ರೈಲಿನಿಂದ ಜನ ಸುರಾಜ್ ಪಕ್ಷದ ಕಾರ್ಯಕರ್ತ ನಾಪತ್ತೆ: ಹುಡುಕಾಟದ ಬಳಿಕ ಹಳಿಯಲ್ಲಿ ಶವ ಪತ್ತೆ; ನಿಗೂಢತೆ ಬೇಧಿಸಲು ಮುಂದಾದ ಪೊಲೀಸರು
Jan Suraaj Party: ರಾಜಕಾರಣಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದ ಡಿಜಿಟಲ್ ಸಂವಹನ ವ್ಯವಸ್ಥಾಪಕರಾಗಿದ್ದ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ನಾಪತ್ತೆಯಾಗಿ ಬಳಿಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹ ರಾಂಚಿಯಲ್ಲಿ ರೈಲ್ವೆ ಹಳಿಗಳ ಸಮೀಪ ಕಂಡು ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶವವಾಗಿ ಪತ್ತೆಯಾದ ಜನ ಸುರಾಜ್ ಪಕ್ಷದ ನಾಯಕ ದೇವಪಾಲಿಕ್ ಗುಪ್ತಾ -
ರಾಂಚಿ, ಅ. 27: ರಾಜಕಾರಣಿ ಪ್ರಶಾಂತ್ ಕಿಶೋರ್ (Prashant Kishor) ಅವರ ಜನ ಸುರಾಜ್ ಪಕ್ಷದ (Jan Suraaj Party) ಡಿಜಿಟಲ್ ಸಂವಹನ ವ್ಯವಸ್ಥಾಪಕರಾಗಿದ್ದ ದೇವಪಾಲಿಕ್ ಗುಪ್ತಾ ಚಲಿಸುತ್ತಿದ್ದ ರೈಲಿನಿಂದ ನಾಪತ್ತೆಯಾಗಿ ಬಳಿಕ ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರ ಮೃತದೇಹ ರಾಂಚಿ (Ranchi)ಯಲ್ಲಿ ರೈಲ್ವೆ ಹಳಿಗಳ ಸಮೀಪ ಪತ್ತೆಯಾಗಿದೆ. 31 ವರ್ಷದ ದೇವಪಾಲಿಕ್ ಗುಪ್ತಾ ಭಾರತೀಯ ಸಮೂಹ ಸಂವಹನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಇಬ್ಬರು ಸ್ನೇಹಿತರೊಂದಿಗೆ ರಾಂಚಿ-ಪಟನಾ ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಮಂಗಳವಾರ (ಅ. 27) ಮಧ್ಯಾಹ್ನ ರಾಂಚಿ ಮತ್ತು ಮುರಿ ಜಂಕ್ಷನ್ ನಡುವಿನ ಹಳಿಗಳ ಬಳಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರಂಜನ್ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ.
ಭಾರತೀಯ ಸಮೂಹ ಸಂವಹನ ಸಂಸ್ಥೆಯ (ಐಐಎಂಸಿ) ಹಳೆಯ ವಿದ್ಯಾರ್ಥಿಗಳ ಸಂಘವು ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ದೇವಪಾಲಿಕ್ ಗುಪ್ತಾ ಸಂಸ್ಥೆಯ 2018-19ನೇ ಬ್ಯಾಚ್ನ ಪತ್ರಿಕೋದ್ಯಮ ವಿದ್ಯಾರ್ಥಿ. ಗುಪ್ತಾ ತಮ್ಮ ಇಬ್ಬರು ಸ್ನೇಹಿತರೊಂದಿಗೆ ರಾಂಚಿಯಿಂದ ಪಟನಾಗೆ ರೈಲಿನಲ್ಲಿ ಹಿಂತಿರುಗುತ್ತಿದ್ದರು. ರೈಲ್ವೆ ಹಳಿಯ ಬಳಿ ಇದ್ದ ಅವರ ಮೃತದೇಹವನ್ನು ಅವರ ಸಹೋದರ ಗುರುತಿಸಿದ್ದಾರೆ ಎಂದು ಸಂಘವು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
5 ಮಂದಿಯನ್ನು ಬಲಿ ಪಡೆದ ಹೊಟೇಲ್ ಮೇಲಿನ ಭೀಕರ ದಾಳಿಗೆ ದಾಳಿಯ ಕಾರಣ ಬಹಿರಂಗ
ಸೋಮವಾರ (ಅ. 27) ಅವರು ರಾಂಚಿ ನಿಲ್ದಾಣದಿಂದ ರೈಲು ಹತ್ತಿದರು. ಮಧ್ಯಾಹ್ನ ಸುಮಾರು 2.25ಕ್ಕೆ ರೈಲು ಹೊರಟಿತು. ಸುಮಾರು 10 ನಿಮಿಷಗಳ ಬಳಿಕ ತಿನ್ನಲು ಏನನ್ನಾದರೂ ತರುವುದಾಗಿ ಹೇಳಿ ಪ್ಯಾಂಟ್ರಿಗೆ ತೆರಳಿದ್ದರು ಸಹ ಪ್ರಯಾಣಿಕರು ತಿಳಿಸಿದ್ದಾರೆ. ಆದರೆ ಅವರು ಮರಳಿ ಬರಲಿಲ್ಲ ಎಂದು ಗುಪ್ತಾ ಅವರ ಸಹೋದ್ಯೋಗಿ ಗೌತಮ್ ಕುಮಾರ್ ಹೇಳಿದ್ದಾರೆ.
“ನಂತರ ನಾವು ನಮ್ಮ ಬರ್ತ್ನಿಂದ ಎದ್ದು, ನಮ್ಮ ಬೋಗಿಯ ಪಕ್ಕದಲ್ಲಿದ್ದ ಪ್ಯಾಂಟ್ರಿ ಕಡೆಗೆ ಹೋದೆವು. ಆದರೆ ಅಲ್ಲಿ ಅವರು ಸಿಗಲಿಲ್ಲ. ರೈಲಿನ ಪ್ರತಿಯೊಂದು ಬೋಗಿಯನ್ನೂ ಪರಿಶೀಲಿಸಿದೆವು. ಆದರೂ ಅವರು ರೈಲಿನಲ್ಲಿ ಎಲ್ಲಿಯೂ ಕಾಣಿಸಲಿಲ್ಲ” ಎಂದು ತಿಳಿಸಿದ್ದಾರೆ. ರೈಲು ಮುರಿ ಜಂಕ್ಷನ್ನಲ್ಲಿ ನಿಂತಾಗ, ಅವರು ಸರ್ಕಾರಿ ರೈಲ್ವೆ ಪೊಲೀಸರಿಗೆ ದೂರು ನೀಡಿದರು. ಇದರ ಬೆನ್ನಲ್ಲೇ ನಾಪತ್ತೆಯಾದ ವ್ಯಕ್ತಿಗಾಗಿ ಶೋಧ ಕಾರ್ಯ ಆರಂಭಿಸಲಾಯಿತು. ಬಳಿಕ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಯಿತು. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.