"ಗರ್ಭಪಾತದ ನಂತರ ದರ್ಗಾಗೆ ಭೇಟಿ ನೀಡಲು ಹೇಳಿದ”; TCS ಮತಾಂತರ ಜಾಲದ ಕರಾಳತೆ ಬಿಚ್ಚಿಟ್ಟ ಮತ್ತೋರ್ವ ಸಂತ್ರಸ್ತೆ
TCS assault case: ಟಿಸಿಎಸ್ನ ಆರನೇ ಸಂತ್ರಸ್ತೆಯಾಗಿರುವ ಹಿರಿಯ ಉದ್ಯೋಗಿನಿಯೊಬ್ಬರು, ಮೇಲ್ದರ್ಜೆಯ ಅಧಿಕಾರಿಗಳು ದೂರುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ, ಆರೋಪಿಗಳಲ್ಲಿ ಒಬ್ಬರು ಅವರ ಗರ್ಭಪಾತದ ಕುರಿತು ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಎಂಟು ಉದ್ಯೋಗಿಗಳನ್ನು ಬಂಧಿಸಲಾಗಿದೆ. -
ನಾಸಿಕ್, ಏ.23: ಟಿಸಿಎಸ್‌ಗೆ ಸಂಬಂಧಿಸಿದ ಬಿಪಿಒ ಸಂಸ್ಥೆಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ (TCS assault case) ಹಾಗೂ ಬಲವಂತದ ಧಾರ್ಮಿಕ ಮತಾಂತರ ಆರೋಪ ಪ್ರಕರಣದಲ್ಲಿ (Religion conversion case) ಹೊಸ ಬೆಳವಣಿಗೆ ಕಂಡುಬಂದಿದೆ. ಆರನೇ ಸಂತ್ರಸ್ತೆಯಾಗಿರುವ ಹಿರಿಯ ಮಹಿಳಾ ಉದ್ಯೋಗಿಯೊಬ್ಬರು, ಮೇಲ್ದರ್ಜೆಯ ಅಧಿಕಾರಿಗಳು ದೂರುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ, ಆರೋಪಿಗಳಲ್ಲಿ ಒಬ್ಬರು ಅವರ ಗರ್ಭಪಾತದ ಕುರಿತು ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ಮತ್ತೊಬ್ಬರು ಮೀಟಿಂಗ್ ನಡೆಯುತ್ತಿದ್ದ ವೇಳೆ ಅಸಭ್ಯವಾಗಿ ನೋಡುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ.
ಕಳೆದ 11 ವರ್ಷಗಳಿಂದ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತ್ರಸ್ತೆಯು ಘಟನೆ ಬಗ್ಗೆ ವಿವರಿಸಿದ್ದಾರೆ. 2026ರ ಫೆಬ್ರವರಿಯಲ್ಲಿ, ಆರೋಪಿ ತೌಸಿಫ್ ಅತ್ತರ್ ತನ್ನ ಬಳಿಗೆ ಬಂದು ತನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಎಂದು ಹೇಳಿದರು. ಇತ್ತೀಚೆಗೆ ಗರ್ಭಪಾತವಾದ ನಂತರ ತನಗೆ ಅನಾರೋಗ್ಯವಾಗಿದೆ ಎಂದು ಆಕೆ ತಿಳಿಸಿದಾಗ, ಆತ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದನೆಂದು ಆರೋಪಿಸಲಾಗಿದೆ. ಆರೋಗ್ಯಕರ ಹೆರಿಗೆಗೆ ಅಜ್ಮೀರ್‌ನಲ್ಲಿರುವ ಧರ್ಮಗುರುವನ್ನು ಭೇಟಿ ಮಾಡುವಂತೆ ಸೂಚಿಸಿದ್ದ ಎಂದು ಅವರು ಹೇಳಿದ್ದಾರೆ.
ತನಗೆ ಮಕ್ಕಳಿಲ್ಲ ಎಂದು ತಿಳಿದಿದ್ದರೂ, ಅಜ್ಮೀರ್‌ನಲ್ಲಿರುವ ಮೌಲ್ವಿಯೊಬ್ಬರ ಸಂಖ್ಯೆಯನ್ನು ನೀಡುತ್ತೇನೆ. ನೀವು ಅಲ್ಲಿಗೆ ಹೋದರೆ, ಮಗು ಪಡೆಯಬಹುದು. ದರ್ಗಾಗೆ ಭೇಟಿ ನೀಡಿ, ಖಂಡಿತ ತಾನು ಹೇಳಿದಂತೆ ಮಗುವಾಗುತ್ತದೆ ಎಂದು ಆತ ತಿಳಿಸಿದ್ದಾಗಿ ಸಂತ್ರಸ್ತೆ ವಿವರಿಸಿದ್ದಾರೆ. ಅತ್ತರ್ ತನ್ನ ವೈವಾಹಿಕ ಜೀವನ ಮತ್ತು ಮಕ್ಕಳು ಇಲ್ಲದಿರುವ ಬಗ್ಗೆ ಪದೇ ಪದೇ ಕಾಮೆಂಟ್ ಮಾಡುತ್ತಿದ್ದರು. ಇದು ತನಗೆ ತೀವ್ರ ಮಾನಸಿಕ ಯಾತನೆಯನ್ನುಂಟುಮಾಡಿತು ಎಂದು ಅವರು ಆರೋಪಿಸಿದ್ದಾರೆ.
ಹಿಂದೂ ದೇವರ ಅವಹೇಳನ, ಮೈಮುಟ್ಟಿ ಕಿರುಕುಳ; ಬಗೆದಷ್ಟೂ ಹೊರ ಬೀಳುತ್ತಿದೆ ನಾಸಿಕ್‌ನ ಟಿಸಿಎಸ್ ಕಂಪನಿಯ ಕರ್ಮಕಾಂಡ
ಆರೋಪಿಗಳಾದ ಡ್ಯಾನಿಶ್ ಶೇಖ್, ತೌಸಿಫ್, ರಜಾ ಮೆಮನ್, ಶಫಿ ಶೇಖ್, ಶಾರುಖ್ ಖುರೇಷಿ ಮತ್ತು ಆಸಿಫ್ ಅನ್ಸಾರಿ ಅವರನ್ನು ತಾನು ವೈಯಕ್ತಿಕವಾಗಿ ತಿಳಿದಿದ್ದೆ. ಅವರಿಂದಲೂ ಅನುಚಿತ ವರ್ತನೆಗೆ ಒಳಗಾಗಿದ್ದೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ. ಅತ್ತರ್ ತನ್ನ ಎದೆಯನ್ನೇ ದಿಟ್ಟಿಸಿ ನೋಡುತ್ತಿದ್ದ, ಅನುಚಿತವಾಗಿ ವರ್ತಿಸಿದ್ದಲ್ಲದೆ, ವ್ಯಂಗ್ಯ ನಗೆ ಬೀರುತ್ತಿದ್ದ ಎಂದು ಅವರು ದೂರಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಆ ಗುಂಪು ಧಾರ್ಮಿಕ ನಂಬಿಕೆಗಳು ಮತ್ತು ವಿಗ್ರಹಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿದ್ದರು. ಅನುಚಿತವಾಗಿ ಮಾತನಾಡುತ್ತಿದ್ದರು. ಮಹಿಳಾ ಉದ್ಯೋಗಿಗಳೊಂದಿಗೆ ಅಶ್ಲೀಲ ವರ್ತನೆಯಲ್ಲಿ ತೊಡಗಿದರು ಎಂದು ಆರೋಪಿಸಿದರು.
“ನಮ್ಮ ಕಚೇರಿಯಲ್ಲಿರುವ ಹಲವಾರು ಮಹಿಳಾ ಉದ್ಯೋಗಿಗಳು ಶಫಿ ಶೇಖ್ ವಿರುದ್ಧ ಹಿರಿಯ ವ್ಯವಸ್ಥಾಪಕರಿಗೆ ಹಲವು ವರ್ಷಗಳಿಂದ ಮೌಖಿಕ ದೂರುಗಳನ್ನು ಸಲ್ಲಿಸಿದ್ದಾರೆ”. ಹಲವಾರು ವರ್ಷಗಳಿಂದ ಹಲವಾರು ದೂರುಗಳು ಬಂದರೂ, ಯಾವುದೇ ಪರಿಣಾಮಕಾರಿ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದರು. ಆಕೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ದಾಖಲಾಗಿರುವ ಒಟ್ಟು ಒಂಬತ್ತು ಎಫ್ಐಆರ್ಗಳಲ್ಲಿ ಇದೂ ಒಂದು.
ಟಿಸಿಎಸ್‍ನ ನಾಸಿಕ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಶೋಷಣೆ, ಬಲವಂತದ ಮತಾಂತರ ಯತ್ನ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು, ಕಿರುಕುಳ ಮತ್ತು ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿದ ಒಂಬತ್ತು ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಎಚ್ಆರ್ ಸೇರಿದಂತೆ ಎಂಟು ಉದ್ಯೋಗಿಗಳನ್ನು ಬಂಧಿಸಲಾಗಿದೆ.