ಇರಾನ್ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮಸೂದ್ ಪೆಜೆಶ್ಕಿಯಾನ್ ಭಾರತ ಭೇಟಿ; ಪಶ್ಚಿಮ ಏಷ್ಯಾ ಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ
Masoud Pezeshkian: ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ನವದೆಹಲಿಯಲ್ಲಿ ಭೇಟಿಯಾಗಿ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳು ಹಾಗೂ ಭಾರತ–ಇರಾನ್ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದರು. ಎಲ್ಲ ಸಮಸ್ಯೆಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂದು ಮೋದಿ ಪುನರುಚ್ಚರಿಸಿದರು.
ಮಸೂದ್ ಪೆಜೆಶ್ಕಿಯಾನ್ ಮತ್ತು ನರೇಂದ್ರ ಮೋದಿ -
ನವದೆಹಲಿ, ಸೆ. 11: ಬ್ರಿಕ್ಸ್ ಶೃಂಗಸಭೆಯ (BRICS Summit) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Iranian President Masoud Pezeshkian) ನವದೆಹಲಿಯಲ್ಲಿ ಭೇಟಿಯಾಗಿ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳು ಹಾಗೂ ಭಾರತ–ಇರಾನ್ ದ್ವಿಪಕ್ಷೀಯ ಸಂಬಂಧಗಳ (India-Iran Bilateral Relations) ಕುರಿತು ಚರ್ಚೆ ನಡೆಸಿದರು. ಆಗಸ್ಟ್ 31ರಂದು ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ (Shanghai Cooperation Organisation Summit) ಬಳಿಕ ಇಬ್ಬರು ನಾಯಕರು ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ. 2024ರಲ್ಲಿ ಇರಾನ್ ಅಧ್ಯಕ್ಷರಾದ ಬಳಿಕ ಪೆಜೆಶ್ಕಿಯಾನ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.
ಭೇಟಿಯ ವೇಳೆ ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿ ಕುರಿತು ಇಬ್ಬರೂ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಎಲ್ಲ ಸಮಸ್ಯೆಗಳಿಗೂ ಸಂವಾದ ಮತ್ತು ರಾಜತಾಂತ್ರಿಕತೆಯ (Dialogue and Diplomacy) ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂಬ ಭಾರತದ ನಿರಂತರ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಸೂದ್ ಪೆಜೆಶ್ಕಿಯಾನ್ ಮತ್ತು ನರೇಂದ್ರ ಮೋದಿ ಮಾತುಕತೆ:
From Bishkek to Delhi, the productive discussions continue.
— Narendra Modi (@narendramodi) September 11, 2026
Happy to have met Dr. Masoud Pezeshkian, the President of Iran. This visit is more special because it is his first visit to India.
We talked about the India-Iran friendship. We believe that we should move forward… pic.twitter.com/DtxWuhB9Ba
ಪ್ರದೇಶದಲ್ಲಿ ದೀರ್ಘಕಾಲೀನ ಶಾಂತಿ ಮತ್ತು ಸ್ಥಿರತೆ ಕಾಪಾಡಲು ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ. ಜತೆಗೆ ಸಮುದ್ರ ಸಂಚಾರ ಮತ್ತು ವ್ಯಾಪಾರದ ಸ್ವಾತಂತ್ರ್ಯ ಹಾಗೂ ನಾವಿಕರ ಸುರಕ್ಷತೆ ಮತ್ತು ಕ್ಷೇಮಕ್ಕೂ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಭಾರತ–ಇರಾನ್ ಸ್ನೇಹದ ಬಗ್ಗೆ ಚರ್ಚೆ
ಸಾಮಾಜಿಕ ಜಾಲತಾಣದಲ್ಲಿ ಮೋದಿ, ಭಾರತ–ಇರಾನ್ ಸ್ನೇಹ ಕುರಿತು ಚರ್ಚಿಸಿದ್ದೇವೆ. ದೀರ್ಘಕಾಲೀನ ಮತ್ತು ಎರಡೂ ದೇಶಗಳಿಗೆ ಲಾಭದಾಯಕ ಕಾರ್ಯತಂತ್ರದೊಂದಿಗೆ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯನ್ನೂ ಚರ್ಚಿಸಲಾಗಿದ್ದು, ಶಾಶ್ವತ ಶಾಂತಿಗಾಗಿ ಭಾರತ ತನ್ನ ಬದ್ಧತೆಯಲ್ಲಿ ದೃಢವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಇರಾನ್ ಜತೆಗಿನ ಸಂಬಂಧ, ಕೊಲ್ಲಿ ರಾಷ್ಟ್ರಗಳೊಂದಿಗಿನ ಸಮತೋಲನ
ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಭಾರತವು ಇರಾನ್‌ನೊಂದಿಗಿನ ಐತಿಹಾಸಿಕ ಸಂಬಂಧ ಮತ್ತು ಕೊಲ್ಲಿ ರಾಷ್ಟ್ರಗಳೊಂದಿಗಿನ ತನ್ನ ಸಂಬಂಧಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ.
ಪುಟಿನ್‌ಗೆ ತಮಿಳು ಶ್ರೇಷ್ಠ ಕೃತಿ ʼತಿರುಕ್ಕುರಳ್ʼನ ರಷ್ಯನ್ ಅನುವಾದ ಉಡುಗೊರೆಯಾಗಿ ನೀಡಿದ ಪ್ರಧಾನಿ ನರೇಂದ್ರ ಮೋದಿ
ಹೊರ್ಮುಜ್ ಜಲಸಂಧಿ ಸಮೀಪ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳಿಂದ ಭಾರತೀಯ ನಾವಿಕರು ಮೃತಪಟ್ಟಿರುವುದು ಮತ್ತು ಗಾಯಗೊಂಡಿರುವುದಕ್ಕೂ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಂಘರ್ಷದಲ್ಲಿ ಮೃತಪಟ್ಟ 16 ಭಾರತೀಯರ ಪೈಕಿ 10 ಮಂದಿ ಭಾರತೀಯ ನಾವಿಕರು ಎಂದು ವರದಿಯಾಗಿದೆ. ಇದರ ನಡುವೆ ಹೊರ್ಮುಜ್ ಜಲಸಂಧಿಯ ಇರಾನ್ ಬಂದ್ ಪಶ್ಚಿಮ ಏಷ್ಯಾದಿಂದ ಭಾರತಕ್ಕೆ ಇಂಧನ ಮತ್ತು ರಸಗೊಬ್ಬರಗಳ ಪೂರೈಕೆಯ ಮೇಲೂ ಪರಿಣಾಮ ಬೀರಿದೆ.
ಚಾಬಹಾರ್ ಬಂದರು ಮತ್ತು ಬ್ರಿಕ್ಸ್ ಚರ್ಚೆ
ಭಾರತ–ಇರಾನ್ ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳ ಬಗ್ಗೆಯೂ ಇಬ್ಬರು ನಾಯಕರು ಚರ್ಚಿಸಿದರು. ಕಠಿಣ ಪರಿಸ್ಥಿತಿಗಳ ನಡುವೆಯೂ ಬ್ರಿಕ್ಸ್ ಸಂಬಂಧಿತ ಸಭೆಗಳಲ್ಲಿ ಇರಾನ್ ನಿರಂತರವಾಗಿ ಉನ್ನತ ಮಟ್ಟದ ಭಾಗವಹಿಸುವಿಕೆ ತೋರಿರುವುದಕ್ಕೆ ಮೋದಿ ಧನ್ಯವಾದ ಸಲ್ಲಿಸಿದರು. ಜಾಗತಿಕ ದಕ್ಷಿಣದ ರಾಷ್ಟ್ರಗಳಲ್ಲಿ ಸ್ಥಿತಿಸ್ಥಾಪಕತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯ ಮನೋಭಾವ ಬೆಳೆಸುವಲ್ಲಿ ಬ್ರಿಕ್ಸ್ ಪ್ರಮುಖ ಪಾತ್ರ ವಹಿಸಬಹುದು ಎಂದು ಮೋದಿ ಹೇಳಿದ್ದಾರೆ.
ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಒಮ್ಮತದ ನಾಯಕರ ಘೋಷಣೆಯನ್ನು ರೂಪಿಸುವಲ್ಲಿ ಇರಾನ್ ಕೂಡ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಇರಾನ್ ಮತ್ತು ಯುಎಇ ನಡುವಿನ ಭಿನ್ನಾಭಿಪ್ರಾಯಗಳು ಈಗಾಗಲೇ ಕೆಲವು ಸಚಿವ ಮಟ್ಟದ ಸಭೆಗಳಲ್ಲಿ ಒಮ್ಮತಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಪೆಜೆಶ್ಕಿಯಾನ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.