2027ರ ಚುನಾವಣೆಗೆ ಅಖಿಲೇಶ್ ಯಾದವ್ ಪಕ್ಷದಿಂದ ಭರ್ಜರಿ ಕೊಡುಗೆಗಳ ಘೋಷಣೆ: 25 ಲಕ್ಷ ಉದ್ಯೋಗ, ರೈತರ ಸಾಲ ಮನ್ನಾ ಭರವಸೆ
UP assembly elections 2027: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ‘ಸತ್ತಾಯಿಸ್ ಕಾ ಸಂಕಲ್ಪ: ಪಿಡಿಎ ಕಾ ಪ್ರಣ್-ಪತ್ರ ಜನ್-ಮನ್ ಕಾ ಮ್ಯಾನಿಫೆಸ್ಟೋ 2027’ ಬಿಡುಗಡೆ ಮಾಡಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 5,000 ಭತ್ಯೆ, 25 ಲಕ್ಷ ಸರ್ಕಾರಿ ಉದ್ಯೋಗ, ರೈತರ ಸಾಲ ಮನ್ನಾ ಹಾಗೂ 23 ಬೆಳೆ ಮತ್ತು ಹಾಲಿಗೆ ಎಂಎಸ್ಪಿ ಕಾನೂನು ಖಾತರಿ ಘೋಷಿಸಿದ್ದಾರೆ. ಸಂವಿಧಾನ ದಿನದಂದೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
2027ರ ಯುಪಿ ಚುನಾವಣೆಗೆ ಅಖಿಲೇಶ್ ಭರ್ಜರಿ ಪ್ರಣಾಳಿಕೆ ಬಿಡುಗಡೆ -
ಲಕ್ನೋ, ನ. 27: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ 2027ಕ್ಕೆ (UP Assembly Elections 2027) ಇನ್ನೇನು 3 ತಿಂಗಳಷ್ಟೇ ಬಾಕಿ ಇದೆ. ಎಲ್ಲಾ ಪಕ್ಷಗಳು ಮತದಾರರಿಗೆ ಭರಪೂರ ಭರವಸೆಗಳನ್ನು ನೀಡಲು ಶುರು ಮಾಡಿವೆ. ಇದೀಗ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ 25 ರಿಂದ 27 ಲಕ್ಷ ಸರ್ಕಾರಿ ಉದ್ಯೋಗ, ಮಾಸಿಕ 5000 ರೂ. ನಿರುದ್ಯೋಗ ಭತ್ಯೆ, 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಹಾಗೂ 26 ಸಾವಿರ ಶಾಲೆಗಳ ಪುನರಾರಂಭ ಭರವಸೆ ನೀಡಲಾಗಿದೆ.
ವೃದ್ಧ ಮಹಿಳೆಯರು, ಕಾರ್ಮಿಕರಿಗೆ ವಾರ್ಷಿಕ 40 ಸಾವಿರ ಪಿಂಚಣಿ, 5ಕ್ಕೆ ಊಟ, ಬೆಲೆ ನಿಯಂತ್ರಣಕ್ಕೆ ʼದಾಮ್ ಬಾಂಧೋ ಬಜಾರ್ʼ, ಕೃಷಿ ಸಾಲ ಮನ್ನಾ ಮತ್ತು ಎಂಎಸ್ಪಿ ಕಾನೂನು ಖಾತ್ರಿ, ಜಾತಿ ಗಣತಿ ಹಾಗೂ ಗುತ್ತಿಗೆಗಳಲ್ಲಿ ಶೇ. 50 ಪಿಡಿಎ ಮೀಸಲಾತಿಯನ್ನು ಪ್ರಣಾಳಿಕೆ ಒಳಗೊಂಡಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ಅಖಿಲೇಶ್ ಯಾದವ್ ಅವರು, ʼʼಒಳ್ಳೆ ದಿನ ಬರಲೇ ಇಲ್ಲ, ಆದರೆ ಕೆಟ್ಟ ದಿನಗಳು ಕೊನೆಗೊಳ್ಳಲಿವೆʼʼ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರ 2014ರ ಘೋಷವಾಕ್ಯಕ್ಕೆ ತಿರುಗೇಟು ನೀಡಿದ್ದಾರೆ.
ಅಖಿಲೇಶ್ ಯಾದವ್ ಪ್ರಾಣಳಿಕೆ ಬಿಡುಗಡೆ ವಿಡಿಯೋ ನೋಡಿ:
Uttar Pradesh: Akhilesh Yadav Unveils SP's PDA Manifesto for 2027! Big promises ahead of the UP Assembly elections! Samajwadi Party chief Akhilesh Yadav has announced an ambitious set of promises, including: 🔹 25 lakh government jobs. 🔹 ₹5,000 monthly assistance for graduates. 🔹 Farmers' loans to be waived. 🔹 50% reservation for Dalits and OBCs in ₹50 crore government tenders. 🔹 Laptops for students. 🔹 300 units of free electricity for rural households. 🔹 Free electricity for agricultural irrigation. 🔹 Legal guarantee for MSP. 🔹 ₹10 lakh annual health insurance for BPL families. 🔹 Development of cancer hospitals. 🔹 Special STF for land disputes. 🔹 Weekly holidays and fixed working hours for police personnel. Are these promises a game-changer for UP voters, or will they become another election manifesto full of assurances? Will Akhilesh Yadav be able to deliver on these promises if SP comes to power? #AkhileshYadav #UttarPradesh #UPElections2027
— Indian Observer (@ag_Journalist) November 26, 2026
ಉದ್ಯೋಗ ಮತ್ತು ನೇಮಕಾತಿ ಭರವಸೆಗಳು
ಐದು ವರ್ಷಗಳಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಹಾಗೂ ಇತರ ಕ್ಷೇತ್ರಗಳಲ್ಲಿ 2ರಿಂದ 3 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಎಸ್ಪಿ ಘೋಷಿಸಿದೆ. ಉದ್ಯೋಗ ಸಿಗುವವರೆಗೆ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 5,000 ರೂ. ಭತ್ಯೆ ನೀಡುವುದಾಗಿ ತಿಳಿಸಿದೆ. ಏಕಹಂತದ ಪರೀಕ್ಷೆಯ ನೇಮಕಾತಿಯನ್ನು 3 ತಿಂಗಳಲ್ಲಿ ಮತ್ತು ಬಹುಹಂತದ ಪರೀಕ್ಷೆಯ ನೇಮಕಾತಿಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸುವ ವಾರ್ಷಿಕ ಕ್ಯಾಲೆಂಡರ್ ತರುವುದಾಗಿ ಹೇಳಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕ್ರಮ ಹಾಗೂ ಲೋಪವಾದರೆ ಅಧಿಕಾರಿಗಳು ಮತ್ತು ಸಚಿವರನ್ನೇ ಹೊಣೆಗಾರರನ್ನಾಗಿಸುವ ಭರವಸೆ ನೀಡಿದೆ. ಪ್ರತಿ ವರ್ಷ 5 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ಕೇಂದ್ರಗಳು, ತಹಶೀಲ್ ಮಟ್ಟದಲ್ಲಿ ವೃತ್ತಿ ಮಾರ್ಗದರ್ಶನ ಕೇಂದ್ರಗಳು ಮತ್ತು ನಗರ ಉದ್ಯೋಗ ಖಾತರಿ ಕಾನೂನಿನ ಪ್ರಸ್ತಾವವನ್ನೂ ಇಡಲಾಗಿದೆ.
ವಾಯುಪಡೆ ನೆಲೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಜೈಶ್ ಉಗ್ರನ ಬಂಧನ; ಎಕೆ-47 ವಶಕ್ಕೆ
ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಏನೇನು?
ರೈತರ ಸಾಲವನ್ನು ತಕ್ಷಣ ಮನ್ನಾ ಮಾಡುವುದು ಮತ್ತು ಉತ್ತರ ಪ್ರದೇಶದಲ್ಲಿ ಎಲ್ಲಾ 23 ಬೆಳೆಗಳು ಹಾಗೂ ಹಾಲಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆಲೂಗಡ್ಡೆ, ಟೊಮೆಟೊ ಮತ್ತು ಈರುಳ್ಳಿಯಂತಹ ಬೆಳೆಗಳಿಗೆ ಬೆಲೆ ಪರಿಹಾರ ವ್ಯವಸ್ಥೆ, ಕೃಷಿ ನೀರಾವರಿಗೆ ಉಚಿತ ವಿದ್ಯುತ್ ಮತ್ತು ಗ್ರಾಮೀಣ ಮನೆಗಳಿಗೆ 300 ಯೂನಿಟ್ವರೆಗೆ ಉಚಿತ ವಿದ್ಯುತ್ ಭರವಸೆ ನೀಡಲಾಗಿದೆ. ಕಬ್ಬು ಬೆಳೆಗಾರರಿಗೆ 24 ಗಂಟೆಯೊಳಗೆ ಹಣ ಪಾವತಿಸಲು 15,000 ಕೋಟಿ ರೂ. ಕಾರ್ಪಸ್ ಫಂಡ್ ಸ್ಥಾಪನೆ, ಪ್ರತಿ ವರ್ಷ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕಬ್ಬಿನ ದರ ಹೆಚ್ಚಳ ಮತ್ತು ಗ್ರಾಮೀಣ ಮೂಲಸೌಕರ್ಯಕ್ಕೆ 1.5 ಲಕ್ಷ ಕೋಟಿ ರೂ. ಮೀಸಲಿಡುವ ಪ್ರಸ್ತಾವವಿದೆ.
ಶಿಕ್ಷಣ, ಆರೋಗ್ಯ ಮತ್ತು ಪಿಡಿಎ ಕಲ್ಯಾಣ
- ಮುಚ್ಚಲಾಗಿದ್ದ 26,000 ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವುದು, 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆ ಮರುಜಾರಿ ಮತ್ತು ಎಲ್ಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ವೈಫೈ ಸೌಲಭ್ಯ ನೀಡುವುದಾಗಿ ತಿಳಿಸಿದೆ. ಶಿಕ್ಷಣಕ್ಕೆ ಜಿಡಿಪಿಯ ಶೇ. 6ರಷ್ಟು ಹಣ ಖರ್ಚು ಮಾಡುವುದು, ಒಂದು ವರ್ಷದೊಳಗೆ ಖಾಲಿ ಹುದ್ದೆಗಳ ಭರ್ತಿ ಮತ್ತು ಶಿಕ್ಷಾ ಮಿತ್ರರ ಗೌರವಧನವನ್ನು ಕಾಯಂಗೊಳಿಸುವವರೆಗೆ ತಿಂಗಳಿಗೆ 5,000 ರೂ. ಹೆಚ್ಚಿಸುವ ಭರವಸೆ ನೀಡಿದೆ.
- ಬಿಪಿಎಲ್ ಕುಟುಂಬಗಳಿಗೆ 10 ಲಕ್ಷ ರೂ. ಆರೋಗ್ಯ ವಿಮೆ, ಬಡವರು ಮತ್ತು ಪಿಡಿಎ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಮತ್ತು ವೆಂಟಿಲೇಟರ್ ಸೌಲಭ್ಯ, 18 ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದಲ್ಲಿ 5 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಘೋಷಣೆಯಿದೆ. ಲಕ್ನೋದಲ್ಲಿರುವ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯನ್ನು ಕಾರ್ಯಾರಂಭಗೊಳಿಸಿ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವುದಾಗಿ ತಿಳಿಸಿದೆ.
- ಜಾತಿ ಗಣತಿ ನಡೆಸುವುದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಶೇ. 20ರಷ್ಟು ಹಣ ಮೀಸಲಿಡುವುದು, ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ವಿಶೇಷ ಅಭಿಯಾನ, 50 ಕೋಟಿ ರೂ.ವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ದಲಿತ ಮತ್ತು ಪಿಡಿಎ ಸಮುದಾಯಗಳಿಗೆ ಶೇ. 50ರಷ್ಟು ಮೀಸಲಾತಿ ಹಾಗೂ ರಾಜ್ಯಾದ್ಯಂತ ಮಹಿಳೆಯರು, ಬಡವರು ಮತ್ತು ಪಿಡಿಎ ಸಮುದಾಯದವರಿಗೆ 5 ರೂ.ಗೆ ಊಟ ನೀಡುವ ‘ಸಮಾಜವಾದಿ ಕ್ಯಾಂಟೀನ್’ ಆರಂಭಿಸುವ ಭರವಸೆಯನ್ನೂ ನೀಡಲಾಗಿದೆ.
ನವೆಂಬರ್ 30ರಿಂದ ಸಂಸತ್ ವಿಶೇಷ ಕಲಾಪ: ಡಿಲಿಮಿಟೇಷನ್, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಸಾಧ್ಯತೆ
ಆಡಳಿತ, ಮಹಿಳಾ ಸುರಕ್ಷತೆ ಮತ್ತು ಮಾಧ್ಯಮ ಯೋಜನೆಗಳು
- 2005ಕ್ಕಿಂತ ಹಿಂದಿನ ಹಳೆಯ ಪಿಂಚಣಿ ಯೋಜನೆ ಮರುಜಾರಿ, ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ರದ್ದು, ಪ್ರಮುಖ ನಗರಗಳಲ್ಲಿ ಎಐ ಮತ್ತು ಐಟಿ ಹಬ್, ಗ್ರಾಮೀಣ ಹಾಗೂ ನಗರ ಭಾಗದಲ್ಲಿ ವೈಫೈ ವಲಯ ಮತ್ತು ಹೊಸ ಕೈಗಾರಿಕಾ ನೀತಿ ಜಾರಿಯ ಭರವಸೆ ಇದೆ.
- ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಪ್ರಾತಿನಿಧ್ಯ, ಹಳ್ಳಿ ಮತ್ತು ಪಟ್ಟಣಗಳ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಮತ್ತು ಡ್ರೋನ್ ಕಣ್ಗಾವಲು ಹಾಗೂ ಪ್ರತಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಘಟಕ ಸ್ಥಾಪಿಸುವುದಾಗಿ ತಿಳಿಸಿದೆ.
- ಪತ್ರಕರ್ತರಿಗೆ ಆರೋಗ್ಯ ವಿಮೆ, ಸಾಮಾಜಿಕ ಭದ್ರತೆ, ತಹಶೀಲ್ ಮಟ್ಟದಲ್ಲಿ ಮೀಡಿಯಾ ಫೆಸಿಲಿಟೇಶನ್ ಸೆಂಟರ್, ನೋಯ್ಡಾ ಮತ್ತು ಲಕ್ನೋದಲ್ಲಿ ಮೀಡಿಯಾ ಕನ್ವೆನ್ಷನ್ ಸೆಂಟರ್ ಹಾಗೂ ಯೂಟ್ಯೂಬರ್ಗಳು ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಪ್ರತ್ಯೇಕ ನೀತಿ ರೂಪಿಸುವುದಾಗಿ ಘೋಷಿಸಿದೆ.
ಸಂವಿಧಾನ ದಿನದಂದು ಬಿಜೆಪಿಗೆ ಟಾಂಗ್
ಲಕ್ನೋದಲ್ಲಿ ಸಂವಿಧಾನ ದಿನದಂದು ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಅಖಿಲೇಶ್ ಯಾದವ್, ಬಿಜೆಪಿಯ 2014ರ ಘೋಷಣೆಗೆ ತಿರುಗೇಟು ನೀಡಿ, “ಒಳ್ಳೆ ದಿನ ಬರಲೇ ಇಲ್ಲ, ಆದರೆ ಕೆಟ್ಟ ದಿನಗಳು ಕೊನೆಗೊಳ್ಳಲಿವೆ” ಎಂದು ಹೇಳಿದ್ದಾರೆ. ಪಿಡಿಎ ವರ್ಗಗಳು ಸಾಮಾಜಿಕ ನ್ಯಾಯದ ರಕ್ಷಣೆಗೆ ಒಂದಾಗಿವೆ ಎಂದ ಅವರು, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವುದು ಖಚಿತವಾಗಿದೆ ಎಂದು ಹೇಳಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಹಾಗೂ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಜಿಲ್ಲಾವಾರು ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಭಾಗವಾದ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾತುಕತೆ ನಡುವೆಯೇ ಎಸ್ಪಿ ಈ ಪ್ರಣಾಳಿಕೆ ಹೊರತಂದಿದೆ.