 8ರಿಂದ 8:10ರವರೆಗೆ ಮುಚ್ಚಲ್ಪಡುತ್ತದೆ. ನಂತರ ದರ್ಶನವು ಬೆಳಗ್ಗೆ 11:30ರವರೆಗೆ ಮುಂದುವರಿಯಲಿದೆ.
ರಾಜಭೋಗ ಮತ್ತು ಮಧ್ಯಾಹ್ನದ ವೇಳಾಪಟ್ಟಿ
ಬೆಳಗ್ಗೆ 11:30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರಾಜಭೋಗವನ್ನು ಸಮರ್ಪಿಸಲಾಗುತ್ತದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ರಾಜಭೋಗ ಆರತಿ ನಡೆಯಲಿದೆ. ನಂತರ ಶ್ರೀರಾಮಲಲ್ಲಾಗೆ ಮಧ್ಯಾಹ್ನ 12:30ರಿಂದ 1:30ರವರೆಗೆ ವಿಶ್ರಾಂತಿ ಸಮಯ ನಿಗದಿಪಡಿಸಲಾಗಿದೆ. ಇದಾದ ಬಳಿಕ ಅರ್ಚಕರ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಹಾಗೂ ಲಘು ಭೋಗವನ್ನು ಸಮರ್ಪಿಸಲಾಗುತ್ತದೆ. ಮಧ್ಯಾಹ್ನ 1:35ರಿಂದ ಭಕ್ತರಿಗೆ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ 105 ಬಾರಿ ಸಿಸಿಟಿವಿಯಲ್ಲಿ ಸೆರೆ: ಎಸ್ಐಟಿ ತನಿಖಾ ವರದಿಯಲ್ಲೇನಿದೆ?
ಬಾಲ ಭೋಗಕ್ಕಾಗಿ ದೇವಾಲಯದ ಬಾಗಿಲು ಸಂಜೆ 4 ರಿಂದ 4:10ರವರೆಗೆ ಮತ್ತೆ ಮುಚ್ಚಲ್ಪಡುತ್ತದೆ. ನಂತರ ದರ್ಶನವು ಸಂಜೆ 6:45ರವರೆಗೆ ಮುಂದುವರಿಯುತ್ತದೆ. ಸಂಜೆ 6:45ರಿಂದ 7 ಗಂಟೆಯವರೆಗೆ ಧೂಪದೀಪ ಮತ್ತು ನೈವೇದ್ಯವನ್ನು ಅರ್ಪಿಸಲಾಗುವುದು, ನಂತರ ಸಂಜೆ 7 ಗಂಟೆಗೆ ಸಂಧ್ಯಾ ಆರತಿ ನಡೆಯಲಿದೆ.
ರಾತ್ರಿ 8ರಿಂದ 8:30ರವರೆಗೆ ಹಾಗೂ ಮತ್ತೆ ರಾತ್ರಿ 9:15ರಿಂದ 9:30ರವರೆಗೆ ಧೂಪದೀಪ ಮತ್ತು ನೈವೇದ್ಯಕ್ಕಾಗಿ ದೇವಾಲಯದ ಬಾಗಿಲು ಮುಚ್ಚಲ್ಪಡುತ್ತದೆ. ನಿಗದಿತ ಮಧ್ಯಂತರಗಳಲ್ಲಿ ದರ್ಶನ ಮುಂದುವರಿಯುತ್ತದೆ. ರಾತ್ರಿ 9:30ಕ್ಕೆ ಶಯನ ಆರತಿ ನಡೆಯಲಿದ್ದು, ನಂತರ ರಾತ್ರಿ 10 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.