ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ದಾಖಲಿಸುವ ಹಕ್ಕು ಸರ್ಕಾರಕ್ಕಿದೆ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಕುರಿತು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದೆ. ಸೋನಮ್ ವಾಂಗ್‌ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಹಕ್ಕು ಸರ್ಕಾರಕ್ಕಿದೆ ಎಂದು ಹೇಳಿದೆ.
ಸಂಗ್ರಹ ಚಿತ್ರ -
ನವದೆಹಲಿ: ಹವಾಮಾನ ಕಾರ್ಯಕರ್ತ, ಶಿಕ್ಷಕ ಮತ್ತು ಸಾಮಾಜಿಕ ಹೋರಾಟಗಾರ (Activist) ಸೋನಮ್ ವಾಂಗ್‌ಚುಕ್ (Sonam Wangchuk) ಅವರನ್ನು ಆಸ್ಪತ್ರೆಗೆ ದಾಖಲಿಸುವ ಹಕ್ಕು ಸರ್ಕಾರಕ್ಕಿದೆ ಎಂದು ದೆಹಲಿ ಹೈಕೋರ್ಟ್ (Delhi high court) ಹೇಳಿದೆ. ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಶನಿವಾರ ಏಕಾಏಕಿ ಪೊಲೀಸರು ಬಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ವಾಂಗ್‌ಚುಕ್ ಅವರನ್ನು ಸ್ಥಳಾಂತರಿಸುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದೆ.
ನಿರಂತರ ಉಪವಾಸದಿಂದಾಗಿ ಅವರ ಆರೋಗ್ಯ ಹದಗೆಡುತ್ತಿರುವುದರಿಂದ ಸರ್ಕಾರದ ಕ್ರಮವು ಸರಿಯಲ್ಲ ಎಂದು ಹೇಳಲಾಗುವುದಿಲ್ಲ ಎಂದಿರುವ ನ್ಯಾಯಾಲಯ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ ಎನ್ನುವ ಆರೋಪಗಳನ್ನು ತಿರಸ್ಕರಿಸಿದ್ದು, ಅವರು ಸ್ವತಂತ್ರ ನಾಗರಿಕರಾಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಅವರ ಒಪ್ಪಿಗೆ ಮೇರೆಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದೆ.
ಆಸ್ಪತ್ರೆಯಲ್ಲಿ ಅಕ್ರಮವಾಗಿ ಸೋನಮ್ ವಾಂಗ್‌ಚುಕ್ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಗೀತಾಂಜಲಿ
ಗೀತಾಂಜಲಿ ಅವರು ವಾಂಗ್‌ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಮೇದಾಂತಕ್ಕೆ ವರ್ಗಾಯಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ವೇಳೆ ಅವರು ತಮ್ಮ ಆಯ್ಕೆಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲು ಅವಕಾಶ ನೀಡಬೇಕು ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ, ಪೊಲೀಸ್ ಮತ್ತು ಆಸ್ಪತ್ರೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ ಮೂರು ದಿನಗಳಲ್ಲಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಸ್ಥಿತಿಯ ವರದಿ ಸಲ್ಲಿಸುವಂತೆ ನಿರ್ದೇಶನವನ್ನು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ವಿಚಾರಣೆ ಗುರುವಾರ ನಡೆಸುವುದಾಗಿ ತಿಳಿಸಿದೆ.
ನ್ಯಾಯಾಲಯವು ಭಾನುವಾರ ಎರಡೂ ಕಡೆಯ ವಾದಗಳನ್ನು ಆಲಿಸಿದ್ದು, ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್‌ನ ತುರ್ತು ವೈದ್ಯಕೀಯ ವಿಭಾಗದ ವೈದ್ಯರು ಕೂಡ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 17-18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ ಚುಕ್ ಅವರ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ ಜುಲೈ 16 ರಂದು ವಿಭಾಗೀಯ ಪೀಠವು ಅವರನ್ನು ಸ್ಥಳಾಂತರಿಸಲು ಆದೇಶಿಸಿತ್ತು. ಅವರ ರಕ್ತದಲ್ಲಿನ ಸಕ್ಕರೆ ಮತ್ತು ಪೊಟ್ಯಾಸಿಯಮ್ ಮಟ್ಟಗಳು ಕಡಿಮೆಯಾಗಿರುವುದನ್ನು ನ್ಯಾಯಾಲಯ ಗಮನಿಸಿರುವುದಾಗಿ ತಿಳಿಸಿದೆ.
ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು. ಅದನ್ನು ರಕ್ಷಿಸಬೇಕಾಗಿದೆ ಎಂಬ ಸರ್ಕಾರದ ವಾದವನ್ನು ಗಮನಿಸಿರುವ ನ್ಯಾಯಾಲಯ, ಅವರನ್ನು ಯಾವುದೇ ರೀತಿಯಲ್ಲಿ ಬಂಧನದಲ್ಲಿರಿಸಿಲ್ಲ ಎಂದು ತಿಳಿಸಿದೆ.
ವಾಂಗ್‌ಚುಕ್ ಅವರ ಪರ ವಕೀಲರಾದ ಕಪಿಲ್ ಸಿಬಲ್ ಅವರು ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲದೆ ನಾಗರಿಕನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲು ಒತ್ತಾಯಿಸಬಹುದೇ ಎಂದು ನ್ಯಾಯಾಲಯವನ್ನು ಪ್ರಶ್ನಿಸಿದರು. ಅಲ್ಲದೇ ಅವರಿಗೆ ತಮ್ಮ ವೈದ್ಯರು ಅಥವಾ ತಾವು ಬಯಸುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಕಾಶವನ್ನು ನೀಡಬೇಕು ಎಂದು ವಾದಿಸಿದರು.
ವಾಂಗ್‌ಚುಕ್ ಬಂಧನದಲ್ಲಿಲ್ಲ ಎಂದು ಹೇಳಿದ ನ್ಯಾಯಾಲಯ ಇದು ಅವರನ್ನು ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದೆ. ಸಫ್ದರ್ಜಂಗ್ ಆಸ್ಪತ್ರೆ ವೈದ್ಯರು ಅವರ ಒಪ್ಪಿಗೆ ಪಡೆದೇ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ಇಲ್ಲಿ ಅವರ ವಿರುದ್ಧ ಬಲಪ್ರಯೋಗ ಮಾಡಲಾಗುತ್ತಿದೆ ಎಂದು ಹೇಳಲಾಗುವುದಿಲ್ಲ ಎಂದು ತಿಳಿಸಿದೆ. .
ವಾಂಗ್ ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಯಾವುದೇ ಸಮಯದಲ್ಲಿ ಬೇಕಾದರೂ ಅವರನ್ನು ಭೇಟಿ ಮಾಡಬಹುದು. ಇತರ ಕುಟುಂಬ ಸದಸ್ಯರು ಕೂಡ ಅವರನ್ನು ಭೇಟಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಅಗತ್ಯವಿರುವ ಯಾವುದೇ ವೈದ್ಯಕೀಯ ಹಸ್ತಕ್ಷೇಪದ ಕುರಿತಾಗಿ ಆಡಳಿತದೊಂದಿಗೆ ಸಹಕರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ವಾಂಗ್‌ಚುಕ್ ಅವರ ಮೇಲೆ ಯಾವುದೇ ಒತ್ತಡ ಹೇರುವಂತಿಲ್ಲ. ಅವರು ಕೂಡ ವೈದ್ಯರೊಂದಿಗೆ ಸಹಕರಿಸಬೇಕು ಎಂದು ತಿಳಿಸಿದೆ.
ವಾಂಗ್‌ಚುಕ್ ಅವರ ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿ ಅಂತಿಮ ನಿರ್ಧಾರವನ್ನು ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತದೆ. ಅವರು ವೈದ್ಯಕೀಯ ಶಿಷ್ಟಾಚಾರದ ಪ್ರಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ವೈದ್ಯಕೀಯ ವರದಿಗಳನ್ನು ವಾಂಗ್‌ಚುಕ್ ಅವರ ಕುಟುಂಬದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಸಹಾಯಕ ಮಹಾನಿರ್ದೇಶಕರು ನ್ಯಾಯಾಲಯಕ್ಕೆ ತಿಳಿಸಿದರು.
"ನೀನು ಕಪ್ಪಗಿದ್ದೀಯಾ, ನಿನ್ನ ಬಣ್ಣವೇ ಸರಿ ಇಲ್ಲ"; ಸಹಪಾಠಿ ಹೇಳಿಕೆಗೆ ಮನನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಸರ್ಕಾರ, ಪೊಲೀಸ್ ಮತ್ತು ಆಸ್ಪತ್ರೆ ಅಧಿಕಾರಿಗಳು ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಮೂರು ದಿನಗಳಲ್ಲಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.