Celina Jaitly: ದೇಶಕ್ಕಾಗಿ ನಾನು ಮಾತನಾಡುತ್ತೇನೆ.. ಕ್ಷಮೆ ಕೇಳುವುದಿಲ್ಲ.. ಅಭಿಮಾನಿಯ ಬೆದರಿಕೆಗೆ ದಿಟ್ಟ ಉತ್ತರ ನೀಡಿದ ನಟಿ ಸೆಲಿನಾ ಜೇಟ್ಲಿ
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಿರುದ್ಧ ನಡೆಸಿರುವ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಸೆಲಿನಾ ಜೇಟ್ಲಿ (Actress Celina Jaitly) ಅವರಿಗೆ ಕೆಲವರು ನಿಮ್ಮನ್ನು ಆನ್ ಫಾಲೋ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ದೇಶಕ್ಕಾಗಿ ನಾನು ಮಾತನಾಡುತ್ತೇನೆ. ಅದಕ್ಕಾಗಿ ಯಾರ ಬಳಿಯೂ ನಾನು ಕ್ಷಮೆ ಕೇಳುವುದಿಲ್ಲ. ನಿಮಗದು ಇಷ್ಟವಾಗದೇ ಇದ್ದರೆ ಆನ್ ಫಾಲೋ ಮಾಡಿ ಎಂದು ಹೇಳಿದ್ದಾರೆ.


ಆಸ್ಟ್ರಿಯಾ: ನನ್ನ ದೇಶಕ್ಕಾಗಿ ನಾನು ಮಾತನಾಡುತ್ತೇನೆ ಎಂಬ ಕಾರಣಕ್ಕಾಗಿ ನನ್ನನ್ನು ಅನ್‌ಫಾಲೋ ಮಾಡುವವರಿಗೆ ಅಥವಾ ಬೆದರಿಕೆ ಹಾಕುವವರು ಇದನ್ನು ಎಚ್ಚರಿಕೆಯಿಂದ ಓದಿ. ನನ್ನ ರಾಷ್ಟ್ರದೊಂದಿಗೆ ನಿಂತಿದ್ದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ. ಭಯೋತ್ಪಾದನೆಯ ಹೆಸರಿನಲ್ಲಿ ಮುಗ್ಧ ಜೀವಗಳನ್ನು ಬಲಿ ಪಡೆದಾಗ ನಾನು ಎಂದಿಗೂ ಮೌನವಾಗಿರುವುದಿಲ್ಲ ಎಂದು ನಟಿ ಸೆಲಿನಾ ಜೇಟ್ಲಿ (Actress Celina Jaitly) ಹೇಳಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು (Indian army) ಪಾಕಿಸ್ತಾನದ ವಿರುದ್ಧ ನಡೆಸಿರುವ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ಮೆಚ್ಚಿ ಪೋಸ್ಟ್ ಮಾಡಿರುವ ಅವರಿಗೆ ಕೆಲವರು ಬೆದರಿಕೆ ಹಾಕಿರುವುದಕ್ಕೆ ಪ್ರತಿಯಾಗಿ ಅವರು ಈ ಉತ್ತರ ನೀಡಿದ್ದಾರೆ.
ಭಾರತೀಯ ಮೂಲದವರದ ಸೆಲಿನಾ ಜೇಟ್ಲಿ ಪ್ರಸ್ತುತ ಆಸ್ಟ್ರಿಯದಲ್ಲಿ ವಾಸವಾಗಿದ್ದಾರೆ. ಅವರು ಇತ್ತೀಚೆಗೆ ಭಾರತೀಯ ಸಶಸ್ತ್ರ ಪಡೆ ಮತ್ತು ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಮೆಚ್ಚಿ ಪೋಸ್ಟ್ ಮಾಡಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಬಗ್ಗೆ ಬರೆದಿರುವ ಅವರು ಗಡಿ ಭಾಗದಲ್ಲಿರುವ ಜನರು ಮತ್ತು ನಮ್ಮ ಸೈನಿಕರನ್ನು ನೆನೆದು ಹೃದಯವು ಚಂಚಲವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತೀಯ ಸಶಸ್ತ್ರ ಪಡೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ರಾಷ್ಟ್ರವನ್ನು ರಕ್ಷಿಸುವ ಅವರ ಬದ್ಧತೆಯನ್ನು ಶ್ಲಾಘಿಸಿದರು.
ಇನ್ನೊಂದು ಪೋಸ್ಟ್‌ನಲ್ಲಿ ಭಾರತದ ಆಪರೇಷನ್ ಸಿಂದೂರ್ ಅನ್ನು ಶ್ಲಾಘಿಸಿದ್ದಕ್ಕೆ ಕೆಲವು ಅವರ ಅಭಿಮಾನಿಗಳು ನಿಮ್ಮನ್ನು ಅನ್‌ಫಾಲೋ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಬಲವಾಗಿ ಪ್ರತಿಕ್ರಿಯಿಸಿರುವ ಅವರು ತಮ್ಮ ದೇಶಭಕ್ತಿಯ ನಿಲುವನ್ನು ಸಮರ್ಥಿಸಿಕೊಂಡಿದ್ದು, ಅನ್‌ಫಾಲೋ ಮಾಡಿ ಎಂದು ತಿರುಗೇಟು ನೀಡಿದ್ದಾರೆ.
ಸೆಲಿನಾ ಜೇಟ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಶುಕ್ರವಾರ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಗಡಿಗಳನ್ನು ಲೆಕ್ಕಿಸದೆ ಹೊರಡುವ ಪ್ರತಿ ಮುಗ್ಧ ಜೀವಕ್ಕೂ ನಾನು ದುಃಖಿಸುತ್ತೇನೆ. ಆದರೆ ಹಿಂಸೆಯನ್ನು ಸಮರ್ಥಿಸುವ ಅಥವಾ ವೈಭವೀಕರಿಸುವವರೊಂದಿಗೆ ನಾನು ಎಂದಿಗೂ ನಿಲ್ಲುವುದಿಲ್ಲ. ಭಾರತದ ಮೇಲಿನ ನನ್ನ ಪ್ರೀತಿ ನಿಮಗೆ ಅಪರಾಧ ಎಂದೆನಿಸಿದರೆ ಅಥವಾ ಭಯೋತ್ಪಾದನೆಯ ವಿರುದ್ಧದ ನನ್ನ ಧ್ವನಿ ನಿಮಗೆ ಬೆದರಿಕೆ ಎಂದೆನಿಸಿದರೆ ಹೆಮ್ಮೆಯಿಂದ ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿ. ನೀವು ಎಂದಿಗೂ ನನ್ನೊಂದಿಗೆ ಬರುವುದು ಬೇಡ. ನಾನು ಶಾಂತಿಗಾಗಿ ಮಾತನಾಡುತ್ತೇನೆ. ಸತ್ಯಕ್ಕಾಗಿ ನಿಲ್ಲುತ್ತೇನೆ. ಯಾವಾಗಲೂ ನನ್ನ ಸೈನಿಕರೊಂದಿಗೆ ನಿಲ್ಲುತ್ತೇನೆ. ಅವರು ನಿಮ್ಮ ಹೆಸರು ಅಥವಾ ಧರ್ಮವನ್ನು ಕೇಳದೆ ನಿಮ್ಮನ್ನು ರಕ್ಷಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್ ವಾಯುನೆಲೆ ಮೇಲೆ ಪಾಕ್ ಹೈಸ್ಪೀಡ್ ಕ್ಷಿಪಣಿ ಬಳಕೆ: ಸೋಫಿಯಾ ಖುರೇಷಿ
ನನಗೆ ಯಾವ ಭಯವೂ ಇಲ್ಲ. ನಾನು ನನ್ನ ದೇಶಕ್ಕಾಗಿ ಮಾತನಾಡಲು ಯಾರ ಅನುಮತಿಯೂ ಬೇಡ. ಬೆದರಿಕೆ ಹಾಕಿರುವುದಕ್ಕೆ ನಾನು ನಿನ್ನನ್ನು ಕ್ಷಮಿಸುತ್ತೇನೆ. ಜೈ ಹಿಂದ್. ನಾನು ಕುಮಾವೂನ್ ರೆಜಿಮೆಂಟ್ ನ ಮಗಳು ಎಂದು ದಿಟ್ಟ ಉತ್ತರ ನೀಡಿದ್ದಾರೆ. ಇದಕ್ಕೂ ಮೊದಲು ಸೆಲಿನಾ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿ ನಾನು ದೂರವಿದ್ದರೂ ನನ್ನ ಆತ್ಮವು ಭಾರತದೊಂದಿಗೆ ನಿಂತಿದೆ. ನಮ್ಮ ಧೈರ್ಯಶಾಲಿ ಭಾರತೀಯ ಸಶಸ್ತ್ರ ಪಡೆಗಳು ನಮ್ಮ ಮತ್ತು ಅವ್ಯವಸ್ಥೆಯ ನಡುವಿನ ಗುರಾಣಿಯಾಗಿರುವುದಕ್ಕೆ ಧನ್ಯವಾದಗಳು. ನಿಮ್ಮ ಧೈರ್ಯವು ಕೇವಲ ಯುದ್ಧದಲ್ಲಿ ಅಲ್ಲ, ಪ್ರತಿ ಮೌನ ತ್ಯಾಗ, ಪ್ರತಿ ಶೀತ ರಾತ್ರಿ, ನಮ್ಮ ರಾಷ್ಟ್ರವನ್ನು ರಕ್ಷಿಸಲು ನೀವು ತೆಗೆದುಕೊಳ್ಳುವ ಪ್ರತಿಯೊಂದು ಅಚಲ ಹೆಜ್ಜೆಯಲ್ಲಿದೆ. ನಾವು ಇಲ್ಲಿದ್ದೇವೆ, ಸುರಕ್ಷಿತ ಮತ್ತು ಉಸಿರಾಡುತ್ತಿದ್ದೇವೆ, ಯಾಕೆಂದರೆ ನೀವು ಅಲುಗಾಡದೆ ನಿಂತಿದ್ದೀರಿ ಎಂದು ಹೇಳಿದ್ದರು.