ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Labour Codes: ಕಾರ್ಮಿಕರಿಗೆ ಸಿಹಿ ಸುದ್ದಿ: ಕನಿಷ್ಠ ವೇತನ, ರಜೆ, ಪಿಎಫ್-‌ ಇಎಸ್‌ಐ ಕಡ್ಡಾಯ ಸೇರಿ 4 ಹೊಸ ಕಾರ್ಮಿಕ ಸಂಹಿತೆ ಜಾರಿ

Labour Law: ಎಲ್ಲ ಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು ನೀಡಬೇಕು. ಪ್ರತಿ ತಿಂಗಳು 7ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು. ಯಾವುದೇ ಉದ್ಯೋಗವಾದರೂ ಮಹಿಳೆಯರಿಗೆ ರಾತ್ರಿಪಾಳಿ ಕೆಲಸಗಳಿಗೆ ಅವಕಾಶ ಹಾಗೂ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. 40 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎನ್ನುವುದು ಹೊಸ ಕಾರ್ಮಿಕ ಸಂಹಿತೆಗಳ ಪ್ರಮುಖ ಸಂಗತಿಗಳಾಗಿವೆ.

ಕಾರ್ಮಿಕರಿಗೆ ಸಿಹಿ ಸುದ್ದಿ: ಕನಿಷ್ಠ ವೇತನ, ರಜೆ, ಪಿಎಫ್-‌ ಇಎಸ್‌ಐ ಕಡ್ಡಾಯ

ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ -

ಹರೀಶ್‌ ಕೇರ
ಹರೀಶ್‌ ಕೇರ Nov 22, 2025 9:25 AM

ನವದೆಹಲಿ, ನ.22 : ಕಾರ್ಮಿಕರಿಗೆ ಸಿಹಿ ಸುದ್ದಿಯನ್ನು ಕೇಂದ್ರ ಸರಕಾರ ನೀಡಿದ್ದು, ಕಾರ್ಮಿಕ ಕಾನೂನುಗಳಲ್ಲಿ (Labour law) ಕೆಲವು ಮಹತ್ವದ ಬದಲಾವಣೆಗಳನ್ನು ತಂದಿದೆ. ಎಲ್ಲಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು ನೀಡಬೇಕು. ಪ್ರತಿ ತಿಂಗಳು 7ನೇ ತಾರೀಖಿನ ಒಳಗೆ ವೇತನ (Salary) ಪಾವತಿಸಬೇಕು ಎಂಬ ಸೂಚನೆಗಳನ್ನು ಸೇರಿದಂತೆ, ವಿವಿಧ ವಲಯಗಳಿಗೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ (Labour Codes) ಜಾರಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ವೇತನ ಸಂಹಿತೆ (2020), ಕೈಗಾರಿಕೆ ಸಂಬಂಧಗಳ ಸಂಹಿತೆ (2019), ಸಾಮಾಜಿಕ ಭದ್ರತಾ ಸಂಹಿತೆ (2020), ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯನಿರ್ವಹಣೆ ಸ್ಥಿತಿ ಸಂಹಿತೆ (2020) ಶುಕ್ರವಾರದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ. (ಪಿಎಫ್‌ ನಿಯಮದಲ್ಲಿ ಮಹತ್ವದ ಬದಲಾವಣೆ)

ಎಲ್ಲ ಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು ನೀಡಬೇಕು. ಪ್ರತಿ ತಿಂಗಳು 7ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು. ಯಾವುದೇ ಉದ್ಯೋಗವಾದರೂ ಮಹಿಳೆಯರಿಗೆ ರಾತ್ರಿಪಾಳಿ ಕೆಲಸಗಳಿಗೆ ಅವಕಾಶ ಹಾಗೂ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. 40 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎನ್ನುವುದು ಹೊಸ ಕಾರ್ಮಿಕ ಸಂಹಿತೆಗಳ ಪ್ರಮುಖ ಸಂಗತಿಗಳಾಗಿವೆ.

‘‘ದೇಶದ ಬಹುತೇಕ ಕಾರ್ಮಿಕ ಕಾನೂನುಗಳನ್ನು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯನಂತರದ ಆರಂಭದಲ್ಲಿ(1930-1950ರ ದಶಕ) ರಚಿಸಲಾಗಿದೆ. ಆ ಸಮಯದಲ್ಲಿಆರ್ಥಿಕತೆ ಮತ್ತು ಕೆಲಸದ ಸ್ವರೂಪಗಳು ಮೂಲಭೂತವಾಗಿ ವಿಭಿನ್ನವಾಗಿದ್ದವು. ಈಗಿನ ಅಗತ್ಯತೆಗೆ ಅನುಗುಣವಾಗಿ ಕಾರ್ಮಿಕ ನಿಯಮಗಳನ್ನು ಮರುರೂಪಿಸಲಾಗಿವೆ. ಈ ಸಂಹಿತೆಗಳು ಸ್ವಾವಲಂಬಿ ರಾಷ್ಟ್ರಕ್ಕೆ ಅಗತ್ಯವಿರುವ ಬಲಿಷ್ಠ ಕಾರ್ಯಪಡೆಯನ್ನು ರೂಪಿಸುತ್ತವೆ,’’ ಎಂದು ಸಚಿವಾಲಯ ತಿಳಿಸಿದೆ.

ಹೊಸ ನಿಯಮಗಳಲ್ಲಿ ಏನಿದೆ?

ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಪತ್ರ ನೀಡುವುದು ಕಡ್ಡಾಯ

ಎಲ್ಲಕಾರ್ಮಿಕರಿಗೂ ಪಿಎಫ್‌, ಇಎಸ್‌ಐ, ವಿಮೆ ಸೌಲಭ್ಯ

ಒಂದು ವರ್ಷ ಸೇವಾವಧಿ ಪೂರೈಸಿದ ಬಳಿಕ ಗ್ರಾಚ್ಯುಟಿ ಅರ್ಹತೆ

ಎಲ್ಲಕಾರ್ಮಿಕರಿಗೆ ಕನಿಷ್ಠ ವೇತನ, ಸಕಾಲ ವೇತನ ಪಾವತಿ ಕಡ್ಡಾಯ

40 ವರ್ಷ ವಯಸ್ಸು ಮೀರಿದ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ

ಮಹಿಳಾ ಕಾರ್ಮಿಕರಿಗೂ ಸಮಾನ ವೇತನ ಪಾವತಿಸಬೇಕು

ಮಹಿಳೆಯರಿಗೆ ಗಣಿಗಾರಿಕೆ ಸೇರಿದಂತೆ ಎಲ್ಲಾವಲಯಗಳಲ್ಲೂರಾತ್ರಿ ಪಾಳಿಗೆ ಅವಕಾಶ

ಕುಂದುಕೊರತೆ ಪರಿಹಾರ ಸಮಿತಿಗಳಲ್ಲಿಮಹಿಳಾ ಪ್ರಾತಿನಿಧ್ಯ ಕಡ್ಡಾಯ

ಉದ್ಯಮಗಳಿಗೆ ಒಂದೇ ಕಡೆ ನೋಂದಣಿ, ಪ್ಯಾನ್‌ ಇಂಡಿಯಾ ಒಂದೇ ಪರವಾನಗಿ ಮತ್ತು ಒಂದೇ ರಿಟರ್ನ್‌ ಸಲ್ಲಿಕೆ

ಮೊದಲ ಬಾರಿ ಗಿಗ್‌ ಕಾರ್ಮಿಕರು, ಪ್ಲಾಟ್‌ಫಾರಂ ಕಾರ್ಮಿಕರು, ಸೌಲಭ್ಯ ಕಲ್ಪಿಸುವವರು - ಈ ಪದಗಳ ಸ್ಪಷ್ಟ ವ್ಯಾಖ್ಯಾನ

ಇದನ್ನೂ ಓದಿ: Bagepally News: ಅಡುಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ಈ ಸಂಹಿತೆಗಳು ನಮ್ಮ ಜನರಿಗೆ, ವಿಶೇಷವಾಗಿ ನಾರಿ ಶಕ್ತಿ ಮತ್ತು ಯುವ ಶಕ್ತಿಗೆ ಲಾಭದಾಯಕ ಅವಕಾಶಗಳಿಗೆ ಬಲವಾದ ಅಡಿಪಾಯ ಹಾಕುತ್ತವೆ. ಈ ಸುಧಾರಣೆಗಳು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತವೆ. ಉತ್ಪಾದಕತೆಯನ್ನು ಹೆಚ್ಚಿಸುತ್ತವೆ ಮತ್ತು ವಿಕಸಿತ ಭಾರತದತ್ತ ನಮ್ಮ ಪ್ರಯಾಣವನ್ನು ವೇಗಗೊಳಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇವು ಸಾಧಾರಣ ಸುಧಾರಣೆಗಳಲ್ಲ, ಕಾರ್ಮಿಕರ ಕ್ಷೇಮಕ್ಕಾಗಿ ನರೇಂದ್ರ ಮೋದಿ ಸರಕಾರ ರೂಪಿಸಿರುವ ಮಹತ್ತರ ಬದಲಾವಣೆಗಳಾಗಿವೆ. ಸ್ವಾವಲಂಬಿ ಭಾರತಕ್ಕೆ ಈ ಸಂಹಿತೆಗಳು ಮಹತ್ತರ ಕೊಡುಗೆ ನೀಡುತ್ತವೆ ಎಂದು ಮನ್ಸುಖ್‌ ಮಂಡಾವೀಯ ಕೇಂದ್ರ ಕಾರ್ಮಿಕ ಸಚಿವ ತಿಳಿಸಿದ್ದಾರೆ.

ಪ್ರಮುಖ ವಲಯಗಳಲ್ಲಿನ ಸುಧಾರಣೆ

ನಿಶ್ಚಿತ ಅವಧಿಯ ಕೆಲಸಗಾರರು (ಎಫ್‌.ಟಿ.ಇ)

ಕಾಯಂ ಸಿಬ್ಬಂದಿಗೆ ಸಮಾನ ವೇತನ. ರಜೆ, ವೈದ್ಯಕೀಯ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಕಾಯಂ ಕಾರ್ಮಿಕರಿಗೆ ಸಮಾನವಾದ ಎಲ್ಲಾ ಪ್ರಯೋಜನಗಳು ಅನ್ವಯ. ಐದು ವರ್ಷದ ಬದಲು ಕೇವಲ ಒಂದು ವರ್ಷದ ನಂತರ ಗ್ರಾಚ್ಯುಟಿ ಅರ್ಹತೆ. ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಒದಗಿಸಲಾಗುತ್ತದೆ.

ಗಿಗ್‌ ಮತ್ತು ಪ್ಲಾಟ್‌ಫಾರ್ಮ್‌ ಕಾರ್ಮಿಕರು

ಗಿಗ್‌ ಮತ್ತು ಪ್ಲ್ಲಾಟ್‌ಫಾರ್ಮ್‌ ಕೆಲಸಗಾರರಿಗೆ ಪಾವತಿಸಿದ/ಪಾವತಿಸಬೇಕಾದ ಮೊತ್ತದ ಶೇ.5 ಕ್ಕೆ ಸೀಮಿತಗೊಳಿಸಿ, ವಾರ್ಷಿಕ ವಹಿವಾಟಿನ ಶೇ.1-2ರಷ್ಟು ಕೊಡುಗೆಯನ್ನು ಉದ್ಯೋಗದಾತರು ನೀಡಬೇಕು. ಆಧಾರ್‌ ಲಿಂಕ್‌ ಮಾಡಲಾದ ಸಾರ್ವತ್ರಿಕ ಖಾತೆ ಸಂಖ್ಯೆಯ ಮೂಲಕ ಕಲ್ಯಾಣ ಪ್ರಯೋಜನಗಳನ್ನು ಸುಲಭವಾಗಿ ಪಡೆಯಬಹುದು. ಸಂಪೂರ್ಣವಾಗಿ ಪೋರ್ಟಬಲ್‌ ಮಾಡಿಕೊಳ್ಳಬಹುದು ಮತ್ತು ವಲಸೆಯನ್ನು ಲೆಕ್ಕಿಸದೆ ದೇಶಾದ್ಯಂತ ಸೌಲಭ್ಯಗಳು ಲಭ್ಯವಾಗಗಲಿವೆ.

ಇದನ್ನೂ ಓದಿ: Strike Success: ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಮಾಡದಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ( ಜೆಸಿಟಿಯು) ಮುಷ್ಕರ ಯಶಸ್ವಿ

ಮಹಿಳಾ ಕಾರ್ಮಿಕರು

ಲಿಂಗ ತಾರತಮ್ಯವನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಲಾಗಿದೆ. ಮಹಿಳೆಯರು ರಾತ್ರಿ ಪಾಳಿಯಲ್ಲಿ ಮತ್ತು ಎಲ್ಲಾ ರೀತಿಯ ಕೆಲಸಗಳಲ್ಲಿ(ಭೂಗತ ಗಣಿಗಾರಿಕೆ ಮತ್ತು ಭಾರಿ ಯಂತ್ರೋಪಕರಣಗಳು ಸೇರಿದಂತೆ) ಕೆಲಸ ಮಾಡಲು ಅನುಮತಿಸಲಾಗಿದೆ. ಈ ಅನುಮತಿಯು ಮಹಿಳಾ ಕಾರ್ಮಿಕರ ಒಪ್ಪಿಗೆ ಮತ್ತು ಕಡ್ಡಾಯ ಸುರಕ್ಷತಾ ಕ್ರಮಗಳಿಗೆ ಒಳಪಟ್ಟಿರುತ್ತದೆ.

ಯುವ ಕಾರ್ಮಿಕರು

ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಖಾತರಿಪಡಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ನೇಮಕಾತಿ ಪತ್ರಗಳನ್ನು ನೀಡುವುದು ಕಡ್ಡಾಯ. ರಜೆಯ ಸಮಯದಲ್ಲಿ ವೇತನ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಎಂಎಸ್‌ಎಂಇ

ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಖಾತರಿಪಡಿಸಲಾಗಿದೆ. ಕ್ಯಾಂಟೀನ್‌, ಕುಡಿಯುವ ನೀರು ಮತ್ತು ವಿಶ್ರಾಂತಿ ಪ್ರದೇಶಗಳಂತಹ ಸೌಲಭ್ಯಗಳಿಗೆ ಪ್ರವೇಶವಿರುತ್ತದೆ. ಪ್ರಮಾಣಿತ ಕೆಲಸದ ಸಮಯ, ಡಬಲ್‌ ಓವರ್‌ಟೈಮ್‌ ವೇತನ ಮತ್ತು ವೇತನ ರಜೆಗಾಗಿ ನಿಬಂಧನೆಗಳು ರೂಪಿಸಲಾಗಿದೆ.

ಬೀಡಿ ಮತ್ತು ಸಿಗರೇಟು ಕಾರ್ಮಿಕರು

ದಿನಕ್ಕೆ 8-12 ಗಂಟೆಯಂತೆ ವಾರಕ್ಕೆ ಗರಿಷ್ಠ 48 ಗಂಟೆಗಳ ಕೆಲಸದ ಸಮಯ ನಿಗದಿಪಡಿಸಲಾಗಿದೆ. ಒಪ್ಪಿಗೆ ಧಾರದ ಮೇಲೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಕೆಲಸ ಮಾಡಿದರೆ ಸಾಮಾನ್ಯ ವೇತನಕ್ಕಿಂತ ಕನಿಷ್ಠ ಎರಡು ಪಟ್ಟು ವೇತನ ಪಾವತಿಸಬೇಕು. ವರ್ಷದಲ್ಲಿ30 ದಿನಗಳ ಕೆಲಸವನ್ನು ಪೂರ್ಣಗೊಳಿಸಿದ ನಂತರ ಕಾರ್ಮಿಕರು ಬೋನಸ್‌ಗೆ ಅರ್ಹರಾಗುತ್ತಾರೆ.

ಪ್ಲಾಂಟೇಷನ್‌

10ಕ್ಕಿಂತ ಹೆಚ್ಚು ಕಾರ್ಮಿಕರು ಅಥವಾ ಐದು ಅಥವಾ ಹೆಚ್ಚು ಹೆಕ್ಟೇರ್‌ ಹೊಂದಿರುವ ತೋಟಗಳಿಗೆ ಕಾರ್ಮಿಕ ಸಂಹಿತೆಗಳು ಅನ್ವಯಿಸುತ್ತವೆ. ರಾಸಾಯನಿಕಗಳನ್ನು ನಿರ್ವಹಿಸುವುದು, ಸಂಗ್ರಹಿಸುವುದು ಮತ್ತು ಬಳಸಲು ಸುರಕ್ಷತಾ ತರಬೇತಿ ಹಾಗೂ ರಕ್ಷಣಾ ಸಾಧನಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಕಾರ್ಮಿಕರು ಮತ್ತು ಅವರ ಕುಟುಂಬಕ್ಕೆ ಪೂರ್ಣ ಇಎಸ್‌ಐ ಸೌಲಭ್ಯ, ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಬೇಕು.

ಅಪಾಯಕಾರಿ ಕೈಗಾರಿಕೆಗಳು

ಕಾರ್ಮಿಕರ ಉತ್ತಮ ಸುರಕ್ಷತೆಗಾಗಿ ಕೇಂದ್ರ ಸರಕಾರವು ರಾಷ್ಟ್ರೀಯ ಮಾನದಂಡಗಳನ್ನು ರೂಪಿಸಲಿದೆ. ಸ್ಥಳದಲ್ಲೇ ಸುರಕ್ಷತಾ ಮೇಲ್ವಿಚಾರಣೆ ಮತ್ತು ಅಪಾಯಕಾರಿ ರಾಸಾಯನಿಕಗಳ ಸುರಕ್ಷಿತ ನಿರ್ವಹಣೆಗಾಗಿ ಪ್ರತಿ ಸ್ಥಳದಲ್ಲಿಸುರಕ್ಷತಾ ಸಮಿತಿ ಕಡ್ಡಾಯಗೊಳಿಸಲಾಗಿದೆ.

ಜವಳಿ

ಎಲ್ಲಾ ವಲಸೆ ಕಾರ್ಮಿಕರು (ನೇರ, ಗುತ್ತಿಗೆ ಮತ್ತು ವಲಸೆ) ಸಮಾನ ವೇತನ, ಕಲ್ಯಾಣ ಪ್ರಯೋಜನಗಳು ಮತ್ತು ಪಿಡಿಎಸ್‌ ಪೋರ್ಟೆಬಿಲಿಟಿ ಪ್ರಯೋಜನಗಳನ್ನು ಪಡೆಯಬಹುದು. ಬಾಕಿ ಇರುವ ವೇತನ ಪಾವತಿ ಇತ್ಯರ್ಥಕ್ಕಾಗಿ ಕಾರ್ಮಿಕರು 3 ವರ್ಷಗಳವರೆಗೆ ಹಕ್ಕುಗಳನ್ನು ಸಲ್ಲಿಸಬಹುದು.

ಐಟಿ ಮತ್ತು ಐಟಿಇಎಸ್‌

ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನವನ್ನು ಕಡ್ಡಾಯವಾಗಿ ಪಾವತಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಕಡ್ಡಾಯ. ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿಕೆಲಸ ಮಾಡುವ ಸೌಲಭ್ಯ. ಕಿರುಕುಳ, ತಾರತಮ್ಯ ಮತ್ತು ವೇತನ ಸಂಬಂಧಿತ ವಿವಾದಗಳನ್ನು ಸಕಾಲದಲ್ಲಿಇತ್ಯರ್ಥಪಡಿಸಬೇಕು.

ರಫ್ತು ವಲಯ

ರಫ್ತು ವಲಯದ ನಿಶ್ಚಿತ ಅವಧಿಯ ಕಾರ್ಮಿಕರು ಗ್ರಾಚ್ಯುಟಿ, ಭವಿಷ್ಯ ನಿಧಿ ಮತ್ತು ಇತರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯುತ್ತಾರೆ. ಪ್ರತಿ ಕಾರ್ಮಿಕನಿಗೆ ವರ್ಷದಲ್ಲಿ 180 ದಿನಗಳ ಕೆಲಸದ ನಂತರ ವಾರ್ಷಿಕ ರಜೆ ಪಡೆಯುವ ಆಯ್ಕೆ ಇರುತ್ತದೆ. ಯಾವುದೇ ಅನಧಿಕೃತ ವೇತನ ಕಡಿತಗಳಿಲ್ಲ ಮತ್ತು ಯಾವುದೇ ವೇತನ ಮಿತಿ ನಿರ್ಬಂಧಗಳಿಲ್ಲ. ಮಹಿಳೆಯರು ಒಪ್ಪಿಗೆಯೊಂದಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ.