ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಎಲಿವೇಟೆಡ್ ಕಾರಿಡಾರ್‌ಗೆ ಟೋಲ್ ಇಲ್ಲ? ಆಸ್ತಿ ತೆರಿಗೆಯಿಂದ ₹1,300 ಕೋಟಿ ಯೋಜನೆಗೆ ಹಣ ಸಂಗ್ರಹಿಸುವ ಪ್ರಸ್ತಾವ

Bengaluru Elevated Corridor: ಬೆಂಗಳೂರು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಾಣವಾಗಲಿರುವ ₹1,300 ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್‌ಗೆ ವಾಹನ ಸವಾರರಿಂದ ಟೋಲ್ ವಸೂಲಿ ಮಾಡುವ ಬದಲು, ಯೋಜನೆಯಿಂದ ಲಾಭ ಪಡೆಯುವ ಪ್ರದೇಶಗಳ ಆಸ್ತಿ ಮಾಲೀಕರಿಂದ ಬಿಬಿಎಂಪಿ ಆಸ್ತಿ ತೆರಿಗೆಯ ಮೂಲಕ ವಿಶೇಷ ಶುಲ್ಕ ಸಂಗ್ರಹಿಸಲು ಡಿಪಿಆರ್ ಶಿಫಾರಸು ಮಾಡಿದೆ. ಈ ಯೋಜನೆಯಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.

ಎಲಿವೇಟೆಡ್ ಕಾರಿಡಾರ್‌ಗೆ ಟೋಲ್ ಇಲ್ಲ..!

ಸಾಂದರ್ಭಿಕ ಚಿತ್ರ -

Profile
Sushmitha Jain Jun 25, 2026 3:29 PM

ಬೆಂಗಳೂರು: ನಗರದ ಹಳೆಯ ಮದ್ರಾಸ್ ರಸ್ತೆ (Old Madras Road) ಯಲ್ಲಿರುವ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಾಣಗೊಳ್ಳಲಿರುವ ₹1,300 ರೂ. ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್‌ಗೆ ವಾಹನ ಸವಾರರಿಂದ ಟೋಲ್ ಸಂಗ್ರಹಿಸದೇ, ಆಸ್ತಿ ತೆರಿಗೆ ಆಧಾರಿತ ಹಣಕಾಸು ವ್ಯವಸ್ಥೆಯ ಮೂಲಕ ಯೋಜನಾ ವೆಚ್ಚವನ್ನು ವಸೂಲಿಸಲು ವಿವರವಾದ ಯೋಜನಾ ವರದಿ (DPR) ಶಿಫಾರಸು ಮಾಡಿದೆ.

ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಗಾಗಿ ಸಿದ್ಧಪಡಿಸಿರುವ ಡಿಪಿಆರ್ ಪ್ರಕಾರ, 11.625 ಕಿ.ಮೀ. ಉದ್ದದ ಈ ಎಲಿವೇಟೆಡ್ ಕಾರಿಡಾರ್ ಇಂದಿರಾನಗರ, ದೊಮ್ಮಲೂರು, ಕೋರಮಂಗಲ ಹಾಗೂ ಮಡಿವಾಳ ಮಾರ್ಗವಾಗಿ ಸಾಗಲಿದ್ದು, ನಗರದ ಅತ್ಯಂತ ದಟ್ಟ ಸಂಚಾರದ ಮಾರ್ಗಗಳಲ್ಲಿ ಒಂದಕ್ಕೆ ಪರಿಹಾರ ನೀಡುವ ಉದ್ದೇಶ ಹೊಂದಿದೆ.

ಡಿಪಿಆರ್‌ನಲ್ಲಿ ಟೋಲ್ ಸಂಗ್ರಹಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗಿತ್ತು. ಆದರೆ ಮಾರ್ಗವು ಎಲಿವೇಟೆಡ್ ರಸ್ತೆ, ರ್ಯಾಂಪ್‌ಗಳು, ಈಗಿರುವ ಫ್ಲೈಓವರ್‌ಗಳು ಮತ್ತು ಸಾಮಾನ್ಯ ರಸ್ತೆಗಳ ಸಂಯೋಜನೆಯಾಗಿರುವುದರಿಂದ ಟೋಲ್ ಸಂಗ್ರಹಣೆ ಕಾರ್ಯಸಾಧ್ಯವಲ್ಲ ಎಂದು ವರದಿ ತಿಳಿಸಿದೆ. ಅಲ್ಲದೆ, ಟೋಲ್ ಸಂಗ್ರಹಿಸಲು ಅಗತ್ಯವಿರುವಷ್ಟು ವಾಹನ ಸಂಚಾರವೂ ಇಲ್ಲ ಎಂದು ಸಂಚಾರ ಅಧ್ಯಯನದಲ್ಲಿ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಯೋಜನೆಯನ್ನು Engineering, Procurement and Construction (EPC) ಮಾದರಿಯಲ್ಲಿ ಟೋಲ್‌ರಹಿತವಾಗಿ ಜಾರಿಗೊಳಿಸಲು ಶಿಫಾರಸು ಮಾಡಲಾಗಿದೆ.

New Tungabhadra gate: ತುಂಗಭದ್ರೆ ಹೊಸ ಗೇಟ್‌ʼಗಳು ಇಂದು ಲೋಕಾರ್ಪಣೆ

ಆಸ್ತಿ ತೆರಿಗೆ ಮೂಲಕ ವೆಚ್ಚ ವಸೂಲಿ

ಯೋಜನೆಯಿಂದ ಹೆಚ್ಚಿನ ಪ್ರಯೋಜನ ಪಡೆಯುವ ಆಸ್ತಿಗಳ ಮೇಲೆ ವಿಶೇಷ ತೆರಿಗೆ ವಿಧಿಸುವ "ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್'' ಮಾದರಿಯನ್ನು ಡಿಪಿಆರ್ ಶಿಫಾರಸು ಮಾಡಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣದಿಂದ ಸಂಪರ್ಕ ವ್ಯವಸ್ಥೆ ಸುಧಾರಣೆ, ಪ್ರಯಾಣದ ಸಮಯದಲ್ಲಿ ಕಡಿತ ಹಾಗೂ ಆಸ್ತಿ ಮೌಲ್ಯ ಏರಿಕೆಯಿಂದ ಲಾಭ ಪಡೆಯುವ ಆಸ್ತಿ ಮಾಲೀಕರು ಬಿಬಿಎಂಪಿ (BBMP) ಆಸ್ತಿ ತೆರಿಗೆಯ ಮೂಲಕ ಹೆಚ್ಚುವರಿ ಮೊತ್ತವನ್ನು ಪಾವತಿಸುವ ವ್ಯವಸ್ಥೆ ಇದಾಗಿದೆ.

ಈ ಮಾದರಿಯಿಂದ ಸಾರ್ವಜನಿಕರಿಗೆ ಟೋಲ್ ಹೊರೆಯಾಗುವುದಿಲ್ಲ. ಜೊತೆಗೆ ಭವಿಷ್ಯದ ನಗರ ಸಾರಿಗೆ ಯೋಜನೆಗಳಿಗೂ ಸ್ಥಿರ ಆದಾಯದ ಮೂಲ ಸೃಷ್ಟಿಯಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಯೋಜನೆಯ ವೆಚ್ಚ ಮತ್ತು ಸಂಪರ್ಕ

ಈ ಕಾರಿಡಾರ್ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣವನ್ನು ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕಿಸುವುದರ ಜೊತೆಗೆ, ದೊಮ್ಮಲೂರು ಫ್ಲೈಓವರ್, ಈಜಿಪುರ ಫ್ಲೈಓವರ್, ಮಡಿವಾಳ ಅಂಡರ್‌ಪಾಸ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ಗಳೊಂದಿಗೆ ಸಂಪರ್ಕ ಕಲ್ಪಿಸಲಿದೆ.

ಒಟ್ಟು ಯೋಜನಾ ವೆಚ್ಚ ₹1,300 ಕೋಟಿ ಎಂದು ಅಂದಾಜಿಸಲಾಗಿದ್ದು,

  • ನಾಗರಿಕ ಕಾಮಗಾರಿಗಳಿಗೆ ₹852 ಕೋಟಿ
  • ಭೂಸ್ವಾಧೀನ, ಜಿಎಸ್‌ಟಿ, ಯುಟಿಲಿಟಿ ಸ್ಥಳಾಂತರ ಹಾಗೂ ಇತರೆ ವೆಚ್ಚಗಳಿಗೆ ₹448 ಕೋಟಿ ಮೀಸಲಿಡಲಾಗಿದೆ.

ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿ

ಡಿಪಿಆರ್ ಪ್ರಕಾರ, ಈ ಮಾರ್ಗದಲ್ಲಿ ಪ್ರಸ್ತುತ ವಾಹನಗಳ ಸರಾಸರಿ ವೇಗ ಗಂಟೆಗೆ 20–25 ಕಿ.ಮೀ. ಮಾತ್ರವಿದ್ದು, ಪೀಕ್ ಅವಧಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿದೆ. 2025ರಲ್ಲಿ ದಿನಕ್ಕೆ ಸುಮಾರು 30,000 ವಾಹನಗಳು ಸಂಚರಿಸುತ್ತಿದ್ದರೆ, 2050ರ ವೇಳೆಗೆ ಈ ಸಂಖ್ಯೆ 1 ಲಕ್ಷಕ್ಕೂ ಹೆಚ್ಚು ಆಗುವ ನಿರೀಕ್ಷೆಯಿದೆ.