ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪ್ರಜಾಪ್ರಭುತ್ವದ ಗೆಲುವು: ಸೋನಮ್ ವಾಂಗ್ಚುಕ್ ಮೊದಲ ಪ್ರತಿಕ್ರಿಯೆ
ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಸುಮಾರು ಎರಡು ತಿಂಗಳ ಕಾಲ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಫಲವಾಗಿ ಶನಿವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು 26 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು, ಸರ್ಕಾರದ ಭರವಸೆಯ ಬಳಿಕ ಗುರುವಾರ ರಾತ್ರಿ ಉಪವಾಸವನ್ನು ಅಂತ್ಯಗೊಳಿಸಿದ್ದರು. ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಅವರು ಇದೀಗ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan) ಅವರ ರಾಜೀನಾಮೆ ಪ್ರಜಾಪ್ರಭುತ್ವದ ಬಹುದೊಡ್ಡ ಗೆಲುವು ಎಂದು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಹೇಳಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET UG Paper leak) ವಿಚಾರವಾಗಿ ಕಳೆದ ಸುಮಾರು ಎರಡು ತಿಂಗಳಿನಿಂದ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಈ ಮೂಲಕ ಕೊನೆಯಾಗುವ ನಿರೀಕ್ಷೆ ಹೆಚ್ಚಿದೆ. ಕಾಕ್ರೋಚ್ ಜನತಾ ಪಕ್ಷದ (Cockroach Janata Party) ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಬೆಂಬಲಿಸಿ ಸೋನಮ್ ವಾಂಗ್ಚುಕ್ (Sonam Wangchuk) ಅವರು 26 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದೀಗ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಬಳಿಕ ಅವರು ಮೊದಲ ಪ್ರತಿಕ್ರಿಯೆ ನೀಡಿ, ಇದು ಪ್ರಜಾಪ್ರಭುತ್ವದ ವಿಜಯ ಎಂದು ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸ್ವಾಗತಿಸಿದ ಸೋನಮ್ ವಾಂಗ್ಚುಕ್, ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ನಡೆದ ರಾಜಕೀಯ ಚಳುವಳಿಯನ್ನು ಶ್ಲಾಘಿಸಿದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಶಾಂತಿಯುತ, ಜನಸಾಮಾನ್ಯರ ಹೋರಾಟಕ್ಕೆ ಸಂದ ಗೆಲುವು ಎಂದು ಹೇಳಿದರು.
ವಿದ್ಯಾರ್ಥಿ ನಾಯಕನಿಂದ ವಿವಾದಿತ ಸಚಿವನವರೆಗೆ; ಧರ್ಮೇಂದ್ರ ಪ್ರಧಾನ್ ರಾಜಕೀಯ ಜರ್ನಿ ಇಲ್ಲಿದೆ
ಇದು ಶಾಂತಿ, ತಾಳ್ಮೆ ಮತ್ತು ಪರಿಶ್ರಮದ ಗೆಲುವು. ಭಯವನ್ನು ತೊಡೆದುಹಾಕಿ ರಾಷ್ಟ್ರದ ಪ್ರತಿಯೊಂದು ಮೂಲೆಯಿಂದಲೂ ಎದ್ದು ನಿಂತು ಹೋರಾಡಿದ ನಾಗರಿಕರಿಗೆ ಧನ್ಯವಾದಗಳು. ಹೊಣೆಗಾರಿಕೆಯಿಂದ ಈಗ ದೇಶ ಸುಧಾರಣೆಗಳತ್ತ ಸಾಗುತ್ತಿದೆ ಎಂದು ತಿಳಿಸಿದರು.
IT'S A VICTORY OF DEMOCRACY
— Sonam Wangchuk (@Wangchuk66) July 25, 2026
direct democracy... straight from the streets.
It's a victory of peace, patience & persévérance.
Congratulations CJP, Gen Z of the nation and thank you all citizens for shedding fear and the fear of fear and rising up from every corner of the nation.… pic.twitter.com/rSLOfvba2R
ರಾಜೀನಾಮೆಯ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಭಾರತದ ಯುವಕರನ್ನು ಉದ್ದೇಶಿಸಿ ಬರೆದ ಎರಡು ಪುಟಗಳ ಭಾವನಾತ್ಮಕ ಪತ್ರದಲ್ಲಿ, ವಿದ್ಯಾರ್ಥಿಗಳ ಹಿತಾಸಕ್ತಿ ಮುಖ್ಯವಾಗಿದೆ. ಅವರ ಭವಿಷ್ಯವು ಕಾನೂನು ವಿವಾದಗಳು ಮತ್ತು ಆಡಳಿತಾತ್ಮಕ ಅನಿಶ್ಚಿತತೆಯಲ್ಲಿ ಸಿಲುಕಿಕೊಳ್ಳದಿರಲು ತಾನು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಕೇಂದ್ರವು ನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೇಲೆ ಇರಿಸಿರುವ ನಂಬಿಕೆಗೆ ಧನ್ಯವಾದಗಳು. ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ತಮ್ಮ ಜೀವಮಾನದ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಾಗ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡವು. ಹೀಗಾಗಿ ಈ ಕುರಿತು ಕೇಂದ್ರ ಸರ್ಕಾರ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು. ಅಲ್ಲದೇ ಜೂನ್ 21 ರಂದು ಮರು ಪರೀಕ್ಷೆಯನ್ನು ನಡೆಸಿದ್ದು, 20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಹಾಜರಾಗಿದ್ದರು. ಜುಲೈ 16 ರಂದು ಮರುಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದರೂ ವಿದ್ಯಾರ್ಥಿಗಳ ಪ್ರತಿಭಟನೆ ಕಡಿಮೆಯಾಗಲಿಲ್ಲ.
ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ರಾಷ್ಟ್ರವ್ಯಾಪಿ ವ್ಯಾಪಿಸಿದ್ದು ಇದಕ್ಕೆ ಬೆಂಬಲವಾಗಿ ಸಾಮಾಜಿಕ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಕೂಡ ನಿಂತರು. ಅವರು ಉಪವಾಸ ಸತ್ಯಾಗ್ರಹವನ್ನು ನಡೆಸಿ ಸರ್ಕಾರ ಭರವಸೆ ನೀಡುವವರೆಗೂ ಪಟ್ಟು ಹಿಡಿದು ಕುಳಿತರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಜೆಪಿ ಸಂಭ್ರಮಾಚರಣೆ; ದೀಪ್ಕೆ ಹೇಳಿದ್ದೇನು?
ಒಂದೆಡೆ ಅವರ ಆರೋಗ್ಯದ ಕಳವಳ ಮತ್ತೊಂದೆಡೆ ಹಿಂಸಾತ್ಮಕ ರೂಪ ತಳೆದ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಅಂತಿಮವಾಗಿ ಗುರುವಾರ ಕೇಂದ್ರ ಸರ್ಕಾರ ಸೋನಮ್ ವಾಂಗ್ಚುಕ್ ಅವರ ಮೂಲಕ ವಿದ್ಯಾರ್ಥಿಗಳಿಗೆ ಭರವಸೆ ನೀಡಿತು. ಅಲ್ಲದೇ ಈ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಯನ್ನಿಡಲು ಪ್ರಾರಂಭಿಸಿದೆ ಇದೀಗ ಕೇಂದ್ರ ಶಿಕ್ಷಣ ಸಚಿವ ಪ್ರಧಾನ್ ಅವರ ರಾಜೀನಾಮೆ ಈ ನಿಟ್ಟಿನಲ್ಲಿ ಹೋರಾಟಗಾರರಿಗೆ ಸಿಕ್ಕಿರುವ ಒಂದು ಐತಿಹಾಸಿಕ ಗೆಲುವು ಎನ್ನಲಾಗುತ್ತಿದೆ.