ಬ್ರಿಕ್ಸ್ ನಾಯಕರಿಗೆ ಭರ್ಜರಿ ಶಾಖಾಹಾರಿ ಔತಣ; ಮೆನುವಿನಲ್ಲಿ ಮಿಲ್ಲೆಟ್ ಪಲಾವ್, ಬೀಟ್‌ರೂಟ್ ರಾಯ್ತ ಸೇರಿ ಏನೇನಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ
BRICS Gala Dinner Menu: ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ವಿಶ್ವ ನಾಯಕರು ಹಾಗೂ ಗಣ್ಯರಿಗೆ ವಿಶೇಷ ಗಾಲಾ ಡಿನ್ನರ್ ಆಯೋಜಿಸಲಾಗಿತ್ತು. ಭಾರತದ ಪಾಕ ವೈವಿಧ್ಯವನ್ನು ಪರಿಚಯಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ಮೆನುವಿನಲ್ಲಿ ಮಿಲ್ಲೆಟ್ ಪಲಾವ್, ಬೀಟ್‌ರೂಟ್ ರಾಯ್ತ, ಖುಂಬ್ ಗಲೌಟಿ ಸೇರಿ ಹಲವು ವಿಶೇಷ ಖಾದ್ಯಗಳಿದ್ದವು. ಸಿಹಿತಿಂಡಿ ವಿಭಾಗದಲ್ಲಿ ಹಳೆಯ ದೆಹಲಿಯ ಫ್ರೂಟ್ ಕ್ರೀಮ್ ಕೂಡ ಸ್ಥಾನ ಪಡೆದಿತ್ತು.
ಬ್ರಿಕ್ಸ್ ನಾಯಕರು ಮತ್ತು ಗಾಲಾ ಡಿನ್ನರ್ ಮೆನು -
ನವದೆಹಲಿ, ಸೆ. 12: ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ (BRICS Summit) ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ವಿವಿಧ ರಾಷ್ಟ್ರಗಳ ನಾಯಕರು ಹಾಗೂ ಇತರ ಗಣ್ಯರಿಗಾಗಿ ವಿಶೇಷ ಔತಣಕೂಟ ಆಯೋಜಿಸಿದ್ದಾರೆ. ಸೆಪ್ಟೆಂಬರ್ 12ರ ಸಂಜೆ ಭಾರತ್ ಮಂಟಪದಲ್ಲಿ ನಡೆದ ಈ ಗಾಲಾ ಡಿನ್ನರ್‌ನಲ್ಲಿ (BRICS Gala Dinner Menu) ಭಾರತದ ವೈವಿಧ್ಯ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ವಿಶೇಷ ಶಾಖಾಹಾರಿ ಮೆನುವನ್ನು ಸಿದ್ಧಪಡಿಸಲಾಗಿತ್ತು.
ಔತಣದ ಮೆನುವಿನಲ್ಲಿ ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಹಲವು ಖಾದ್ಯಗಳು ಸ್ಥಾನ ಪಡೆದಿದ್ದವು. ಮಿಲ್ಲೆಟ್ ಪಲಾವ್, ಬೀಟ್‌ರೂಟ್ ರಾಯ್ತ, ಖುಂಬ್ ಗಲೌಟಿ, ಗುಚ್ಚಿ ಮಾರ್ಮಿಕ ಸೇರಿ ಹಲವು ವಿಶೇಷ ಖಾದ್ಯಗಳನ್ನು ಗಣ್ಯರಿಗೆ ಬಡಿಸಲಾಯಿತು. ಭಾರತದ ಸಿರಿಧಾನ್ಯಗಳ ಮಹತ್ವವನ್ನು ಕೂಡ ಮೆನುವಿನ ಮೂಲಕ ಪರಿಚಯಿಸಲಾಗಿದೆ.
ಬ್ರಿಕ್ಸ್ ಔತಣಕೂಟದ ಮೆನು:
BRICS Summit | Menu of the gala dinner hosted by Prime Minister Narendra Modi at Bharat Mandapam in Delhi pic.twitter.com/WSQnxIG0hZ
— ANI (@ANI) September 12, 2026
ಹಳೆಯ ದೆಹಲಿಯ ಸವಿರುಚಿ
ಮೆನುವಿನಲ್ಲಿ ಹಳೆಯ ದೆಹಲಿಯ ಆಹಾರ ಪರಂಪರೆಯನ್ನೂ ಪ್ರತಿಬಿಂಬಿಸುವ ಖಾದ್ಯಗಳಿಗೆ ಆದ್ಯತೆ ನೀಡಲಾಗಿದೆ. ಈ ಮೂಲಕವಿದೇಶಿ ಅತಿಥಿಗಳಿಗೆ ಭಾರತದ ವಿವಿಧ ಭಾಗಗಳ ಸಾಂಪ್ರದಾಯಿಕ ರುಚಿಯನ್ನು ಒಂದೇ ಔತಣದಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.
ಮುಖ್ಯ ಖಾದ್ಯಗಳ ಜತೆಗೆ ವಿವಿಧ ರೀತಿಯ ಸಲಾಡ್, ರಾಯ್ತ ಹಾಗೂ ಪಾಪಡ್‌ಗಳನ್ನು ಕೂಡ ಬಡಿಸಲಾಗಿತ್ತು. ಸಿಹಿ ಖಾದ್ಯಗಳ ವಿಭಾಗದಲ್ಲಿ ಓಲ್ಡ್ ದೆಹಲಿ ಫ್ರೂಟ್ ಕ್ರೀಮ್ ಸೇರಿ ವಿಶೇಷ ಸಿಹಿತಿಂಡಿಗಳನ್ನು ಸೇರಿಸಲಾಗಿತ್ತು. ಜತೆಗೆ ದಕ್ಷಿಣ ಭಾರತದ ಬೇಳೆ ಸಾರು ಕೂಡ ಸ್ಥಾನ ಪಡೆದಿತ್ತು.
ಆಹಾರದ ಮೂಲಕ ಭಾರತದ ವೈವಿಧ್ಯ ಪರಿಚಯ
ಈ ವಿಶೇಷ ಔತಣದ ಮೂಲಕ ಭಾರತ ತನ್ನ ಆಹಾರ ಪರಂಪರೆ, ಪ್ರಾದೇಶಿಕ ವೈವಿಧ್ಯ ಮತ್ತು ಆತಿಥ್ಯ ಸಂಸ್ಕೃತಿಯನ್ನು ಜಾಗತಿಕ ನಾಯಕರಿಗೆ ಪರಿಚಯಿಸುವ ಪ್ರಯತ್ನ ನಡೆದಿದೆ. ಬ್ರಿಕ್ಸ್ ಶೃಂಗಸಭೆಯಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಆಹಾರವನ್ನು ಸಾಂಸ್ಕೃತಿಕ ರಾಜತಾಂತ್ರಿಕತೆಯ ಭಾಗವಾಗಿಯೂ ಬಳಸಲಾಗಿದೆ.
ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಿರುವುದು ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಜಗತ್ತಿನ ಮುಂದೆ ತೋರಿಸುವ ಪ್ರಯತ್ನದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ ಆರೋಗ್ಯಪೂರ್ಣ ಹಾಗೂ ಪೌಷ್ಟಿಕ ಆಹಾರಕ್ಕೆ ಒತ್ತು ನೀಡುವ ಉದ್ದೇಶದಿಂದ ಸಿರಿಧಾನ್ಯಗಳಂತಹ ಸಾಂಪ್ರದಾಯಿಕ ಆಹಾರ ಪದಾರ್ಥಗಳಿಗೂ ಮೆನುವಿನಲ್ಲಿ ವಿಶೇಷ ಸ್ಥಾನ ನೀಡಲಾಗಿದೆ.
ಬ್ರಿಕ್ಸ್ ಶೃಂಗಸಭೆಯ ಮೊದಲ ದಿನ ನಡೆದ ಈ ಗಾಲಾ ಡಿನ್ನರ್ ಕೇವಲ ನಾಯಕರಿಗೆ ನೀಡಿದ ಔತಣವಾಗಿರದೆ, ಭಾರತದ ಸಂಸ್ಕೃತಿ ಮತ್ತು ಪಾಕಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ವಿಶೇಷ ವೇದಿಕೆಯಾಗಿ ಗಮನ ಸೆಳೆಯಿತು.