ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುಲ್ಗಾಮ್‌ ದಾಳಿಗೆ ಮುನ್ನ ಸ್ಥಳ ಪರಿಶೀಲನೆಗೆ ಓಡಾಡಿದ್ದ ಉಗ್ರರು; ಸಿಸಿಟಿವಿ ಕ್ಯಾಮರಾದಲ್ಲಿ ಸಂಚಿನ ದೃಶ್ಯ ಸೆರೆ

Kulgam Attack: ನವೆಂಬರ್‌11ರಂದು ಜಮ್ಮು ಕಾಶ್ಮೀರದ ಕುಲ್ಗಾಮ್‌ನ ಮೀರ್‌ ಬಜಾರ್‌ನಲ್ಲಿ ಮೂವರು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರ ಪೈಕಿ ಓರ್ವನನ್ನು ಭದ್ರತಾ ಪಡೆಯ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಇದೀಗ ಉಗ್ರರು ದಾಳಿ ನಡೆಸುವ ಮುನ್ನ ಸ್ಥಳದಲ್ಲಿ ಓಡಾಡಿದ ಸಿಸಿಟಿವಿ ದೃಶ್ಯ ಹೊರ ಬಿದ್ದಿದೆ.

ಕುಲ್ಗಾಮ್‌ ದಾಳಿ: ಉಗ್ರರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಉಗ್ರರಾದ ಲತೀಫ್‌ ಭಟ್‌ ಮತ್ತು ಉಮರ್‌ ನಿಸಾರ್‌ ದರ್‌ -

Ramesh Ballamoole
Ramesh Ballamoole Nov 17, 2026 3:46 PM

ಶ್ರೀನಗರ, ನ. 17: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಮತ್ತೆ ಬಾಲ ಬಿಚ್ಚಿದ ಉಗ್ರರನ್ನು ಸದೆಬಡಿಯಲು ಭದ್ರತಾ ಪಡೆಗಳು ಸಜ್ಜಾಗಿವೆ. ನವೆಂಬರ್‌11ರಂದು ಕುಲ್ಗಾಮ್‌ನ ಮೀರ್‌ ಬಜಾರ್‌ನಲ್ಲಿ ಮೂವರು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲಿನ ದಾಳಿ ಮತ್ತು ನವೆಂಬರ್‌ 12ರಂದು ಕಿಶ್ತ್ವಾರ್‌ನಲ್ಲಿ ವಿಶೇಷ ಪೊಲೀಸ್‌ ಅಧಿಕಾರಿಗಳ ಹತ್ಯೆ ಬಳಿಕ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದ್ದು, ಕಣಿವೆಯಾದ್ಯಂತ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಸೋಮವಾರ (ನವೆಂಬರ್‌ 16) ಭದ್ರತಾ ಪಡೆಗಳು ಕುಲ್ಗಾಮ್‌ನಲ್ಲಿ ನಡೆಸಿದ ದಾಳಿಯಲ್ಲಿ (Kulgam Attack) ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್‌ ಲತೀಫ್‌ ಭಟ್‌ನ (Lateef Bhat) ಸಹಚರ ಉಮರ್‌ ನಿಸಾರ್‌ ದರ್‌ನನ್ನು (Umar Nisar Dar) ಹೊಡೆದುರುಳಿಸಲಾಗಿದೆ. ಲತೀಫ್‌ ಭಟ್‌ ಕೊನೆಯ ಕ್ಷಣದಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಲತೀಫ್‌ ಭಟ್‌ ಮತ್ತು ಉಮರ್‌ ನಿಸಾರ್‌ ದರ್‌ ಕುಲ್ಗಾಮ್‌ ದಾಳಿಯ ಮುನ್ನ ಸ್ಥಳ ಪರಿಶೀಲನೆ ನಡೆಸಿದ ಸಿಸಿಟಿವಿ ಕ್ಯಾಮರಾ ದೃಶ್ಯ ಹೊರ ಬಿದ್ದಿದೆ.

ನವೆಂಬರ್ 10ರಂದು ಇವರಿಬ್ಬರೂ ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿರುವುದು ಈ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲೆ ದಾಳಿ ನಡೆಸುವ ಸಂಚಿನ ಭಾಗವಾಗಿಯೇ ಅವರು ಸ್ಥಳದಲ್ಲಿ ಓಡಾಡಿದ್ದರು ಎನ್ನಲಾಗಿದೆ.

ಉಗ್ರರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ:



ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸೂಕ್ತ ಸ್ಥಳಗಳನ್ನು ಗುರುತಿಸುವ ಉದ್ದೇಶದಿಂದ ಅವರಿಬ್ಬರೂ ಮೀರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಂ ಸೇರಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು.

ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರ ಲತೀಫ್ ಭಟ್‌ ಎನ್‌ಕೌಂಟರ್‌; ಯಾರೀತ?

ನಾಪತ್ತೆ ದೂರಿನ ಬಳಿಕ ಎನ್‌ಕೌಂಟರ್‌

ದರ್‌ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಕುಲ್ಗಾಮ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ 5-6 ತಿಂಗಳಿನಿಂದ ದರ್‌ ಎಲ್‌ಇಟಿ ಕಮಾಂಡರ್‌ ಲತೀಫ್‌ ಭಟ್‌ಗೆ ಆಶ್ರಯ ನೀಡುತ್ತಿರುವುದು ಪತ್ತೆಯಾಗಿದೆ. ಕುಲ್ಗಾಮ್‌ ಮೇಲೆ ದಾಳಿ ನಡೆಸಿದ ಇಬ್ಬರು ಶಂಕಿತ ಉಗ್ರರು ಅಡಗಿಕೊಂಡಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆಯ ತಂಡ ಸೋಮವಾರ ಕುಲ್ಗಾಮ್‌ನಲ್ಲಿ ಶೋಧ ಕಾರ್ಯ ನಡೆಸಿತು. ಈ ವೇಳೆ ದರ್‌ ಮತ್ತು ಲತೀಫ್‌ ತಪ್ಪಿಸಿಕೊಳ್ಳಲು ಶಾಲೆಯ ಒಳ ಹೊಕ್ಕಿದ್ದರು.

ಬಳಿಕ ಶಾಲೆಯಲ್ಲಿನ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರ ಕಳುಹಿಸಿ ಭದ್ರತಾ ಪಡೆ ಸಿಬ್ಬಂದಿ ಎನ್‌ಕೌಂಟರ್‌ ನಡೆಸಿದರು. ಈ ವೇಳೆ ದರ್‌ ಹತ್ಯೆಗೀಡಾಗಿದ್ದು, ಲತೀಫ್‌ ಭಟ್‌ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ದರ್‌ ಮತ್ತು ಲತೀಫ್‌ನ ಚಲನವಲನ ಸೆರೆಯಾಗಿದೆ. ಸದ್ಯ ಪರಾರಿಯಾಗಿರುವ ಲತೀಫ್‌ನ ಪತ್ತೆಗಾಗಿ ಭದ್ರತಾ ಪಡೆ ಸಿಬ್ಬಂದಿ ಸ್ಥಳೀಯ ಅರಣ್ಯ ಪ್ರದೇಶಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ