ನಟ ಇಮ್ರಾನ್ ಖಾನ್ಗೆ ರಿಲೀಫ್: ಭಾರತ ಬಿಟ್ಟು ತೊಲಗಿ ನೋಟಿಸ್ಗೆ ಸಂಬಂಧಿಸಿದಂತೆ ನವೆಂಬರ್ 2ರವರೆಗೆ ಯಾವುದೇ ಕ್ರಮ ಇಲ್ಲ ಎಂದ ಸರ್ಕಾರ
Imran Khan leave India notice: ನಟ ಇಮ್ರಾನ್ ಖಾನ್ ವಿರುದ್ಧ ಜಾರಿಗೊಳಿಸಲಾಗಿದ್ದ ಭಾರತ ಬಿಟ್ಟು ತೊಲಗಿ ನೋಟಿಸ್ಗೆ ಸಂಬಂಧಿಸಿದಂತೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಮುಂದಿನ ವಿಚಾರಣೆಯ ದಿನವಾದ ನವೆಂಬರ್ 2ರವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರವು ಬಾಂಬೆ ಹೈಕೋರ್ಟ್ಗೆ ಭರವಸೆ ನೀಡಿದೆ.
ಇಮ್ರಾನ್ ಖಾನ್ (ಸಂಗ್ರಹ ಚಿತ್ರ) -
ನವದೆಹಲಿ, ಅ. 27: ಬಾಲಿವುಡ್ ನಟ ಇಮ್ರಾನ್ ಖಾನ್ (Imran Khan) ವಿರುದ್ಧ ಜಾರಿಗೊಳಿಸಲಾಗಿದ್ದ ಭಾರತ ಬಿಟ್ಟು ತೊಲಗಿ ನೋಟಿಸ್ಗೆ ಸಂಬಂಧಿಸಿದಂತೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಮುಂದಿನ ವಿಚಾರಣೆಯ ದಿನವಾದ ನವೆಂಬರ್ 2ರವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರವು ಬಾಂಬೆ ಹೈಕೋರ್ಟ್ಗೆ (Bombay High Court) ಭರವಸೆ ನೀಡಿದೆ. ಅಮೆರಿಕದ ಪ್ರಜೆಯಾಗಿರುವ ಹಾಗೂ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ (OCI) ಕಾರ್ಡ್ ಹೊಂದಿರುವ ಇಮ್ರಾನ್ ಖಾನ್ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ್ದ ನೋಟಿಸ್ ಅನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಅಕ್ಟೋಬರ್ 10ರಂದು ಎಸ್ಐಆರ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ನಟನಿಗೆ ಈ ನೋಟಿಸ್ ನೀಡಲಾಗಿತ್ತು. ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರೂ ಹೋರಾಟದಲ್ಲಿ ಭಾಗಿಯಾಗಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ನಟ ಇಮ್ರಾನ್ ಖಾನ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಅಮೆರಿಕದ ಪ್ರಜೆಯಾಗಿರುವ ನಟ, ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು. ಈ ದೂರನ್ನು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ರವಾನಿಸಲಾಗಿತ್ತು. ಬಳಿಕ ವಲಸೆ ಮತ್ತು ವಿದೇಶಿಗರ ಕಾಯ್ದೆ 2025ರ ಅಡಿಯಲ್ಲಿ ನಟನಿಗೆ ದೇಶದಿಂದ ಗಡಿಪಾರು ಮಾಡುವ ನೋಟಿಸ್ ನೀಡಲಾಗಿತ್ತು.
ಭಾರತ ಬಿಟ್ಟು ತೊಲಗಿ ಆದೇಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿರುವ ನಟ ಇಮ್ರಾನ್ ಖಾನ್
ಈ ಕಾಯ್ದೆಯ ಸೆಕ್ಷನ್ 7ರ ಪ್ರಕಾರ, ಭಾರತದಲ್ಲಿರುವ ವಿದೇಶಿಗರ ಪ್ರವೇಶ, ನಿರ್ಗಮನ, ವಾಸ್ತವ್ಯ ಅಥವಾ ಸಂಚಾರವನ್ನು ನಿಯಂತ್ರಿಸಲು, ನಿರ್ಬಂಧಿಸಲು ಅಥವಾ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಆದೇಶ, ನಿರ್ದೇಶನ ಅಥವಾ ಸೂಚನೆಗಳನ್ನು ನೀಡುವ ಅಧಿಕಾರವಿದೆ.
43 ವರ್ಷದ ಇಮ್ರಾನ್ ಖಾನ್ ಅಕ್ಟೋಬರ್ 17ರಂದು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ತಾವು ಯಾವುದೇ ಸಭೆ ಅಥವಾ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಹಾಗೂ ಪ್ರತಿಭಟನೆಯ ಆಯೋಜಕರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೆ, ತಮಗೆ ನೀಡಲಾದ ನೋಟಿಸ್ ಕಾನೂನುಬಾಹಿರ, ವಿಕೃತ ಮತ್ತು ತೀವ್ರ ಸ್ವರೂಪದ್ದಾಗಿದೆ ಎಂದು ಅವರು ವಾದಿಸಿದ್ದರು.
ಇಮ್ರಾನ್ ಖಾನ್ ನ್ಯಾಯಾಲಯದ ಮೊರೆ ಹೋದ ಬಳಿಕ, ಅವರ ಒಸಿಐ ಸ್ಥಾನಮಾನವನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಕೋರಿ ಎಫ್ಆರ್ಆರ್ಒ ಕಚೇರಿಯಿಂದ ಶೋಕಾಸ್ ನೋಟಿಸ್ ಕೂಡ ಜಾರಿಯಾಗಿದೆ.
ಮಂಗಳವಾರ (ಅ. 27) ನಡೆದ ವಿಚಾರಣೆ ವೇಳೆ, ಇಮ್ರಾನ್ ಖಾನ್ ಪರ ವಕೀಲ ವೆಂಕಟೇಶ್ ಧೋಂಡ್ ಅಕ್ಟೋಬರ್ 28ರ ಗಡುವಿನ ಬಗ್ಗೆ ನ್ಯಾಯಾಲಯದ ಮುಂದೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಅಲ್ಲಿಯವರೆಗೆ ನಟನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಬಳಿಕ ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಠ್ನಾ ಅವರನ್ನೊಳಗೊಂಡ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ನವೆಂಬರ್ 2ರಂದು ನಡೆಸುವುದಾಗಿ ತಿಳಿಸಿತು.