ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆ, ಭೂಕುಸಿತ: 8 ಮಂದಿ ಸಾವು

landslides in Nagaland: ನಾಗಾಲ್ಯಾಂಡ್‌ನ ಮಾನ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿ ಒಟ್ಟು ಎಂಟು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತದಿಂದ ಹಲವು ಮನೆಗಳು ಕೊಚ್ಚಿ ಹೋಗಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದಾದ ಜನರನ್ನು ರಕ್ಷಣಾ ಕಾರ್ಯಕರ್ತರು ಹುಡುಕುತ್ತಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆ; 8 ಮಂದಿ ಸಾವು

ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದೆ ಭೂಕುಸಿತ -

Priyanka P
Priyanka P Jul 19, 2026 8:16 PM

ಕೊಹಿಮಾ, ಜು. 19: ನಾಗಾಲ್ಯಾಂಡ್‌ನ (Nagaland) ಮಾನ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ (landslides) ಸಂಭವಿಸಿದ್ದು, ಮಕ್ಕಳು ಸೇರಿ ಎಂಟು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಈ ಪ್ರದೇಶದಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಕನಿಷ್ಠ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ʼʼಘಟನೆಯಲ್ಲಿ ಎಂಟು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಆ ಪ್ರದೇಶದಲ್ಲಿ ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆʼʼ ಎಂದು ಉಪ ಆಯುಕ್ತ ವೆನ್ನೈ ಕೊನ್ಯಾಕ್ ಮಾಹಿತಿ ನೀಡಿದ್ದಾರೆ. ಭೂಕುಸಿತದಲ್ಲಿ ಸುಮಾರು 10-15 ಮನೆಗಳ ಸಮೂಹವು ಹಾನಿಗೊಳಗಾಗಿದ್ದು, ನಾಲ್ವರು ಮಹಿಳೆಯರು ಸೇರಿ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.

ವೈರಲ್‌ ವಿಡಿಯೊ ಇಲ್ಲಿದೆ:



ನಿರಂತರ ಮಳೆ, ಭೂಕುಸಿತಗಳು ಮತ್ತು ಕಠಿಣ ಭೂಪ್ರದೇಶದ ಹೊರತಾಗಿಯೂ ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ನಾಗಾಲ್ಯಾಂಡ್ ಪೊಲೀಸರ ರಕ್ಷಣಾ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಭೂಕುಸಿತದಿಂದ ಹಲವು ಮನೆಗಳು ಕೊಚ್ಚಿ ಹೋಗಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದಾದವರನ್ನು ರಕ್ಷಣಾ ಕಾರ್ಯಕರ್ತರು ಹುಡುಕುತ್ತಿದ್ದಾರೆ. ಭೂಕುಸಿತದ ನಂತರ ಆ ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಸವಾಲಿನಿಂದ ಕೂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಯನಾಡು ಭೂಕುಸಿತ: ಮತ್ತೆ ಮೂರು ಶವ ಪತ್ತೆ, ಮೃತರ ಸಂಖ್ಯೆ 6ಕ್ಕೆ ಏರಿಕೆ

ಜಲಾವೃತ

ಪಟ್ಟಣದ ಹಲವು ಭಾಗಗಳು ಸಹ ಜಲಾವೃತಗೊಂಡಿವೆ. ಇತ್ತ ಗಂಟೆಗಳ ಕಾಲ ಸುರಿದ ಭಾರಿ ಮಳೆಯ ನಂತರ ಭೂಕುಸಿತದಿಂದಾಗಿ ಪ್ರಮುಖ ಮಾರ್ಗಗಳು ಮುಚ್ಚಿಹೋಗಿವೆ. ನಿರಂತರ ಮಳೆ, ಹೊಸ ಭೂಕುಸಿತಗಳು ಮತ್ತು ವೇಗವಾಗಿ ಹರಿಯುವ ನೀರು ರಕ್ಷಣಾ ತಂಡಗಳಿಗೆ ಸವಾಲು ಒಡ್ಡಿದೆ. ಕಠಿಣ ಭೂಪ್ರದೇಶವು ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ನಿಧಾನಗೊಳಿಸಿದೆ.

ಭಾನುವಾರ (ಜು. 19) ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ ಎಂದು ನಾಗಾಲ್ಯಾಂಡ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಂಟಿ ಸಿಇಒ ಜಾನಿ ರುವಾಂಗ್‌ಮೇಯ್ ಹೇಳಿದ್ದಾರೆ. ಬೆಟ್ಟದ ಇಳಿಜಾರುಗಳಲ್ಲಿ ಉಂಟಾದ ಭೂಕುಸಿತಗಳು ಪ್ರಮುಖ ರಸ್ತೆಗಳನ್ನು ಮುಚ್ಚಿ ಹಾಕಿವೆ. ಇವು ಹಲವು ಪ್ರದೇಶಗಳಲ್ಲಿ ಸಂಚಾರವನ್ನು ಅಸ್ತವ್ಯಸ್ತಗೊಳಿಸಿವೆ ಎಂದು ಅವರು ವಿವರಿಸಿದ್ದಾರೆ.

ಭೂಕುಸಿತದ ದುರಂತದ ಬಗ್ಗೆ ನಾಗಾಲ್ಯಾಂಡ್ ಸರ್ಕಾರ ತೀವ್ರ ದುಃಖ ವ್ಯಕ್ತಪಡಿಸಿದೆ. ರಾಜ್ಯದ ಹಲವು ಭಾಗಗಳ ಮೇಲೆ ಪರಿಣಾಮ ಬೀರುತ್ತಿರುವ ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಮಾನ್ ಜಿಲ್ಲೆಯ ಹೊರತಾಗಿ, ಮೊಕೊಕ್ಚುಂಗ್ ಜಿಲ್ಲೆಯ ತುಲಿ ಉಪವಿಭಾಗ ಮತ್ತು ಇತರ ಪೀಡಿತ ಪ್ರದೇಶಗಳಲ್ಲಿ ಭೂಕುಸಿತಗಳು, ಹಠಾತ್ ಪ್ರವಾಹಗಳು, ರಸ್ತೆ ತಡೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯ ಮತ್ತು ಖಾಸಗಿ ಆಸ್ತಿಗೆ ಹಾನಿ ಸೇರಿ ತೀವ್ರ ಪರಿಣಾಮ ಬೀರಿರುವುದು ಕಂಡು ಬಂದಿದೆ.

ಪರಿಹಾರ ಘೋಷಣೆ

ಮುಖ್ಯಮಂತ್ರಿ ನೀಫಿಯು ರಿಯೊ ಮೃತರ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ 4 ಲಕ್ಷ ರುಪಾಯಿ ಮತ್ತು ಗಾಯಾಳುಗಳಿಗೆ 74,000 ರುಪಾಯಿ ಘೋಷಿಸಿದ್ದಾರೆ. ಸರ್ಕಾರವು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಎಚ್ಚರಿಕೆ ನೀಡುವಂತೆ ನಿರ್ದೇಶನ ನೀಡಿದೆ. ಸಾರ್ವಜನಿಕರು ಎಚ್ಚರವಾಗಿರಲು, ದುರ್ಬಲ ಇಳಿಜಾರುಗಳು, ನದಿ ದಂಡೆಗಳು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ.