ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tejas Crash: ದುಬೈನಲ್ಲಿ ಪತನಗೊಂಡ ತೇಜಸ್‌ ವಿಮಾನದಲ್ಲಿದ್ದ ಪೈಲಟ್‌ ಯಾರು ಗೊತ್ತೆ?

Tejas Crash in Dubai: 2016ರಲ್ಲಿ IAFಗೆ ತೇಜಸ್‌ ವಿಮಾನವನ್ನು ಸೇರಿಸಿದಾಗಿನಿಂದ ಇದು ಎರಡನೇ ಅಪಘಾತವಾಗಿದೆ. 150ಕ್ಕೂ ಹೆಚ್ಚು ದೇಶಗಳು ತಮ್ಮ ಏರೋಸ್ಪೇಸ್ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿರುವ ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ದುಬೈ ಏರ್ ಶೋನಲ್ಲಿ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಅಂತಿಮ ದೃಶ್ಯಗಳಲ್ಲಿ ತೇಜಸ್ ಯುದ್ಧವಿಮಾನ ಇದ್ದಕ್ಕಿದ್ದಂತೆ ಮೂತಿ ಮುಂದಾಗಿ ನೆಲಕ್ಕಪ್ಪಳಿಸಿ ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡಿರುವುದು ಕಂಡುಬಂದಿದೆ.

ದುಬೈನಲ್ಲಿ ಪತನಗೊಂಡ ತೇಜಸ್‌ ವಿಮಾನದಲ್ಲಿದ್ದ ಪೈಲಟ್‌ ಯಾರು ಗೊತ್ತೆ?

ವಿಂಗ್‌ ಕಮಾಂಡರ್‌ ನಮಾಂಶ್‌ ಸಯಾಲ್ -

ಹರೀಶ್‌ ಕೇರ
ಹರೀಶ್‌ ಕೇರ Nov 22, 2025 8:15 AM

ದುಬೈ: ದುಬೈ ವೈಮಾನಿಕ ಪ್ರದರ್ಶನ (Dubai Air Show) ಸಂದರ್ಭದಲ್ಲಿ ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (LCA Mk-1) ಪತನಗೊಂಡು (Tejas Crash in dubai) ಭಾರತೀಯ ವಾಯುಪಡೆಯ (IAF) ಪೈಲಟ್, ವಿಂಗ್ ಕಮಾಂಡರ್ ನಮಾಂಶ್‌ ಸಯಾಲ್ ಶುಕ್ರವಾರ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವಾಯುಸೇನೆ ದೃಢಪಡಿಸಿದೆ. 37 ವರ್ಷದ ನಮಾಂಶ್‌, ಶೋ ಕಾರ್ಯಕ್ರಮದ ಕೊನೆಯ ದಿನದಂದು ಕೆಳಮಟ್ಟದ ಏರೋಬ್ಯಾಟಿಕ್ ಕೌಶಲವನ್ನು ಪ್ರದರ್ಶಿಸುತ್ತಿದ್ದಾಗ, ದುರದೃಷ್ಟಕರ ರೀತಿಯಲ್ಲಿ ಫೈಟರ್ ಜೆಟ್ ಪತನಗೊಂಡಿತ್ತು.

IAF ಒಂದು ಹೇಳಿಕೆಯಲ್ಲಿ, “ದುಬೈ ವೈಮಾನಿಕ ಪ್ರದರ್ಶನದ ಸಮಯದಲ್ಲಿ IAF ತೇಜಸ್ ವಿಮಾನ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಪೈಲಟ್‌ ಮಾರಣಾಂತಿಕವಾಗಿ ಗಾಯಗೊಂದು ಮೃತಪಟ್ಟಿದ್ದು, ಜೀವಹಾನಿಗೆ IAF ತೀವ್ರವಾಗಿ ವಿಷಾದಿಸುತ್ತದೆ ಮತ್ತು ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ಅಪಘಾತದ ಕಾರಣವನ್ನು ಖಚಿತಪಡಿಸಿಕೊಳ್ಳಲು ತನಿಖಾ ಕೋರ್ಟನ್ನು ರಚಿಸಲಾಗುತ್ತಿದೆ” ಎಂದು ತಿಳಿಸಿದೆ.

2016ರಲ್ಲಿ IAFಗೆ ತೇಜಸ್‌ ವಿಮಾನವನ್ನು ಸೇರಿಸಿದಾಗಿನಿಂದ ಇದು ಎರಡನೇ ಅಪಘಾತವಾಗಿದೆ.

ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಯಾರು?

ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರು. ಸ್ಯಾಲ್ ಅವರ ಪತ್ನಿ ಐಎಎಫ್ ಅಧಿಕಾರಿಯೂ ಆಗಿದ್ದಾರೆ. ಅವರಿಗೆ ಆರು ವರ್ಷದ ಮಗಳು ಮತ್ತು ಪೋಷಕರು ಇದ್ದಾರೆ. ನಮಾಂಶ್‌ ಸುಜನ್‌ಪುರ್ ತಿರಾದ ಸೈನಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಅವರನ್ನು ಡಿಸೆಂಬರ್ 24, 2009 ರಂದು ಭಾರತೀಯ ವಾಯುಪಡೆಗೆ ನಿಯೋಜಿಸಲಾಯಿತು.



ಸ್ಯಾಲ್ ಅವರ ಸಂಬಂಧಿ ರಮೇಶ್ ಕುಮಾರ್ ಹೇಳಿದ ಪ್ರಕಾರ ನಮಾಂಶ್ ಅವರ ಪೋಷಕರು ಪ್ರಸ್ತುತ ತಮಿಳುನಾಡಿನ ಕೊಯಮತ್ತೂರು ಬಳಿಯ ಸುಲೂರ್ ವಾಯುಪಡೆ ನಿಲ್ದಾಣದಲ್ಲಿದ್ದಾರೆ. ಅವರ ಪತ್ನಿ ಐಎಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೋರ್ಸ್‌ಗಾಗಿ ಕೋಲ್ಕತ್ತಾದಲ್ಲಿದ್ದಾರೆ. ಅವರ ತಂದೆ ಜಗನ್ನಾಥ್ ಸ್ಯಾಲ್ ಭಾರತೀಯ ಸೇನೆಯ ವೈದ್ಯಕೀಯ ದಳದಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.

ಇದನ್ನೂ ಓದಿ: Tejas Fighter Jet Crash: ದುಬೈ ಏರ್‌ ಶೋನಲ್ಲಿ ಭಾರತದ ತೇಜಸ್‌ ಯುದ್ಧ ವಿಮಾನ ಪತನ

ಹಿಮಾಚಲ ಪ್ರದೇಶ ಶೋಕ

ವಿಜಿ ಕಮಾಂಡರ್ ಸಯಾಲ್ ಅವರ ನಿಧನದ ಸುದ್ದಿ ಅವರ ತವರು ರಾಜ್ಯವನ್ನು ಆಘಾತದಲ್ಲಿ ಮುಳುಗಿಸಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಪೈಲಟ್‌ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ "ದೇಶವು ಧೈರ್ಯಶಾಲಿ, ಕರ್ತವ್ಯನಿಷ್ಠ ಮತ್ತು ಧೈರ್ಯಶಾಲಿ ಪೈಲಟ್ ಅನ್ನು ಕಳೆದುಕೊಂಡಿದೆ" ಎಂದು ಬರೆದಿದ್ದಾರೆ. ವರ ಕುಟುಂಬಕ್ಕೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೂಡ ಈ ಘಟನೆಯನ್ನು "ಅತ್ಯಂತ ಹೃದಯವಿದ್ರಾವಕ ಮತ್ತು ನೋವಿನಿಂದ ಕೂಡಿದ ಘಟನೆ" ಎಂದು ಕರೆದಿದ್ದಾರೆ.

ದುಬೈ ಏರ್ ಶೋನಲ್ಲಿ ಏನಾಯಿತು?

150ಕ್ಕೂ ಹೆಚ್ಚು ದೇಶಗಳು ತಮ್ಮ ಏರೋಸ್ಪೇಸ್ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿರುವ ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ದುಬೈ ಏರ್ ಶೋನಲ್ಲಿ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಅಂತಿಮ ದೃಶ್ಯಗಳಲ್ಲಿ ತೇಜಸ್ ಯುದ್ಧವಿಮಾನ ಇದ್ದಕ್ಕಿದ್ದಂತೆ ಮೂತಿ ಮುಂದಾಗಿ ನೆಲಕ್ಕಪ್ಪಳಿಸಿ ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡಿರುವುದು ಕಂಡುಬಂದಿದೆ. ಕಾರಣ ಏನು ಎಂಬುದರ ಕುರಿತು ಈಗ ವಿಚಾರಣಾ ನ್ಯಾಯಾಲಯ ತನಿಖೆ ನಡೆಸುತ್ತಿದೆ.

ಮಾರ್ಚ್ 2024 ರಲ್ಲಿ ಜೈಸಲ್ಮೇರ್ ಬಳಿ ತರಬೇತಿ ಹಾರಾಟದ ಸಮಯದಲ್ಲಿ ಮತ್ತೊಂದು ತೇಜಸ್ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ ಪೈಲಟ್ ಸುರಕ್ಷಿತವಾಗಿ ಹೊರಹಾರಿದ್ದರು. ಆದರೆ ಈ ಬಾರಿ ಹೊರಹಾರುವಷ್ಟು ಸಮಯ ನಮಾಂಶ್‌ಗೆ ಸಿಕ್ಕಿರಲಿಕ್ಕಿಲ್ಲ ಎಂದು ಊಹಿಸಲಾಗಿದೆ.

ಇದನ್ನೂ ಓದಿ: Tejas Jet: ಬಾನಂಗಳದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ ತೇಜಸ್ ಜೆಟ್‌; ಭಾರತೀಯ ವಾಯುಪಡೆ ಇನ್ನಷ್ಟು ಬಲಿಷ್ಠ