ಒಡಿಶಾ ಕರಾವಳಿಯಲ್ಲಿ ಮುಳುಗಿದ ಸರಕು ಹಡಗು: ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ
ಒಡಿಶಾದ ಕರಾವಳಿಯಲ್ಲಿ ಪನಾಮ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗೊಂದು ಮುಳುಗಿದ್ದು, 22 ಮಂದಿ ನಾಪತ್ತೆಯಾಗಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದವರಿಗಾಗಿ ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಹುಡುಕಾಟ ಮುಂದುವರಿಸಿದೆ. ಪ್ಯಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲು ದೂರ ಬಂಗಾಳಕೊಲ್ಲಿಯಲ್ಲಿ ಈ ದುರಂತ ಸಂಭವಿಸಿದೆ.
ಸಂಗ್ರಹ ಚಿತ್ರ -
ಒಡಿಶಾ: ಬಂಗಾಳಕೊಲ್ಲಿಯಲ್ಲಿ (Bay of Bengal) ಸರಕು ಹಡಗೊಂದು (MV Ocean-Winner) ಮುಳುಗಿ 22 ಮಂದಿ ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ. 24 ಸಿಬ್ಬಂದಿಯೊಂದಿಗೆ ಸಾಗುತ್ತಿದ್ದ ಪನಾಮ ಧ್ವಜ ಹೊಂದಿದ್ದ ಬೃಹತ್ ಸರಕು ಹಡಗು ಒಡಿಶಾದ ಪ್ಯಾರದೀಪ್ ಕರಾವಳಿಯಿಂದ (Paradip Port) ಸುಮಾರು 240 ನಾಟಿಕಲ್ ಮೈಲು ದೂರದಲ್ಲಿ ಮುಳುಗಿದೆ. ಇಬ್ಬರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವವರಿಗಾಗಿ ಭಾರತೀಯ ಕರಾವಳಿ ಕಾವಲು ಪಡೆ (Indian Coast Guard) ಮತ್ತು ಭಾರತೀಯ ನೌಕಾಪಡೆ ತಂಡಗಳು ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಪನಾಮ ಧ್ವಜ ಹೊಂದಿದ್ದ ಬೃಹತ್ ಸರಕು ಸಾಗಣೆ ಎಂವಿ ಓಷನ್ ವಿನ್ನರ್ (ಐಎಂಒ 9145530) ಹಡಗು ಶನಿವಾರ ಒಡಿಶಾದ ಪ್ಯಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ಮುಳುಗಿದೆ. ಇದರಲ್ಲಿ 20 ಚೀನೀಯರು, ಮೂವರು ಮ್ಯಾನ್ಮಾರ್ ಪ್ರಜೆಗಳು ಮತ್ತು ಒಬ್ಬ ಬಾಂಗ್ಲಾದೇಶಿ ಸಿಬ್ಬಂದಿ ಇದ್ದರು.
ವಿಕಸಿತ ಭಾರತ 2047ಕ್ಕೆ ಕೇಂದ್ರದಿಂದ 23 ಅಂಶಗಳ ಕಾರ್ಯಯೋಜನೆ; ಕ್ರೀಡೆ, ಕೌಶಲ್ಯಾಭಿವೃದ್ಧಿ, AIಗೆ ಒತ್ತು
ಈ ಹಡಗು ಪ್ಯಾರದೀಪ್ ಬಂದರಿಗೆ ಬಂದು ಸಿಂಗಾಪುರ ಬಂದರಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇಬ್ಬರನ್ನು ಎರಡು ಲೈಫ್‌ರಾಫ್ಟ್‌ಗಳಿಂದ ರಕ್ಷಿಸಲಾಗಿದೆ. ಉಳಿದ 22 ಮಂದಿಗಾಗಿ ಶೋಧ ಮುಂದುವರಿಸಲಾಗಿದೆ.
ಶ್ರೀ ವಿಜಯ ಪುರಂನಲ್ಲಿರುವ ಐಸಿಜಿಯ ಕಡಲ ರಕ್ಷಣಾ ಸಮನ್ವಯ ಕೇಂದ್ರ (ಎಂಆರ್‌ಸಿಸಿ)ವು ಬೆಳಗ್ಗೆ 11.48ಕ್ಕೆ ಎಂವಿ ಓಷನ್ ವಿನ್ನರ್ ಕಂಪೆನಿಗೆ ಹಡಗು ಮುಳುಗಿರುವ ಕುರಿತು ಮಾಹಿತಿ ನೀಡಿದೆ. ಕಂಪೆನಿಯು ಶೋಧ ಮತ್ತು ರಕ್ಷಣಾ ಸಹಾಯಕ್ಕಾಗಿ ಭಾರತಕ್ಕೆ ಮನವಿ ಮಾಡಿದೆ.
ಆಗಸ್ಟ್ 20 ರಂದು ರಾತ್ರಿ 10.30ರ ಸುಮಾರಿಗೆ ಎಂವಿ ಓಷನ್-ವಿನ್ನರ್ ಎಂಬ ಹಡಗು ಒಡಿಶಾದ ಪ್ಯಾರದೀಪ್ ಬಂದರಿನಿಂದ 1,700 ಟನ್ ಕಬ್ಬಿಣದ ಅದಿರನ್ನು ಹೊತ್ತುಕೊಂಡು ಸಿಂಗಪುರಕ್ಕೆ ಹೊರಟಿತ್ತು. ಆಗಸ್ಟ್ 22 ರಂದು ಬೆಳಗ್ಗೆ 11.48ಕ್ಕೆ ಶ್ರೀ ವಿಜಯ ಪುರಂನಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರದೊಂದಿಗೆ ಹಡಗಿನ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
🚨A Panama-flagged cargo ship carrying 24 crew members sank in the Bay of Bengal, around 444 km off Odisha’s coast.
— Radio India 🇮🇳 (@Radio_India_) August 22, 2026
The Singapore-bound vessel, carrying iron ore from Odisha, sent a distress call at 11:48 am. The Indian Coast Guard and Navy launched a rescue operation, with two… pic.twitter.com/EFCNRTPBeN
ಎಂಆರ್‌ಸಿಸಿ ಸೂಚನೆ ಮೇರೆಗೆ ತಕ್ಷಣವೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಹಡಗು ಎಂಟಿ ಐಸೊಪೊಸ್ ರಕ್ಷಣೆಗೆ ಧಾವಿಸಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಎಂಟಿ ಐಸೊಪೊಸ್ ಎರಡು ಲೈಫ್‌ರಾಫ್ಟ್‌ಗಳಿಂದ ಬದುಕುಳಿದ ಇಬ್ಬರನ್ನು ರಕ್ಷಿಸಿದೆ.
ನಾಪತ್ತೆಯಾದವರ ಹುಡುಕಾಟಕ್ಕೆ ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆಯು ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಇದಕ್ಕಾಗಿ ಐಸಿಜಿ ಹಡಗುಗಳಾದ ವರದ್ ಮತ್ತು ಅನ್ಮೋಲ್ ಅನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಶ್ರೀ ವಿಜಯ ಪುರಂನಿಂದ ವಿಜಿತ್ ಹಡಗನ್ನು ಕೂಡ ಕಳುಹಿಸಲಾಗಿದೆ.
ಆರ್ಕೆಸ್ಟ್ರಾ ಪ್ರೇಕ್ಷಕರ ಮಧ್ಯೆ ನುಗ್ಗಿದ ಬಸ್: ಐವರು ಸಾವು, ಇಬ್ಬರು ಗಂಭೀರ; ಛಾತಿ ಸಮಾರಂಭದ ವೇಳೆ ಭೀಕರ ದುರಂತ
ನೌಕೆ ಮುಳುಗಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಹಡಗು ಮುಳುಗುವ ಮೊದಲು ಅದರ ಸ್ಥಿತಿ ಮತ್ತು ಕಾಣೆಯಾದ ಸಿಬ್ಬಂದಿ ಸದಸ್ಯರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.