ಸಂಸತ್ ಮುತ್ತಿಗೆಗೆ ಸಿಜೆಪಿ ಯತ್ನ: ಲಾಠಿಚಾರ್ಜ್, ಆಶ್ರುವಾಯು ಪ್ರಯೋಗ; ಇಂದು ದೆಹಲಿಯಲ್ಲಿ ಏನೆಲ್ಲಾಯ್ತು?
CJP: ದೇಶದ ಪ್ರಮುಖ ಪರೀಕ್ಷೆಗಳ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿಯಲ್ಲಿ ಸಂಸತ್ ಭವನದತ್ತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ಹಾಗೂ ಆಶ್ರುವಾಯು ಪ್ರಯೋಗ ನಡೆಸಿದ್ದು, ಕೇಂದ್ರ ದೆಹಲಿಯ ಕೆಲ ಭಾಗಗಳಲ್ಲಿ ಇಂಟರ್‌ನೆಟ್ ಸೇವೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಘಟನೆ ಮುಂಗಾರು ಅಧಿವೇಶನದ ಮೊದಲ ದಿನವೇ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಸಿಜೆಪಿ ಸಂಸತ್ ಮಾರ್ಚ್‌ಗೆ ತಡೆ ಒಡ್ಡಿದ ಪೊಲೀಸ್ ತಡೆ -
ನವದೆಹಲಿ, ಜು. 20: ಸಂಸತ್ತಿನ ಮುಂಗಾರು ಅಧಿವೇಶನ (Monsoon Session) ಆರಂಭವಾಗುತ್ತಿದ್ದಂತೆ, ದೇಶದ ಪ್ರಮುಖ ಪರೀಕ್ಷೆಗಳ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಿಂದಾಗಿ ದೆಹಲಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ಸಂಸತ್ ಭವನದತ್ತ (Parliament complex) ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಸಂಸತ್ತಿನ ಬೃಹತ್ ಕಬ್ಬಿಣದ ಗೇಟ್‌ಗಳನ್ನು ಭದ್ರಪಡಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಸಿಜೆಪಿ ಹಮ್ಮಿಕೊಂಡಿರುವ ಈ ಸಂಸತ್ ಮಾರ್ಚ್ ಹಿನ್ನೆಲೆಯಲ್ಲಿ ಸಂಸತ್ ಸಂಕೀರ್ಣದ ಸುತ್ತಲೂ ಬಹುಸ್ತರದ ಭದ್ರತಾ ಕೋಟೆಯನ್ನು ನಿರ್ಮಿಸಲಾಗಿದೆ. ಮುಂಗಾರು ಅಧಿವೇಶನದ ಮೊದಲ ದಿನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ತದನಂತರ ಸಂಸತ್ತಿನ ಆವರಣದಿಂದ ನಿರ್ಗಮಿಸಿದರು.
ಏನಿದು ಕಾಕ್ರೋಚ್ ಜನತಾ ಪಾರ್ಟಿ?
ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಅಭಿಜಿತ್ ದೀಪ್ಕೆ ಮೇಯಲ್ಲಿ ಈ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ದೇಶದ ಕೆಲವು ಯುವಕರನ್ನು 'ಜಿರಳೆಗಳು' ಎಂದು ಸಂಬೋಧಿಸಿದ ಮರುದಿನವೇ ಈ ವಿಡಂಬನಾತ್ಮಕ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ಸಿಜೆಐ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರೂ, ಈ ಸಂಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಆಫ್‌ಲೈನ್‌ನಲ್ಲಿ ದೇಶದ ಯುವಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಈಗ ಬೃಹತ್ ಚಳವಳಿಯಾಗಿ ಮಾರ್ಪಟ್ಟಿದೆ.
ದೇಶದ ಪ್ರಮುಖ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಜೂನ್ 28ರಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜುಲೈ 18 ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಇದು ಸಿಜೆಪಿ ಪ್ರತಿಭಟನೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಲು ಸಜ್ಜಾದ ವಿರೋಧ ಪಕ್ಷಗಳು
ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮತ್ತು ಇಂಟರ್‌ನೆಟ್ ಸ್ಥಗಿತ
ಪ್ರತಿಭಟನಾಕಾರರು ಸಂಸತ್ತಿನ ಸಮೀಪಕ್ಕೆ ಮುನ್ನುಗ್ಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಮತ್ತು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ನೂರಾರು ಪ್ರತಿಭಟನಾಕಾರರು ಕನ್ನಾಟ್ ಪ್ಲೇಸ್‌ನಿಂದ ಜಂತರ್ ಮಂತರ್ ಮತ್ತು ಸಂಸತ್ ಭವನದ ಕಡೆಗೆ ರ‍್ಯಾಲಿ ನಡೆಸಿ, ರಿಸರ್ವ್ ಬ್ಯಾಂಕ್ ಸಮೀಪದ ರೈಸಿನಾ ರಸ್ತೆಯನ್ನು ತಲುಪಿದ್ದಾರೆ. ಶಾಸ್ತ್ರಿ ಭವನದ ಬಳಿಯೂ ಜನಸಮೂಹವನ್ನು ಚದುರಿಸಲು ಪೊಲೀಸರು ಯತ್ನಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ಪೊಲೀಸ್ ಕ್ರಮದ ಕುರಿತು ಸಿಜೆಪಿ ತನ್ನ 'X' ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ಇದೇನು ಯುದ್ಧ ವಲಯವೇ? ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ಯಾಕೆ ಆಶ್ರುವಾಯು ದಾಳಿ ನಡೆಸುತ್ತಿದ್ದಾರೆ? ನರೇಂದ್ರ ಮೋದಿ, ನಮ್ಮ ದೇಶ ಪ್ರಜಾಪ್ರಭುತ್ವವಾಗಿ ಉಳಿದಿಲ್ಲ ಎಂದು ನೀವು ನಿರ್ಧರಿಸಿದ್ದೀರಾ?" ಎಂದು ಪ್ರಶ್ನಿಸಿದೆ. ಅಲ್ಲದೆ, ಸಂಸತ್ತಿನ ಭದ್ರತಾ ಪಡೆಗಳು ಜಾಗೃತರಾಗಿ ನಿಂತಿರುವ ವಿಡಿಯೊವನ್ನು ಹಂಚಿಕೊಂಡಿರುವ ಸಂಘಟನೆ, "ದಯವಿಟ್ಟು ದೇಶದ ಯುವಕರ ಮೇಲೆ ಗುಂಡು ಹಾರಿಸಬೇಡಿ, ಅವರು ಯಾವುದೇ ಅನುಚಿತ ಬೇಡಿಕೆ ಇಡುತ್ತಿಲ್ಲ. ಸರ್ಕಾರದ ಅಸಮರ್ಥತೆಯಿಂದಾಗಿ ಸಾಯುತ್ತಿರುವ ವಿದ್ಯಾರ್ಥಿಗಳ ಪರವಾಗಿ ಕೇವಲ ಹೊಣೆಗಾರಿಕೆಯನ್ನು ಕೇಳುತ್ತಿದ್ದಾರೆ" ಎಂದು ಬರೆದುಕೊಂಡಿದೆ.