ಭೀಕರ ಪ್ರವಾಹಕ್ಕೆ ಬಿಹಾರ ತತ್ತರ; ನದಿಗಳು ಅಪಾಯ ಮಟ್ಟ ಮೀರಿ ಹರಿದು 15 ಜಿಲ್ಲೆಗಳ 46 ಲಕ್ಷ ಜನರ ಜೀವನ ಅತಂತ್ರ
Bihar flood: ನೇಪಾಳದ ಬಳಿಕ ಇದೀಗ ಬಿಹಾರದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತವಾಗಿದೆ. ಸುಮಾರು 15 ಜಿಲ್ಲೆಗಳ ಮೇಲೆ ಪರಿಣಾಮ ಬೀರಿದ್ದು, 46.88 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ. ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ತುರ್ತು ರಕ್ಷಣಾ, ಪರಿಹಾರ ತಂಡಗಳನ್ನು ಅಪಾಯದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಸಂಗ್ರಹ ಚಿತ್ರ -
ಬಿಹಾರ: ನೇಪಾಳದ (Nepal) ಜಲಾನಯನ ಪ್ರದೇಶ ಸೇರಿದಂತೆ ಬಿಹಾರದಾದ್ಯಂತ (Bihar flood) ಭಾರಿ ಮಳೆಯ (Heavy rain) ಕಾರಣದಿಂದ ಪ್ರವಾಹ (floods in Bihar) ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 15 ಜಿಲ್ಲೆಗಳಲ್ಲಿ 46 ಲಕ್ಷಕ್ಕೂ ಹೆಚ್ಚು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ತುರ್ತು ರಕ್ಷಣಾ ತಂಡ, ಪರಿಹಾರ ತಂಡಗಳನ್ನು ಅಪಾಯಕಾರಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪಡಿತರ ಪೊಟ್ಟಣ, ಪಶು ಆಹಾರ, ಪಾಲಿಥೀನ್ ಹಾಳೆಗಳನ್ನು ವಿತರಿಸಲಾಗುತ್ತಿದೆ. ಜನರ ಸಂಚಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ದೋಣಿಗಳನ್ನು ಬಳಸಲಾಗುತ್ತಿದೆ.
ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆ ಹಾಗೂ ನೇಪಾಳದ ಜಲಾನಯನ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದ ನದಿ ಮತ್ತು ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಸುಮಾರು 15 ಜಿಲ್ಲೆಗಳ ಜನರು ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ಹಲವು ಪ್ರದೇಶಗಳಲ್ಲಿ ಶುಕ್ರವಾರ ನೀರಿನ ಮಟ್ಟ ಅಪಾಯಕಾರಿಯಾಗಿ ಹರಿಯುತ್ತಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಬಿಹಾರದ 15 ಜಿಲ್ಲೆಗಳ 88 ಬ್ಲಾಕ್‌ಗಳ ವ್ಯಾಪ್ತಿಯಲ್ಲಿರುವ 561 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 46.88 ಲಕ್ಷ ಜನರು ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ಪಾಟ್ನಾ, ಭೋಜ್‌ಪುರ, ಸರನ್, ವೈಶಾಲಿ, ಭಾಗಲ್ಪುರ, ಬೇಗುಸರಾಯ್, ಬಕ್ಸರ್, ಸಮಸ್ತಿಪುರ, ಮುಂಗೇರ್, ಕಟಿಹಾರ್, ಲಖಿಸರಾಯ್, ಖಗಾರಿಯಾ, ಪುರ್ನಿಯಾ, ಮಾಧೇಪುರ ಮತ್ತು ಅರಾರಿಯಾ ಜಿಲ್ಲೆಗಳಲ್ಲಿ ಭಾಗಲ್ಪುರ, ಪಾಟ್ನಾ, ಸರನ್, ವೈಶಾಲಿ, ಬೇಗುಸರಾಯ್, ಕಟಿಹಾರ್, ಪುರ್ನಿಯಾ ಮತ್ತು ಬಕ್ಸರ್ ಜಿಲ್ಲೆಗಳಲ್ಲಿ ಅಪಾಯ ಹೆಚ್ಚಿರುವುದಾಗಿ ತಿಳಿಸಿದೆ.
ಬಿಹಾರ ಹವಾಮಾನ ಸೇವಾ ಕೇಂದ್ರದ ಪ್ರಕಾರ, ರಾಜ್ಯಾದ್ಯಂತ ಸೆಪ್ಟೆಂಬರ್ ತಿಂಗಳಲ್ಲಿ ಈವರೆಗೆ 90 ಮಿ.ಮೀ. ಮಳೆಯಾಗಿದ್ದು, ಇದು ಸಾಮಾನ್ಯಕ್ಕಿಂತ ಶೇಕಡಾ 20ರಷ್ಟು ಹೆಚ್ಚಾಗಿದೆ. ಭಾಗಲ್ಪುರದ ಸುಲ್ತಾನಗಂಜ್‌ನಲ್ಲಿ ಗಂಗಾ ನದಿ ನೀರಿನ ಮಟ್ಟ ಶುಕ್ರವಾರ ಬೆಳಗ್ಗೆ 6 ಗಂಟೆಗೆ 36.62 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಇದು ಅಪಾಯದ ಮಟ್ಟಕ್ಕಿಂತ 2.12 ಮೀಟರ್ ಹೆಚ್ಚಾಗಿದ್ದು, ನೀರಿನ ಹರಿವು ಕಡಿಮೆಯಾಗುತ್ತಿದೆ ಎಂದು ಹೇಳಿದೆ.
ಪ್ರವಾಹ ಪೀಡಿತರಿಗಾಗಿ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,194 ಸಮುದಾಯ ಅಡುಗೆ ಮನೆಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ 15 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ 11,255 ಪ್ರವಾಹ ಸಂತ್ರಸ್ತರಿಗೆ ವಸತಿ, ಆಹಾರ, ವೈದ್ಯಕೀಯ ಸೇರಿದಂತೆ ಇತರ ಅಗತ್ಯ ಸೇವೆಗಳ ವ್ಯವಸ್ಥೆ ಮಾಡಲಾಗಿದೆ. ಈವರೆಗೆ ಸುಮಾರು 3.10 ಲಕ್ಷ ಪಾಲಿಥೀನ್ ಹಾಳೆಗಳು, 48,300 ಒಣ ಪಡಿತರ ಪೊಟ್ಟಣಗಳನ್ನು, 7,535 ಕ್ವಿಂಟಾಲ್ ಪಶು ಆಹಾರಗಳನ್ನು ವಿತರಿಸಲಾಗಿದೆ.
ಅಮೆರಿಕ ಮೇಲಿನ 9/11 ಭಯೋತ್ಪಾದಕ ದಾಳಿಗೆ ಇಂದು 25 ವರ್ಷ; ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿತ್ತು ಆ ಒಂದು ಘಟನೆ
ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಸಾರಿಗೆಗಾಗಿ ಒಟ್ಟು 1,922 ದೋಣಿಗಳನ್ನು ಬಳಸಲಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ವಿವಿಧ ಜಿಲ್ಲೆಗಳಲ್ಲಿ 27 ಎಸ್‌ಡಿಆರ್‌ಎಫ್ ಮತ್ತು 10 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.