Pahalgam Attack: ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅವುಗಳನ್ನು ನಾಶ ಮಾಡಲು ಭಾರತಕ್ಕೆ ಸಾಧ್ಯವೇ?
ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಶಿಬಿರ ಮತ್ತು ಉಡಾವಣಾ ಪ್ಯಾಡ್‌ಗಳನ್ನು ಲಷ್ಕರ್ ತರಬೇತುದಾರರು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ ಎನ್ನುತ್ತದೆ ಗುಪ್ತಚರ ಮಾಹಿತಿಗಳು. ಹಾಗಾದರೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ, ಇಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.


ನವದೆಹಲಿ: ಕಾಶ್ಮೀರದ (Kashmir) ಪಹಲ್ಗಾಮ್ (Pahalgam Terror Attack) ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯ (Terrorists Attack) ಹೊಣೆಯನ್ನು ಲಷ್ಕರ್-ಎ-ತೈಬಾ (Lashkar-e-Taiba) ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ. ಈ ದಾಳಿಯಲ್ಲಿ ಕನಿಷ್ಠ 26 ಮಂದಿ ಸಾಮಾನ್ಯ ಜನರು ಸಾವನ್ನಪ್ಪಿದ್ದಾರೆ. ಇದರಿಂದ ದೇಶಾದ್ಯಂತ ಆಕ್ರೋಶಗಳು ಕೇಳಿ ಬರುತ್ತಿವೆ. ಹೀಗಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (POK) ದಲ್ಲಿ ಎಲ್‌ಇಟಿಯ ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಬಹುದೇ ಎನ್ನುವ ಚರ್ಚೆಗಳೂ ಪ್ರಾರಂಭವಾಗಿವೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ, ಇಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಶಿಬಿರ ಮತ್ತು ಉಡಾವಣಾ ಪ್ಯಾಡ್‌ಗಳನ್ನು ಲಷ್ಕರ್ ತರಬೇತುದಾರರು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ ಎನ್ನುತ್ತದೆ ಗುಪ್ತಚರ ಮಾಹಿತಿಗಳು. ಲಷ್ಕರ್-ಎ-ತೈಬಾ ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ ಬಳಿ ತರಬೇತಿ ಶಿಬಿರಗಳನ್ನು ನಿರ್ವಹಿಸುತ್ತಿರುವುದಾಗಿ ಗುಪ್ತಚರ ಮಾಹಿತಿ ತಿಳಿಸಿದೆ.
- ಖೈಬರ್ ಪಖ್ತುಂಖ್ವಾ ತರಬೇತಿ ಶಿಬಿರವು 1998ರಿಂದ ಸಕ್ರಿಯವಾಗಿದೆ. ಇಲ್ಲಿ ಜೂನಿಯರ್‌ನಿಂದ ಹಿರಿಯ ಮಟ್ಟದ ಕೋರ್ಸ್‌ಗಳವರೆಗೆ ಉಗ್ರರಿಗೆ ತರಬೇತಿ ನೀಡಲಾಗುತ್ತದೆ.
- ಹೈದರಾಬಾದ್, ಸಿಂಧ್ ತರಬೇತಿ ಶಿಬಿರ 1993ರಿಂದ ಕಾರ್ಯನಿರ್ವಹಿಸುತ್ತಿದ್ದು ಇದು ದಕ್ಷಿಣ ಪಾಕಿಸ್ತಾನದಲ್ಲಿರುವ ಎಲ್‌ಇಟಿಯೊಂದಿಗೆ ಸಂಪರ್ಕ ಹೊಂದಿದೆ.
- 1990 ರಿಂದ ಕಾರ್ಯನಿರ್ವಹಿಸುತ್ತಿರುವ ಇಸ್ಲಾಮಾಬಾದ್ ವಾಯುನೆಲೆಯ ಮಿಲಿಟರಿ ಸೌಲಭ್ಯದೊಳಗೂ ಶಿಬಿರವನ್ನು ಹೊಂದಿದೆ. ಇದರಿಂದ ಲಷ್ಕರ್-ಎ-ತೈಬಾ ಭಯೋತ್ಪಾದಕರಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ.
- ಅರಣ್ಯ ಪ್ರದೇಶದಲ್ಲಿರುವ ಮನ್ಸೆಹ್ರಾ ಅರಣ್ಯ ಮತ್ತು ಖೋಸ್ಟ್ ನಲ್ಲಿ ರಹಸ್ಯ ತರಬೇತಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
- ಮಂಗ್ಲಾ (ಮಿರ್ ಪುರ್ ) ಮತ್ತು ಹೆಡ್ ಮಾರಲ್ (ಸಿಯಾಲ್‌ಕೋಟ್) ನಲ್ಲಿ ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಅವರ ಪುತ್ರ ತಲ್ಹಾ ಸಯೀದ್ ನೇತೃತ್ವದಲ್ಲಿ ಜಲ ತರಬೇತಿ ಶಿಬಿರಗಳನ್ನು ಇತ್ತೀಚೆಗೆ ಮತ್ತೆ ಪ್ರಾರಂಭಿಸಲಾಗಿದೆ. ಇದು ನೀರಿನ ಮೂಲಕ ಒಳನುಸುಳುವಿಕೆ ತಂತ್ರಗಳನ್ನು ಭಯೋತ್ಪಾದಕರಿಗೆ ಹೇಳಿಕೊಡುತ್ತಿದೆ.
- ಸ್ವಾತ್ ಕಣಿವೆ, ಪೇಶಾವರ್ ಮತ್ತು ಕ್ವೆಟ್ಟಾ ಪಾಕಿಸ್ತಾನ- ಅಫ್ಘಾನಿಸ್ತಾನದ ಗಡಿಯ ಸಮೀಪವಿರುವ ನೇಮಕಾತಿ ಕೇಂದ್ರಗಳಾಗಿವೆ. ಇದರ ಮೂಲಕ ಭಯೋತ್ಪಾದಕರ ನೇಮಕ ನಡೆಯುತ್ತದೆ. ಹೊಸ ನೇಮಕಾತಿಗಳಿಗಾಗಿ ಇವು ಬುಡಕಟ್ಟು ಪ್ರದೇಶಗಳನ್ನು ಬಳಸಿಕೊಳ್ಳುತ್ತವೆ.
- ಮುರಿಡ್ಕೆ, ಪಂಜಾಬ್ ಎಲ್‌ಇಟಿಯ ಪ್ರಧಾನ ಕಚೇರಿಯಾಗಿದ್ದು ಇಲ್ಲಿ ಸೈದ್ಧಾಂತಿಕ ಬೋಧನೆ ಮತ್ತು ಕಾರ್ಯಯೋಜನೆಯನ್ನು ರೂಪಿಸಲಾಗುತ್ತದೆ.
- ಗುಪ್ತಚರ ಮೂಲಗಳು ಗಡಿ ನಿಯಂತ್ರಣ ರೇಖೆಯ ಬಳಿ ಉಡಾವಣಾ ಪ್ಯಾಡ್‌ಗಳನ್ನು ಸಹ ಗುರುತಿಸಿವೆ. ಇದರಲ್ಲಿ ಸಾಂಬಾ ಪ್ರದೇಶದಲ್ಲಿ ಐಬಿ ನಾಲ್ಕು ಉಡಾವಣಾ ಪ್ಯಾಡ್‌ಗಳನ್ನು ಹೊಂದಿದೆ. ಮಸ್ರೂರ್ ಬಡಾ ಭಾಯ್, ಸುಖ್‌ಮಲ್, ಚಾಪ್ರಾಲ್, ಲೂನಿ ಉಡಾವಣಾ ಪ್ಯಾಡ್ ಗಳನ್ನು 2016 ರಲ್ಲಿ ಗುರುತಿಸಲಾಯಿತು. ಇದನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಎಲ್‌ಇಟಿ ಗಡಿಯಾಚೆಗಿನ ಒಳನುಸುಳುವಿಕೆಗೆ ಬಳಸಿಕೊಳ್ಳುತ್ತವೆ.
- ಪೂಂಚ್ ಜಿಲ್ಲೆಯ ರಾವಲಕೋಟ್ನಲ್ಲಿ ದಾಳಿಗಳಿಗೆ ಸಂಬಂಧಿಸಿ ಹಮಾಸ್ ಮತ್ತು ಜೆಇಎಂ ಜೊತೆ ಜಂಟಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
- ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರ ನುಸುಳುವಿಕೆಗೆ ನೂರ್-ಉಲ್-ಇಸ್ಲಾಂ ಗಡಿ ಹೊರಠಾಣೆಯನ್ನು ಬಳಸಲಾಗುತ್ತದೆ.
ಇದನ್ನೂ ಓದಿ: Pahalgam Terror Attack: ಇದು ತಪ್ಪು ವಾಘಾ ಅಟ್ಟಾರಿ ಗಡಿ ಮುಚ್ಚಬಾರದಿತ್ತು.... ಪಾಕಿಸ್ತಾನ ಪ್ರಜೆಗಳಿಂದ ಆಗ್ರಹ
ಭಾರತೀಯ ಸೇನೆ ಎಲ್ಲಿಗೆ ದಾಳಿ ಮಾಡಬಹುದು ?
ನಾನ್ ಮಿರಾನ್ ಶಾ, ಮನ್ಸೆಹ್ರಾ ಸರ್ಜಿಕಲ್ ಸ್ಟ್ರೈಕ್‌ಗಳಿಗೆ ಸೂಕ್ತವಾದ ಸ್ಥಳಗಳಾಗಿವೆ. ಆದರೆ ಇಲ್ಲಿ ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ಕಾರ್ಯತಂತ್ರ ರೂಪಿಸಬೇಕಿದೆ. ಮುರಿಡ್ಕೆ ಮತ್ತು ಇಸ್ಲಾಮಾಬಾದ್ ವಾಯುನೆಲೆಗಳು ರಾಜಕೀಯವಾಗಿ ಸೂಕ್ಷ್ಮ ಪ್ರದೇಶಗಳಾಗಿವೆ. ಮಂಗಳ, ಹೆಡ್ ಮಾರಲ್ ಗಳಿಗೆ ಗುರಿ ಮಾಡಬಹುದಾದರೂ ಇದು ಪಾಕಿಸ್ತಾನದ ರಕ್ಷಣೆಯಲ್ಲಿದೆ. ಇನ್ನು ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಉಡಾವಣಾ ಪ್ಯಾಡ್‌ಗಳ ಮೂಲಕ ಒಳನುಸುಳುವಿಕೆಯನ್ನು ತಡೆಯಬಹುದಾಗಿದೆ.
ಏನು ಸವಾಲು?
ಸಾಮಾನ್ಯವಾಗಿ ಉಗ್ರರು ದಾಳಿಗಳ ಅನಂತರ ಶಿಬಿರಗಳನ್ನು ಆಗಾಗ್ಗೆ ಸ್ಥಳಾಂತರಿಸುತ್ತಾರೆ. ಉಗ್ರರಿಗೆ ಸಹಾಯ ಮಾಡಲು ಐಎಸ್‌ಐ ಮತ್ತು ಪಾಕಿಸ್ತಾನ ಸೇನೆಯ ಭಾಗಿಯಾಗಿದೆ ಎನ್ನಲಾಗಿದೆ. ಹೀಗಾಗಿ ಇದು ರಾಜತಾಂತ್ರಿಕ ಬಿಕ್ಕಟ್ಟನ್ನು ಉಂಟುಮಾಡಬಹುದು ಎನ್ನುತ್ತದೆ ಗುಪ್ತಚರ ಮೂಲಗಳು.