ದೆಹಲಿಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್; 24 ಗಂಟೆಗಳ ಭೇಟಿಗೆ ಅವರ ಭದ್ರತೆ ಹೇಗಿದೆ?
ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ ಆಗಮಿಸಿದ್ದಾರೆ. 24 ಗಂಟೆಗಳ ಅವರ ಭೇಟಿ ವೇಳೆ ಭದ್ರತೆಗಾಗಿ ಸುಮಾರು 15,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ಅಧ್ಯಕ್ಷ (Chinese President) ಕ್ಸಿ ಜಿನ್‌ಪಿಂಗ್ (Xi Jinping) ಅವರು ಶನಿವಾರ ರಾಷ್ಟ್ರ ರಾಜಧಾನಿಗೆ ದೆಹಲಿಗೆ (Delhi) ಆಗಮಿಸಿದ್ದಾರೆ. ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಅವರಿಗೆ ಬಹು ಹಂತದ ಭದ್ರತೆಯನ್ನು (Multi-Layered Security) ಒದಗಿಸಲು ಸುಮಾರು 15,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಡಿ ಭದ್ರತೆ ಸೇರಿದಂತೆ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯತ್ತ ಇತ್ತೀಚೆಗೆ ನಡೆದ ಸರಣಿ ಉನ್ನತ ಮಟ್ಟದ ಮಾತುಕತೆಗಳ ನಡುವೆ ಚೀನಾ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಚೀನಾದ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮ ಪ್ರಮುಖರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವು ದೆಹಲಿಗೆ ಆಗಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಇವರ ನಡುವೆ ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಪಟ್ಟ ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದೆ.
ಉಗ್ರಗಾಮಿ ಚಟುವಟಿಕೆಗೆ ನೆರವು: ಭಯೋತ್ಪಾದಕ ಹಫೀಜ್ ಸಯೀದ್ ಗೆ ಜಾಮೀನು ರಹಿತ ವಾರಂಟ್ ಜಾರಿ
ಬಹು-ಹಂತದ ಭದ್ರತೆ
ದೆಹಲಿಗೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭದ್ರತಾ ವ್ಯವಸ್ಥೆಗಳನ್ನು ಅತ್ಯುನ್ನತ ಮಟ್ಟದಲ್ಲಿ ರೂಪಿಸಲಾಗಿದೆ. ಅವರ ಸಂಚಾರ ಮತ್ತು ವಾಸ್ತವ್ಯದ ಭದ್ರತೆಗಾಗಿ ಅನೇಕ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ಅವರು ತಂಗಲಿರುವ ಹೋಟೆಲ್ ಪ್ರದೇಶವನ್ನು ವಿಮಾನ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಭಯೋತ್ಪಾದನಾ ವಿರೋಧಿ ಮತ್ತು ಬಾಂಬ್ ಪತ್ತೆ ಹಚ್ಚುವ ತಂಡಗಳನ್ನು ನಿಯೋಜಿಸಲಾಗಿದೆ.
#WATCH | Delhi: Chinese President Xi Jinping arrives in Delhi to participate in the BRICS Summit 2026.
— ANI (@ANI) September 12, 2026
Union MoS Jitin Prasada received him at the airport. pic.twitter.com/fk77Bq5nmy
ಹೋಟೆಲ್‌ನಲ್ಲಿ ವ್ಯಾಪಕ ಭದ್ರತಾ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಸಂಭಾವ್ಯ ಪರಮಾಣು, ವಿಕಿರಣ ಮತ್ತು ಜೈವಿಕ ರಾಸಾಯನಿಕ ಬೆದರಿಕೆಗಳನ್ನು ಪತ್ತೆಹಚ್ಚುವ ಕ್ರಮಗಳು ಸೇರಿವೆ. ಆವರಣದ ಸುತ್ತಮುತ್ತಲಿನ ಭೂಗತ ಪೈಪ್‌ಲೈನ್‌ಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸಹ ಪರಿಶೀಲಿಸಲಾಗುತ್ತದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭಾರತ ಭೇಟಿಗೆ ಸುಮಾರು 10 ದಿನಗಳ ಮುಂಚಿತವಾಗಿಯೇ ಚೀನಾ ಸರಕು ಸಾಗಣೆ ವಿಮಾನದ ಮೂಲಕ ಅವರ 'ಹಾಂಗ್‌ಕಿ' ಅಧಿಕೃತ ಲಿಮೋಸಿನ್ ಕಾರು, ಹೆಚ್ಚುವರಿಯಾಗಿ ಒಂದು ಬ್ಯಾಕಪ್ ವಾಹನ ಮತ್ತು ಸಂವಹನ ಉಪಕರಣಗಳನ್ನು ಭಾರತಕ್ಕೆ ಕಳುಹಿಸಲಾಗಿತ್ತು. ಚೀನಾ ಅಧ್ಯಕ್ಷರು ಸುಮಾರು 24 ಗಂಟೆಗಳ ಕಾಲ ಭಾರತದಲ್ಲಿರಲಿದ್ದು ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಭಾರತದಿಂದ ನಿರ್ಗಮಿಸಲಿದ್ದಾರೆ.
ಅವರ ಭದ್ರತಾ ತಂಡಗಳು ತಂದಿರುವ ಕೆಲವು ಉಪಕರಣಗಳನ್ನು ಭಾರತದ ನಿಯಮಗಳಿಗೆ ಅನುಸಾರವಾಗಿ ಬಳಸಬೇಕಾಗುತ್ತದೆ. ಉಪಗ್ರಹ ಸಂವಹನ ಉಪಕರಣಗಳಿಗೆ ಭಾರತದಲ್ಲಿ ಅನುಮತಿಯಿಲ್ಲ. ಕೆಲವು ಶಸ್ತ್ರಾಸ್ತ್ರಗಳು ಮತ್ತು ಭದ್ರತಾ ಉಪಕರಣಗಳನ್ನು ಬಳಸುವಂತಿಲ್ಲ. ಅವುಗಳನ್ನು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಒಪ್ಪಿಸಬೇಕಾಗುತ್ತದೆ.
ಭದ್ರತಾ ಸಂಬಂಧಿತ ವಿಷಯಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿಯಮಾವಳಿಗಳ ಅಡಿಯಲ್ಲಿ ದೆಹಲಿ ಪೊಲೀಸ್ ಮತ್ತು ಇತರ ಏಜೆನ್ಸಿಗಳೊಂದಿಗೆ ಸಮನ್ವಯಗೊಳಿಸಲಾಗುತ್ತಿದೆ. ಅವರು ಏರ್ ಚೀನಾ ನಿರ್ವಹಿಸುವ ಮಾರ್ಪಡಿಸಿದ ಬೋಯಿಂಗ್ 747-8 ವಿಮಾನದಲ್ಲಿ ಪ್ರಯಾಣಿಸಲಿದ್ದು, ಇದು ಚೀನಾದ ಪ್ರಮುಖ ಸರ್ಕಾರಿ ವಿಮಾನ ಮತ್ತು ಚಲಿಸುವ ಕಮಾಂಡ್ ಸೆಂಟರ್ (ನಿಯಂತ್ರಣ ಕೇಂದ್ರ) ಆಗಿ ಕಾರ್ಯನಿರ್ವಹಿಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೋಯಿಂಗ್ 747-8 ಮೂಲತಃ ವಾಣಿಜ್ಯ ಪ್ರಯಾಣಿಕರ ಜೆಟ್ ಆಗಿತ್ತು. ಇದನ್ನು 2014ರಿಂದ ಏರ್ ಚೀನಾದ ಸೇವೆಗೆ ಸೇರಿಸಲಾಯಿತು. ಬಳಿಕ ಹಲವು ತಿಂಗಳ ಕಾಲ ನಡೆದ ಮಾರ್ಪಾಡು ಕಾರ್ಯಗಳಿಗಾಗಿ 2015 ರ ಮೇ ತಿಂಗಳಲ್ಲಿ ಸೇವೆಯಿಂದ ಹಿಂಪಡೆಯಲಾಯಿತು. ಅಂತಿಮವಾಗಿ, ವಿಐಪಿ ಶೈಲಿಯ ಒಳಾಂಗಣ ವಿನ್ಯಾಸ, ಸುರಕ್ಷಿತ ಸಂವಹನ ವ್ಯವಸ್ಥೆ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳೊಂದಿಗೆ ಇದನ್ನು 2016ರಲ್ಲಿ ಮತ್ತೆ ಸರ್ಕಾರಿ ಸೇವೆಗೆ ಸೇರಿಸಲಾಯಿತು.
ಈ ವಿಮಾನವು ಎನ್‌ಕ್ರಿಪ್ಟ್ ಮಾಡಿದ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಹೊಂದಿದೆ. ಇದು ಜಿನ್‌ಪಿಂಗ್ ಅವರು ನಿರಂತರವಾಗಿ ಸರ್ಕಾರಿ ಮತ್ತು ಮಿಲಿಟರಿ ಕಮಾಂಡ್ ಸೆಂಟರ್‌ಗಳೊಂದಿಗೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಇದು ಬೆದರಿಕೆ ಪತ್ತೆಹಚ್ಚುವ ವ್ಯವಸ್ಥೆಗಳು, ಕ್ಷಿಪಣಿ ರಕ್ಷಣಾ ಕ್ರಮಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ರಕ್ಷಿಸಲು ಇಎಂಪಿ ಶೀಲ್ಡಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
ನಮೋ ಡ್ರೋನ್ ದೀದಿ ಯೋಜನೆ: ಕೃಷಿ ಡ್ರೋನ್‌ಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶ
ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿದೆಹಲಿಯಾದ್ಯಂತ 15,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳ 200 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹಲವು ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಶಾಂತಿ ಪಥದ ನಡುವಿನ ಮಾರ್ಗದಲ್ಲಿ 700 ಕ್ಕೂ ಹೆಚ್ಚು ಸಿಸಿಟಿವಿ ಕೆಮರಾಗಳು ಮತ್ತು ಐದು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಇಲ್ಲಿಂದ ಸುಮಾರು 500 ಕೆಮರಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.