ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ್ ಬಿಯಾಟ್ರಿಸ್ ಕ್ಯೂಲ್ ಮೇಲೆ ಅತ್ಯಾಚಾರ ಎಸಗಿದ್ದರೇ ಡೊನಾಲ್ಡ್ ಟ್ರಂಪ್? ಅಮರಿಕ ಅಧ್ಯಕ್ಷರ ವಿರುದ್ಧ ಕೇಳಿಬಂತು ಗಂಭೀರ ಆರೋಪ
Donald Trump: ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ್ ಬಿಯಾಟ್ರಿಸ್ ಕ್ಯೂಲ್ 1993ರಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ ಎಂಬುದಾಗಿ ಡೆಮಾಕ್ರಟಿಕ್ ಪಕ್ಷದ ವರದಿ ಉಲ್ಲೇಖಿಸಿದೆ. ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ ಜತೆಗಿನ ಟ್ರಂಪ್ ನಂಟಿನ ತನಿಖೆಗೆ ಸ್ವತಂತ್ರ ವಿಶೇಷ ಅಭಿಯೋಜಕರ ನೇಮಕಕ್ಕೆ ಡೆಮಾಕ್ರಟಿಕ್ ಸದಸ್ಯರು ಒತ್ತಾಯಿಸಿದ್ದಾರೆ. ಶ್ವೇತಭವನ ಈ ಆರೋಪ ತಳ್ಳಿಹಾಕಿದೆ.
ಡೊನಾಲ್ಡ್ ಟ್ರಂಪ್ - ಬಿಯಾಟ್ರಿಸ್ ಕ್ಯೂಲ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಅ. 27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ್ ಬಿಯಾಟ್ರಿಸ್ ಕ್ಯೂಲ್ ಅತ್ಯಾಚಾರದ ಆರೋಪ ಮಾಡಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ವರದಿಯನ್ನು ಉಲ್ಲೇಖಿಸಿ ವರದಿ ಮಾಡಲಾಗಿಸದೆ. 1993ರ ನವೆಂಬರ್ನಲ್ಲಿ ಟ್ರಂಪ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಈ ಹಿಂದೆ ಆರೋಪಿಸಿದ್ದ ಮಾಡೆಲ್, ಅದೇ ಘಟನೆಯ ಸಂದರ್ಭದಲ್ಲಿ ತಮ್ಮ ಮೇಲೆ ಅತ್ಯಾಚಾರವೂ ನಡೆದಿದೆ ಎಂದು ಈಗ ಹೇಳಿದ್ದಾರೆ. ಆದರೆ, ಶ್ವೇತಭವನವು ವರದಿಯಲ್ಲಿನ ಆರೋಪಗಳನ್ನು ತಳ್ಳಿಹಾಕಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದೆ.
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ನ್ಯಾಯಾಂಗ ಸಮಿತಿಯ ಡೆಮಾಕ್ರಟಿಕ್ ಸದಸ್ಯರು ಪ್ರಕಟಿಸಿರುವ 53 ಪುಟಗಳ ವರದಿಯಲ್ಲಿ ಟ್ರಂಪ್ ವಿರುದ್ಧ ಈ ಹಿಂದೆ ಕೇಳಿಬಂದಿದ್ದ ಲೈಂಗಿಕ ದುರ್ನಡತೆಯ ಆರೋಪಗಳನ್ನು ಮತ್ತೆ ಪ್ರಸ್ತಾಪಿಸಲಾಗಿದೆ.
ಜತೆಗೆ, ಅಪ್ರಾಪ್ತ ವಯಸ್ಕರ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ ಜತೆ ಟ್ರಂಪ್ ಹೊಂದಿದ್ದ ಸಂಬಂಧದ ಬಗ್ಗೆಯೂ ತನಿಖೆಯ ವಿವರಗಳನ್ನು ಉಲ್ಲೇಖಿಸಲಾಗಿದೆ. ವರದಿಯ ಪ್ರಕಾರ, 1993ರಲ್ಲಿ ನ್ಯೂಯಾರ್ಕ್ನ ಪ್ಲಾಜಾ ಹೋಟೆಲ್ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಸಂದರ್ಭದಲ್ಲಿ 24 ವರ್ಷದವರಾಗಿದ್ದ ಕ್ಯೂಲ್ ಟ್ರಂಪ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆಗ ಟ್ರಂಪ್ ಆ ಹೋಟೆಲ್ನ ಮಾಲಕರಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ಯೂಲ್ ಅವರ ಹೇಳಿಕೆಯ ಪ್ರಕಾರ, ಟ್ರಂಪ್ ಅವರಿಗೆ ವೀಸಾ ವ್ಯವಸ್ಥೆ ಮಾಡಿಕೊಡುವುದಾಗಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ (NYU) ಪ್ರವೇಶ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ಎಪ್ಸ್ಟೀನ್ ಅವರನ್ನು ಭೇಟಿಯಾಗಿ ತಾನು ಟ್ರಂಪ್ ಅವರ ಆಪ್ತ ಸ್ನೇಹಿತ ಎಂದು ಪರಿಚಯಿಸಿಕೊಂಡು ಮಾರ-ಎ-ಲಾಗೊದಲ್ಲಿನ ಪಾರ್ಟಿಗೆ ಆಹ್ವಾನಿಸಿದ್ದ ಎನ್ನಲಾಗಿದೆ.
ನಂತರ ಟ್ರಂಪ್ ಅವರ ಪ್ರತಿನಿಧಿಯೊಬ್ಬರು ಪ್ಲಾಜಾ ಹೋಟೆಲ್ನ ಮೇಲಿನ ಮಹಡಿಯಲ್ಲಿ ಟ್ರಂಪ್ ಅವರನ್ನು ಭೇಟಿಯಾಗುವಂತೆ ಆಹ್ವಾನಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿ ಟ್ರಂಪ್ ಅತ್ಯಾಚಾರ ಎಸಗಿದ್ದು, ಇದರಿಂದ ತಮ್ಮ ಉಡುಪು ಹರಿದು ದೇಹದ ವಿವಿಧ ಭಾಗಗಳಲ್ಲಿ ಗಾಯಗಳು ಮತ್ತು ಮೂಗೇಟುಗಳಾಗಿದ್ದವು ಎಂದು ಕ್ಯೂಲ್ ಆರೋಪಿಸಿದ್ದಾರೆ.
ಆರೋಪದ ಪ್ರಕಾರ, ಘಟನೆಯ ನಂತರ ಟ್ರಂಪ್ ಮೌನವಾಗಿರುವಂತೆ ಸೂಚಿಸಿ, ವೀಸಾ ಮತ್ತು ವಿಶ್ವವಿದ್ಯಾಲಯದ ಪ್ರವೇಶ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಎಲ್ಲ ಆರೋಪಗಳನ್ನು ಕ್ಯೂಲ್ ಅವರು ಡೆಮಾಕ್ರಟಿಕ್ ಸದಸ್ಯರೊಂದಿಗೆ ನಡೆಸಿದ ಸಂದರ್ಶನಗಳಲ್ಲಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಎಪ್ಸ್ಟೀನ್ ಜತೆ ಟ್ರಂಪ್ ನಂಟು
ಎಪ್ಸ್ಟೀನ್ 2019ರಲ್ಲಿ ಲೈಂಗಿಕ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಲು ಕಾಯುತ್ತಿದ್ದಾಗ ಮೃತಪಟ್ಟಿದ್ದರು. ಅವರ ಸಾವು ಆತ್ಮಹತ್ಯೆ ಎಂದು ಅಧಿಕೃತವಾಗಿ ನಿರ್ಧರಿಸಲಾಗಿತ್ತು. ಎಪ್ಸ್ಟೀನ್ ಜತೆಗಿನ ಸ್ನೇಹವನ್ನು ಅಪರಾಧಗಳ ಬಗ್ಗೆ ಅನುಮಾನಗಳು ಮೂಡುವುದಕ್ಕೂ ಬಹಳ ಹಿಂದೆಯೇ ಅಂತ್ಯಗೊಳಿಸಿದ್ದಾಗಿ ಟ್ರಂಪ್ ಹಲವು ಬಾರಿ ಹೇಳಿದ್ದಾರೆ. ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳ ಬಿಡುಗಡೆ ವಿಚಾರದಲ್ಲೂ ಟ್ರಂಪ್ ಆಡಳಿತದ ನಿಲುವು ಚರ್ಚೆಗೆ ಕಾರಣವಾಗಿತ್ತು.
ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳಲ್ಲಿ ಟ್ರಂಪ್ ಅವರ ಹೆಸರು ಹಲವು ಬಾರಿ ಕಾಣಿಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಟ್ರಂಪ್ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಗಳಿಗಾಗಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ವರದಿ ಹೇಳಿದೆ.
ಟ್ರಂಪ್ ವಿರುದ್ಧ ಈ ಹಿಂದೆ ಕೇಳಿಬಂದಿದ್ದ ಲೈಂಗಿಕ ದೌರ್ಜನ್ಯದ ಆರೋಪಗಳೊಂದಿಗೆ ಕ್ಯೂಲ್ ಅವರ ಹೇಳಿಕೆಗಳು ಹೊಂದಿಕೆಯಾಗುತ್ತವೆ ಎಂದು ಡೆಮಾಕ್ರಟಿಕ್ ಸದಸ್ಯರು ಪ್ರತಿಪಾದಿಸಿದ್ದಾರೆ. ಹೌಸ್ ನ್ಯಾಯಾಂಗ ಸಮಿತಿಯ ಹಿರಿಯ ಡೆಮಾಕ್ರಟಿಕ್ ಸದಸ್ಯ ಜೇಮಿ ರಾಸ್ಕಿನ್ ಮಾತನಾಡಿ, ಟ್ರಂಪ್ ಅವರನ್ನು ರಕ್ಷಿಸುವ ಸಲುವಾಗಿ ನ್ಯಾಯಾಂಗ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಗಳನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ.
ಟ್ರಂಪ್ ವಿರುದ್ಧದ ಆರೋಪಗಳು ಹಾಗೂ ಎಪ್ಸ್ಟೀನ್ ಜತೆಗಿನ ಸಂಬಂಧದ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ವಿಶೇಷ ಅಭಿಯೋಜಕರನ್ನು ನೇಮಿಸುವಂತೆ ಅಟಾರ್ನಿ ಜನರಲ್ ಟಾಡ್ ಬ್ಲಾಂಶ್ ಅವರಿಗೆ ಸಮಿತಿಯ ಡೆಮಾಕ್ರಟಿಕ್ ಸದಸ್ಯರು ಒತ್ತಾಯಿಸಿದ್ದಾರೆ. ಆದರೆ ಟ್ರಂಪ್ ಅವರ ಮಾಜಿ ವೈಯಕ್ತಿಕ ವಕೀಲರಾಗಿದ್ದ ಬ್ಲಾಂಶ್ ನೇತೃತ್ವದ ನ್ಯಾಯಾಂಗ ಇಲಾಖೆ ಇಂತಹ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ಎಂದು ಡೆಮಾಕ್ರಟಿಕ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ಶ್ವೇತಭವನವು ಆರೋಪಗಳನ್ನು ರಾಜಕೀಯ ಪ್ರೇರಿತ ಪ್ರಯತ್ನ ಎಂದು ತಳ್ಳಿಹಾಕಿದ್ದು, ಟ್ರಂಪ್ ಅವರ ಸಾಧನೆಗಳಿಂದ ಗಮನ ಬೇರೆಡೆ ಸೆಳೆಯಲು ಡೆಮಾಕ್ರಟಿಕ್ ಸದಸ್ಯರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದೆ.