ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

9 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ ತೈಲ ಕಂಪನಿಗಳು; ಕಾರಣ ಇಲ್ಲಿದೆ

ಮಧ್ಯಪ್ರಾಚ್ಯ ಯುದ್ಧ ಮತ್ತು ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರಗಳನ್ನು ಕೇವಲ ಒಂಬತ್ತು ದಿನಗಳಲ್ಲಿ ಮೂರನೇ ಬಾರಿ ಹೆಚ್ಚಿಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿನ ಅಡಚಣೆಗಳಿಂದ ತೈಲ ಆಮದು ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದರ ನೇರ ಹೊರೆ ಇದೀಗ ಗ್ರಾಹಕರ ಮೇಲೇ ಬೀಳುತ್ತಿದೆ.

9 ದಿನಗಳಲ್ಲಿ ಮೂರನೇ ಬಾರಿ ಪೆಟ್ರೋಲ್-ಡೀಸೆಲ್ ದರ ಏರಿಕೆ

ಇಂಧನ ದರ ಏರಿಕೆ -

Profile
Sushmitha Jain May 23, 2026 2:51 PM

ನವದೆಹಲಿ: ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಮಾರುಕಟ್ಟೆ (International Oil and Gas Market)ಯಲ್ಲಿನ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸಿದ್ದರಿಂದ, ಕೇವಲ ಒಂಬತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ದರಗಳನ್ನು ಹೆಚ್ಚಿಸಲಾಗಿದೆ. ಹಂತ ಹಂತವಾಗಿ ಬೆಲೆ ಹೆಚ್ಚಿಸುವ ಕಾರ್ಯತಂತ್ರದ ಭಾಗವಾಗಿ, ಶನಿವಾರದಂದು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ (CNG) ಬೆಲೆಗಳನ್ನು ಮತ್ತೊಮ್ಮೆ ಏರಿಕೆ ಮಾಡಲಾಗಿದೆ.

ಬೆಲೆ ಏರಿಕೆಯ ಬಿಸಿ

ಕಳೆದ ಒಂಬತ್ತು ದಿನಗಳಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77 ರೂಪಾಯಿಯಿಂದ 99.51 ರೂಪಾಯಿಗೆ ತಲುಪಿದೆ. ಇದು ಲೀಟರ್‌ಗೆ 4.74 ರೂಪಾಯಿ ಅಥವಾ ಶೇಕಡಾ 5 ರಷ್ಟು ಹೆಚ್ಚಳವಾಗಿದೆ. ಇತ್ತ ಡೀಸೆಲ್ ಬೆಲೆ ಲೀಟರ್‌ಗೆ 87.67 ರೂಪಾಯಿಯಿಂದ 92.49 ರೂಪಾಯಿಗೆ ಏರಿಕೆಯಾಗಿದ್ದು, ಲೀಟರ್‌ಗೆ 4.82 ರೂಪಾಯಿ ಅಥವಾ ಶೇಕಡಾ 5.49 ರಷ್ಟು ತುಟ್ಟಿಯಾಗಿದೆ. ಮೇ 15 ರಂದು ದೆಹಲಿಯಲ್ಲಿ ಬೆಲೆಗಳು 3 ರೂಪಾಯಿ ಹೆಚ್ಚಾಗಿದ್ದವು. ನಂತರ ಮೇ 19 ರಂದು ಪೆಟ್ರೋಲ್ 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿತು. ಇದೀಗ ಮೇ 23 ರಂದು ಮತ್ತೆ ಪೆಟ್ರೋಲ್ 87 ಪೈಸೆ ಹಾಗೂ ಡೀಸೆಲ್ 91 ಪೈಸೆ ದುಬಾರಿಯಾಗಿದೆ.

ಮಧ್ಯಪ್ರಾಚ್ಯ ಯುದ್ಧದ ತೀವ್ರ ಹೊಡೆತ

ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧವು ಭಾರತದ ತೈಲ ಮತ್ತು ಅನಿಲ ಆರ್ಥಿಕತೆಯ ಮೇಲೆ ಕಪ್ಪು ನೆರಳು ಬೀರಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ನೌಕೆಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಭಾರತದ ಶೇಕಡಾ 40 ರಷ್ಟು ಕಚ್ಚಾ ತೈಲ, ಶೇಕಡಾ 50 ರಷ್ಟು ಎಲ್‌ಎನ್‌ಜಿ ಮತ್ತು ಶೇಕಡಾ 90 ರಷ್ಟು ಎಲ್‌ಪಿಜಿ ಆಮದಿನ ಮೇಲೆ ತೀವ್ರ ಪರಿಣಾಮ ಬೀರಿದೆ.

ಇಂಧನ ದರ ಹೆಚ್ಚಳ; ಸುಮಾರು 400 ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲು ಮುಂದಾದ ಏರ್ ಇಂಡಿಯಾ

ಬೆಲೆಗಳನ್ನು ಮೂರು ಬಾರಿ ಹೆಚ್ಚಿಸಿದ ಹೊರತಾಗಿಯೂ, ತೈಲ ಕಂಪನಿಗಳ ನಷ್ಟ ಇನ್ನು ಮುಂದುವರಿದಿದೆ. ಪೆಟ್ರೋಲಿಯಂ ಯೋಜನಾ ಮತ್ತು ವಿಶ್ಲೇಷಣಾ ವಿಭಾಗದ (ಪಿಪಿಎಸಿ) ವರದಿಯ ಪ್ರಕಾರ, ಯುದ್ಧ ಆರಂಭವಾಗುವ ಮುನ್ನ ಫೆಬ್ರವರಿ 2026 ರಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 69.01 ಡಾಲರ್ ಇತ್ತು. ಆದರೆ ಮೇ 21, 2026 ರ ವೇಳೆಗೆ ಇದು 109.31 ಡಾಲರ್‌ಗೆ ತಲುಪಿದೆ. ಅಂದರೆ ಕಚ್ಚಾ ತೈಲದ ಸರಾಸರಿ ಬೆಲೆ ಬ್ಯಾರೆಲ್‌ಗೆ 40.3 ಡಾಲರ್ (ಶೇಕಡಾ 58.39) ನಷ್ಟು ಭಾರೀ ಜಿಗಿತ ಕಂಡಿದೆ.

ಕಂಪನಿಗಳ ಮೇಲಿನ ಆರ್ಥಿಕ ಹೊರೆ

ಭಾರತವು ತನ್ನ ಅಗತ್ಯದ ಶೇಕಡಾ 85 ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಅಮೆರಿಕ-ಇರಾನ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಭಾರತದ ಒಟ್ಟು ಆಮದು ವೆಚ್ಚ ಶೇ.60ರಷ್ಟು ಹೆಚ್ಚಾಗಿದೆ. ತೈಲ ಕಂಪನಿಗಳ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಮಾ.27, 2026ರಂದು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ. ಕಡಿತಗೊಳಿಸಿ ತನ್ನ ಆದಾಯವನ್ನು ತ್ಯಾಗ ಮಾಡಿದೆ. ಆದರೆ, ರಾಜ್ಯ ಸರ್ಕಾರಗಳು ಈ ಬಿಕ್ಕಟ್ಟಿನ ಸಮಯದಲ್ಲೂ ತಮ್ಮ ವ್ಯಾಟ್ (VAT) ಅಥವಾ ಮಾರಾಟ ತೆರಿಗೆಯನ್ನು ಕಡಿತಗೊಳಿಸಲು ಮುಂದಾಗಿಲ್ಲ.