ಸ್ಟಿಂಗ್ ಆಪರೇಷನ್ ಪ್ರಕರಣ; ದೆಹಲಿ ಮೂಲದ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ದೆಹಲಿ ಮೂಲದ ರಿತೇಶ್ ಪಾಂಡೆಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ವಿಡಿಯೋವನ್ನು (Sting operation case) ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ದೆಹಲಿ ಮೂಲದ ರಿತೇಶ್ ಪಾಂಡೆಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬೆಂಗಳೂರಿನ ಸಿಸಿಬಿ ಪೊಲೀಸರು ನಿನನ್ನೆ ರಿತೇಶ್‌ನನ್ನು ಬಂಧಿಸಿದ್ದರು.
ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಬೆಂಗಳೂರು ತೊರೆಯುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬ ಕಠಿಣ ಷರತ್ತುಗಳೊಂದಿಗೆ ಇದೀಗ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ರಿತೇಶ್ ಪಾಂಡೆ ಎಂದು ಗುರುತಿಸಲಾಗಿದೆ. ಈತ ಕರ್ನಾಟಕ ಹನಿಟ್ರ್ಯಾಪ್' ಎಂಬ ಯೂಟ್ಯೂಬ್ ಚಾನೆಲ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಿಂದ ರೂ.15,000 ರೂ. ಬೆಲೆಯ ಹಳೆಯ ಮೊಬೈಲ್ ಖರೀದಿಸಿದ್ದ ಎಂದು ತಿಳಿದು ಬಂದಿದೆ. ಬಳಿಕ ಯುಎಸ್‌ಬಿ ಡ್ರೈವ್ ಬಳಸಿ ವಿಡಿಯೋವನ್ನು ಇಂಟರ್ನೆಟ್‌ಗೆ ಅಪ್‌ಲೋಡ್ ಮಾಡಿದ್ದ.
ಸ್ಟಿಂಗ್ ಆಪರೇಷನ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಕೃಪಾ ಆಳ್ವಾ ವಿಚಾರಣೆ ನಡೆಸಿದ್ದಾರೆ. ಸಿಸಿಬಿ ನೋಟಿಸ್ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ, ತಮಗೆ ಗೊತ್ತಿರುವ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಬೇರೆಯವರ ಪಾತ್ರ ಏನು? ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಲಾಗಿತ್ತು ಎಂಬ ಬಗ್ಗೆ ಸೈಬರ್ ಕ್ರೈಂ ಬ್ರ್ಯಾಂಚ್ ಪೊಲೀಸರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಕಂಪನ; ಬೆಂಗಳೂರು ಸಿಸಿಬಿ ಪೊಲೀಸರ ಎದುರು ಕಾಂಗ್ರೆಸ್ ನಾಯಕಿ ಶರಣು
ಸ್ಟಿಂಗ್ ಆಪರೇಷನ್ ಕುರಿತಂತೆ ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಸ್ಟಿಂಗ್ ಅಪರೇಷನ್ ಒಂದು ಸುಳ್ಳಿನ ಕೇಸು. ಸತ್ಯ ಹೊರಗಡೆ ಬರಲಿ ಎಂದು ನಾನೇ ದೂರು ಕೊಟ್ಟಿದ್ದೇನೆ. ಹೆಚ್ಚಿನ ಪ್ರಸಾರ ಬೇಡ ಎಂದು ಸಿವಿಲ್ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದೇನೆ. ತನಿಖೆ ಪಾರದರ್ಶಕವಾಗಿ ಆಗಲಿ ಎಂದು ಆಗ್ರಹಿಸಿದ್ದರು.