ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಂಗಾಳಕೊಲ್ಲಿಯಲ್ಲಿ ‘ಅರ್ನಬ್’ಭೀತಿ: ಚಂಡಮಾರುತಕ್ಕೆ ಹೆಸರಿಟ್ಟ ದೇಶ ಯಾವುದು? ಇದರ ಅರ್ಥವೇನು?

Arnab Cyclone: ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತಗಳಿಗೆ ಹೆಸರಿಡುವ ಅಂತಾರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ, ಈ ಚಂಡಮಾರುತಕ್ಕೆ ಬಾಂಗ್ಲಾದೇಶ 'ಅರ್ನಬ್' ಎಂಬ ಹೆಸರನ್ನು ನೀಡಿದೆ. ಬಂಗಾಳಿ ಭಾಷೆಯಲ್ಲಿ 'ಅರ್ನಬ್' ಎಂದರೆ 'ಮಹಾಸಾಗರ' ಅಥವಾ 'ಸಮುದ್ರ' ಎಂದರ್ಥ.

ಬಂಗಾಳಕೊಲ್ಲಿಯಲ್ಲಿ ಅರ್ನಬ್ ಭೀತಿ: ಚಂಡಮಾರುತಕ್ಕೆ ಹೆಸರಿಟ್ಟ ದೇಶ ಯಾವುದು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 26, 2026 10:59 AM

ನವದೆಹಲಿ: ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತಗಳಿಗೆ ಹೆಸರಿಡುವ ಅಂತಾರಾಷ್ಟ್ರೀಯ (Arnab Cyclone) ನಿಯಮಾವಳಿಗಳ ಪ್ರಕಾರ, ಈ ಚಂಡಮಾರುತಕ್ಕೆ ಬಾಂಗ್ಲಾದೇಶ 'ಅರ್ನಬ್' ಎಂಬ ಹೆಸರನ್ನು ನೀಡಿದೆ. ಬಂಗಾಳಿ ಭಾಷೆಯಲ್ಲಿ 'ಅರ್ನಬ್' ಎಂದರೆ 'ಮಹಾಸಾಗರ' ಅಥವಾ 'ಸಮುದ್ರ' ಎಂದರ್ಥ. ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ವಿಶ್ವಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್‌ನ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ಮಾರ್ಗಸೂಚಿಗಳ ಅನ್ವಯ ಈ ಪ್ರಕ್ರಿಯೆ ನಡೆಯುತ್ತದೆ.

ಬಂಗಾಳಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ವ್ಯಾಪ್ತಿಗೆ ಬರುವ ಭಾರತ ಸೇರಿದಂತೆ 13 ದೇಶಗಳ ಒಕ್ಕೂಟವು (ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುಎಇ ಮತ್ತು ಯೆಮನ್) ಚಂಡಮಾರುತಗಳ ಹೆಸರುಗಳನ್ನು ಮುಂಚಿತವಾಗಿಯೇ ನಿರ್ಧರಿಸುತ್ತವೆ.

ಈ 13 ದೇಶಗಳು ತಲಾ 13 ಹೆಸರುಗಳಂತೆ ಒಟ್ಟು 169 ಹೆಸರುಗಳ ಅಧಿಕೃತ ಪಟ್ಟಿಯನ್ನು ಸಿದ್ಧಪಡಿಸಿವೆ. ಚಂಡಮಾರುತಗಳು ಉಂಟಾದಾಗ ಈ ದೇಶಗಳ ಇಂಗ್ಲಿಷ್ ಅಕಾರಾದಿ ಸರದಿಯ ಪ್ರಕಾರ ಒಂದೊಂದೇ ಹೆಸರನ್ನು ಇಡಲಾಗುತ್ತದೆ. ಅದರಂತೆ ಈಗ ಬಾಂಗ್ಲಾದೇಶದ ಸರದಿ ಬಂದಿದ್ದರಿಂದ 'ಅರ್ನಬ್' ಹೆಸರನ್ನು ಅಧಿಕೃತವಾಗಿ ಬಳಸಲಾಗಿದೆ. ಇದರ ಮುಂದಿನ ಸರದಿಯಲ್ಲಿ ಭಾರತ ಸೂಚಿಸಿರುವ ಹೆಸರು ಬಳಕೆಯಾಗಲಿದೆ.

ಹೆಸರಿಡುವುದರ ಹಿಂದಿನ ಉದ್ದೇಶವೇನು?

ಒಂದೇ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಚಂಡಮಾರುತಗಳು ಸೃಷ್ಟಿಯಾದಾಗ ವಿಜ್ಞಾನಿಗಳು, ಮಾಧ್ಯಮಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳ ನಡುವೆ ಯಾವುದೇ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ಈ ಪದ್ಧತಿ ಜಾರಿಯಲ್ಲಿದೆ. ತಾಂತ್ರಿಕ ಸಂಖ್ಯೆಗಳಿಗಿಂತ ಇಂತಹ ಹೆಸರುಗಳು ಮುನ್ನೆಚ್ಚರಿಕೆ ಸಂದೇಶಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸಲು ನೆರವಾಗುತ್ತವೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ: ಅಕ್ಟೋಬರ್ 28ರಿಂದ ಭಾರಿ ಮಳೆ ಸಾಧ್ಯತೆ

ಭಾರತದಲ್ಲಿ ಚಂಡಮಾರುತಗಳಿಗೆ ಹೆಸರಿಡುವವರು ಯಾರು?

ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರ ಸೇರಿದಂತೆ ಉತ್ತರ ಹಿಂದೂ ಮಹಾಸಾಗರದಲ್ಲಿ ಬೆಳೆಯುವ ಉಷ್ಣವಲಯದ ಚಂಡಮಾರುತಗಳು ಅಗತ್ಯ ತೀವ್ರತೆಯ ಮಾನದಂಡಗಳನ್ನು ಪೂರೈಸಿದ ನಂತರ ಅವುಗಳನ್ನು ಹೆಸರಿಸುವ ಜವಾಬ್ದಾರಿಯನ್ನು ನವದೆಹಲಿಯಲ್ಲಿರುವ IMD ಯ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರ (RSMC) ಹೊಂದಿದೆ.