ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಾಮಾಜಿಕ ಮಾಧ್ಯಮಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದ ಕೇಂದ್ರಸರ್ಕಾರ; ಕೃತಕ ಬುದ್ಧಿಮತ್ತೆ, ತಪ್ಪು ಮಾಹಿತಿ ಮೇಲೆ ನಿಗಾ

Centre enforces strict rules: ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾಗುವ ಡೀಪ್‌ಫೇಕ್‌ಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳಿಗೆ ಹೊಸ ಹಾಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ಕಾನೂನು ಪ್ರಕಾರ, ಎಐ ಬಳಸಿ ತಯಾರಿಸಲಾದ ಚಿತ್ರ, ವಿಡಿಯೊ ಹಾಗೂ ಆಡಿಯೊಗಳನ್ನು ಸ್ಪಷ್ಟವಾಗಿ ಗುರುತಿಸುವುದು ಕಡ್ಡಾಯವಾಗಿದೆ.

ಕೃತಕ ಬುದ್ಧಿಮತ್ತೆ, ತಪ್ಪು ಮಾಹಿತಿ ಮೇಲೆ ನಿಗಾ

ಸಾಂದರ್ಭಿಕ ಚಿತ್ರ -

Priyanka P
Priyanka P Feb 10, 2026 8:58 PM

ನವದೆಹಲಿ, ಫೆ10: ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚುತ್ತಿರುವ ಡೀಪ್‌ಫೇಕ್‌ಗಳು (Deepfake law) ಮತ್ತು ತಪ್ಪುಮಾಹಿತಿಯ ಎಐ (AI) ರಚಿತ ವಿಷಯಗಳನ್ನು ತಡೆಗಟ್ಟಲು ಸರ್ಕಾರ ಹೊಸ ಕಾನೂನನ್ನು ಅಧಿಸೂಚಿಸಿದೆ. ಈ ಹೊಸ ಕಾನೂನಿನ ಪ್ರಕಾರ, ಕೃತಕಬುದ್ಧಿಮತ್ತೆಯಿಂದ ರಚಿಸಲಾಗ ವಿಷಯವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಮೋಸಹೋಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ನಿಯಮದಡಿ, ಎಐ ಮೂಲಕ ಸೃಷ್ಟಿಸಿದ ಅಥವಾ ಬದಲಾಯಿಸಿದ ಫೋಟೋ, ವಿಡಿಯೊ ಅಥವಾ ಆಡಿಯೊಗಳನ್ನು (ಡೀಪ್‌ಫೇಕ್‌ಗಳನ್ನೂ ಸೇರಿಸಿ) ಅಪ್‌ಲೋಡ್ ಮಾಡುವವರು, ಅದು ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಲಾಗಿದೆ ಅಥವಾ ತಿದ್ದುಪಡಿ ಮಾಡಲಾಗಿದೆ ಎಂದು ಘೋಷಿಸಬೇಕು. ಇದಲ್ಲದೆ, ಇನ್‌ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಕೂಡ ಎಐ ನಿರ್ಮಿತ ವಿಷಯಗಳಿಗೆ ಸ್ಪಷ್ಟ ಲೇಬಲ್ ಹಾಕಬೇಕು. ಇದರಿಂದ ಬಳಕೆದಾರರು ಅದನ್ನು ನಿಜ ವ್ಯಕ್ತಿ ಅಥವಾ ನಿಜ ಘಟನೆ ಎಂದು ತಪ್ಪಾಗಿ ನಂಬುವ ಸಾಧ್ಯತೆ ಕಡಿಮೆಯಾಗಲಿದೆ.

Rangaswamy Mookanahalli Column: ಎಐ ಎಂಬುದು ಗುಮ್ಮನ ಕಥೆಯಾಗಿ ಉಳಿದಿಲ್ಲ !

AI-ರಚಿತ ಫೈಲ್‌ಗಳು ಮೆಟಾಡೇಟಾ ಎಂದು ಕರೆಯಲ್ಪಡುವ ಗುಪ್ತ ಡಿಜಿಟಲ್ ಟ್ರ್ಯಾಕಿಂಗ್ ಅನ್ನು ಹೊಂದಿರಬೇಕು ಎಂದು ಕಾನೂನು ಆದೇಶಿಸುತ್ತದೆ. ಇದು ತಜ್ಞರಿಗೆ ವಿಷಯವನ್ನು ರಚಿಸಲು ಯಾವ AI ಪರಿಕರವನ್ನು ಬಳಸಲಾಗಿದೆ ಎಂಬುದನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ದುರುಪಯೋಗದ ಸಂದರ್ಭಗಳಲ್ಲಿ ಪತ್ತೆಹಚ್ಚುವಿಕೆಯ ಗುರಿಯನ್ನು ಇದು ಹೊಂದಿದೆ.

ಇದರ ಜೊತೆಗೆ, ಅಕ್ರಮ ಅಥವಾ ಹಾನಿಕಾರಕ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳುವ ಸಮಯಾವಧಿಯನ್ನು ಸರ್ಕಾರ ಬಹಳ ಕಠಿಣಗೊಳಿಸಿದೆ. ಇದುವರೆಗೆ ವರದಿಯಾದ (ಫ್ಲ್ಯಾಗ್ ಮಾಡಿದ) ವಿಷಯವನ್ನು ತೆಗೆದುಹಾಕಲು ಸಾಮಾಜಿಕ ಜಾಲತಾಣಗಳಿಗೆ 36 ಗಂಟೆಗಳವರೆಗೆ ಸಮಯ ಇತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಇಂತಹ ವಿಷಯಗಳನ್ನು ಮಾತ್ರ 3 ಗಂಟೆಗಳ ಒಳಗೆ ತೆಗೆದುಹಾಕುವುದು ಕಡ್ಡಾಯವಾಗಲಿದೆ. ಈ ಕ್ರಮದಿಂದ ಆನ್‌ಲೈನ್ ದುರುಪಯೋಗ, ಸುಳ್ಳು ಮಾಹಿತಿ ಮತ್ತು ಡೀಪ್‌ಫೇಕ್‌ಗಳಿಂದ ಉಂಟಾಗುವ ಹಾನಿಯನ್ನು ತ್ವರಿತವಾಗಿ ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ.

ಇದಲ್ಲದೆ, ಬಳಕೆದಾರರ ದೂರು ಪರಿಹಾರಕ್ಕೆ ನೀಡಿರುವ ಸಮಯಾವಧಿಯನ್ನೂ ಕಡಿತಗೊಳಿಸಲಾಗಿದೆ. ಈ ಹಿಂದೆ ದೂರು ಸಲ್ಲಿಸಿದ ಬಳಿಕ 24 ಗಂಟೆಗಳ ಒಳಗೆ ಪ್ರತಿಕ್ರಿಯಿಸಬೇಕಿದ್ದ ಸಾಮಾಜಿಕ ಜಾಲತಾಣಗಳು, ಇದೀಗ 2 ಗಂಟೆಗಳೊಳಗೆ ದೂರು ಸ್ವೀಕರಿಸಿದ ಬಗ್ಗೆ ದೃಢೀಕರಣ ನೀಡಬೇಕು. ಹಾಗೆಯೇ, ದೂರುಗಳನ್ನು ಪರಿಹರಿಸಲು ಇತ್ತಿಚೆಗೆ ಇದ್ದ 15 ದಿನಗಳ ಬದಲು 7 ದಿನಗಳೊಳಗೆ ಸಮಸ್ಯೆ ಬಗೆಹರಿಸಬೇಕಾಗಿದೆ.

ಈ ಬದಲಾವಣೆಗಳ ಉದ್ದೇಶ ಎಐ ದುರುಪಯೋಗವನ್ನು ತಡೆಯುವುದು, ಆನ್‌ಲೈನ್ ಪಾರದರ್ಶಕತೆಯನ್ನು ಹೆಚ್ಚಿಸುವುದು ಹಾಗೂ ಹಾನಿಕಾರಕ ಡಿಜಿಟಲ್ ವಿಷಯಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.